Site icon Vistara News

ಅಪ್ಪ-ಅಮ್ಮ ಇಲ್ಲದ ಹಿಂದು ಬಡ ಹುಡುಗಿ ಮದುವೆಯನ್ನು ಅದ್ಧೂರಿಯಾಗಿ ಮಾಡಿಸಿದ ಮುಸ್ಲಿಂ ಸಮುದಾಯ; ಋಣ ತೀರಿಸಲಾರೆ ಎಂದ ಚಿಕ್ಕಪ್ಪ

Muslim Community Help Hindu girl to get Married

ಜೈಪುರ: ಹಿಂದು-ಮುಸ್ಲಿಂ ಜಗಳ, ಕೋಮು ಗಲಭೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ಇಲ್ಲೊಂದು ಹಿಂದು-ಮುಸ್ಲಿಂ ಸೌಹಾರ್ದತೆಗೆ ಕನ್ನಡಿ ಹಿಡಿದಂಥ ಘಟನೆ ನಡೆದಿದೆ. ರಾಜಸ್ಥಾನದ ಆಳ್ವಾರ್​ ಜಿಲ್ಲೆಯ ರಾಮಗಡ್​ ಪಟ್ಟಣದ ಮುಸ್ಲಿಂ ಸಮುದಾಯದ ಜನರು ಅನಾಥ ಹಿಂದು ಹುಡುಗಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ.

ಈ ಹುಡುಗಿ ಹೆಸರು ಆರುಶಿ. ಒಂದು ವರ್ಷದಲ್ಲಿ ಇದ್ದಾಗಲೇ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದಳು. ಬಳಿಕ ಅವಳ ತಾಯಿ ಕಡೆಯವರೇ ಆಕೆಯನ್ನು ಸಾಕಿದ್ದರು. ಆಕೆಯ ಚಿಕ್ಕಪ್ಪ ಜಯಪ್ರಕಾಶ್​ ಜನಗಿಡ್​ರದ್ದು ಬಡ ಕುಟುಂಬ. ಹಾಗಿದ್ದಾಗ್ಯೂ ಆರುಶಿಯನ್ನು ಎಂಎ ಪದವಿವರೆಗೆ ಓದಿಸಿದ್ದಾರೆ. ಬಳಿಕ ಆರುಶಿ ಮದುವೆ ಧೋಲಿ ದಬ್​ ನಿವಾಸಿ ದಾಲ್​ಚಾಂದ್​ ಎಂಬಾತನೊಂದಿಗೆ ಫಿಕ್ಸ್​ ಆಗಿತ್ತು. ಆದರೆ ಮದುವೆ ಮಾಡಲು ಹಣಕಾಸಿನ ಸಮಸ್ಯೆ ತೀವ್ರವಾಗಿತ್ತು. ಆಗ ಆ ಹಿಂದು ಕುಟುಂಬದ ಸಹಾಯಕ್ಕ ನಿಂತಿದ್ದು ಮುಸ್ಲಿಂ ಸಮುದಾಯದ ಜನರು.

ಆರುಶಿ ಮದುವೆ ನಿಗದಿಯಾಗಿದ್ದು ಮತ್ತು ಆಕೆಯ ಮದುವೆಗೆ ಆರ್ಥಿಕ ಸಮಸ್ಯೆ ಅಡ್ಡಿಯಾಗುತ್ತಿರುವ ವಿಷಯ ಅಲ್ಲಿನ ಅಂಜುಮನ್​ ಶಿಕ್ಷಣ ಸಮಿತಿ ಅಧ್ಯಕ್ಷ ಮತ್ತು ಪಂಚಾಯಿತಿ ಸಮಿತಿ ಅಧ್ಯಕ್ಷರಾಗಿರುವ ನಸ್ರು ಖಾನ್​ ಅವರಿಗೆ ಗೊತ್ತಾಯಿತು. ತಕ್ಷಣವೇ ಮುಸ್ಲಿಂ ಸಮುದಾಯದ ಜನರೆಲ್ಲ ಒಟ್ಟಾಗಿ ಆರುಶಿ ಕುಟುಂಬದ ಸಹಾಯಕ್ಕೆ ನಿಂತರು. 31 ಸಾವಿರ ರೂಪಾಯಿ ಮತ್ತು ಇತರ ಉಡುಗೊರೆಗಳನ್ನು ಕೊಟ್ಟರು. ಆಹಾರ ಸೇರಿ ಮದುವೆಯಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನೂ ಮಾಡಿದರು. ಆರುಶಿ ಮದುವೆ ಎಲ್ಲ ಸಂಪ್ರದಾಯ, ಆಚಾರದೊಂದಿಗೆ ಅದ್ಧೂರಿಯಾಗಿ ನಡೆಯಿತು.
ರಾಮಗಢ್​​ನಲ್ಲಿ ಕೂಡ ಚುನಾವಣೆಗಳು ಹಿಂದು-ಮುಸ್ಲಿಂ ವಿಭಜಿತವಾಗಿ ನಡೆಯುತ್ತವೆ. ಹಾಗಾಗಿ ಇಲ್ಲಿಯೂ ಕೋಮುವಾದ ಇದ್ದೇ ಇದೆ. ಈ ಮಧ್ಯೆಯೂ ನಾವೆಲ್ಲ ಒಟ್ಟಾಗಿರಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ. ಹಿಂದು-ಮುಸ್ಲಿಂ ಸಮುದಾಯದ ಮಧ್ಯೆ ಸೌಹಾರ್ದತೆ ಇರಬೇಕು ಎಂದು ನಾವು ಸದಾ ಬಯಸುತ್ತೇವೆ ಮತ್ತು ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ ಎಂದು ನಸ್ರು ಖಾನ್ ತಿಳಿಸಿದ್ದಾರೆ.

ಇನ್ನು ತಮ್ಮ ಮನೆ ಮಗಳ ಮದುವೆಗೆ ನೆರವಾದ ಮುಸ್ಲಿಂ ಸಮುದಾಯದ ಜನರಿಗೆ ಆರುಶಿ ಚಿಕ್ಕಪ್ಪ ಜಯಪ್ರಕಾಶ್​ ಧನ್ಯವಾದ ಸಲ್ಲಿಸಿದ್ದಾರೆ. ನಾನೆಂದೂ ಅವರ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆರುಶಿ ಕೂಡ ತಾನು ಪತಿಯ ಮನೆಗೆ ಹೋಗುವಾಗ ಮುಸ್ಲಿಂ ಸಮುದಾಯದ ಹಿರಿಯರನ್ನು ಅಪ್ಪಿಕೊಂಡು, ಅವರ ಬಳಿ ಆಶೀರ್ವಾದ ತೆಗೆದುಕೊಂಡು ಹೋಗಿದ್ದಾಳೆ. ಇದೇ ಅಲ್ಲವೇ ಸೌಹಾರ್ದತೆ?!-ಸದ್ಯದ ಮಟ್ಟಿಗೆ ಎಲ್ಲರಲ್ಲೂ ಅತ್ಯಗತ್ಯವಾಗಿ ಬೇಕಾಗಿರುವ ಸಹೋದರತ್ವ ಭಾವನೆ.

ಇದನ್ನೂ ಓದಿ: Viral News | 90 ರೂ. ಬೆಲೆಯ ಬರ್ಗರ್​​ ಪಡೆಯಲು 10 ರೂ.ಕೊಟ್ಟ ಬಾಲಕಿ; ಅಂಗಡಿಯಾತ ಮಾಡಿದ್ದೇನು?

Exit mobile version