ಗೋಕರ್ಣ: ಹಿಂದು-ಮುಸ್ಲಿಮರು ಪರಸ್ಪರ ನಂಬಿಕೆಯಿಂದ ಬದುಕಬೇಕು ಎಂದು ಹೇಳುತ್ತೇವೆ. ಆದರೆ, ಧಾರವಾಡದ ಮುಸ್ಲಿಂ ಕುಟುಂಬವೊಂದು ಹಿಂದೂ ಧಾರ್ಮಿಕ ನಂಬಿಕೆಗಳನ್ನೂ ಅಳವಡಿಸಿಕೊಂಡು ಬದುಕುತ್ತಿದೆ. ದೇವರೊಬ್ಬನೇ ನಾಮ ಹಲವು ಎಂಬಂತೆ ಬಾಳುತ್ತಿರುವ ಈ ಮುಸ್ಲಿಂ ಕುಟುಂಬ ಇತ್ತೀಚೆಗೆ ಗೋಕರ್ಣದಲ್ಲಿ (Gokarna Kshetra) ಪಿತೃ ಕಾರ್ಯವನ್ನೂ ನಡೆಸಿದೆ. ಈ ರೀತಿ ಮುಸ್ಲಿಂ ಕುಟುಂಬವೊಂದು (Muslim Family) ಗೋಕರ್ಣಕ್ಕೆ ಬಂದು ಪಿತೃ ಕಾರ್ಯ (pitr karya) ನಡೆಸಿದ್ದು ಇದೇ ಮೊದಲು ಎನ್ನಲಾಗಿದೆ.
ಅಂದ ಹಾಗೆ ಈ ರೀತಿ ಗೋಕರ್ಣದ ಶ್ರೀ ಮಹಾಬಲೇಶ್ವರನ ಸನ್ನಿಧಾನದ ಮೇಲೆ ಅಚಲ ನಂಬಿಕೆ ಇಟ್ಟು ಬಂದು ಪಿತೃ ಕಾರ್ಯ ನಡೆಸಿದ್ದು ಧಾರವಾಡದ ದಾನೇಶ್ವರಿ ನಗರದ ಒಂದು ಕುಟುಂಬ. ಧಾರವಾಡದಲ್ಲಿ ಮರದ ಕೆಲಸ ಮಾಡುವ ಕುಟುಂಬ ಧಾರವಾಡದ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಇಲ್ಲಿನ ಕೋಟಿ ತೀರ್ಥದ ಪಿತೃ ಶಾಲೆಯಲ್ಲಿ ಪಿತೃ ಕಾರ್ಯ ನಡೆಸಿದೆ.
ನಾವೇಕೆ ಇಲ್ಲಿ ಬಂದು ಪಿತೃ ಕಾರ್ಯ ನಡೆಸಿದೆವು ಎಂದು ಈ ಕುಟುಂಬದ ಮಹಿಳೆ ಶಂಸದ್ ವಿವರಿಸಿದ್ದಾರೆ. ʻʻನಾವು ಮೊದಲಿನಿಂದಲೂ ಕುಂಡಲಿ, ಜಾತಕ ಹೀಗೆ ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರು. ನಮ್ಮ ತಂದೆ ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಬೆಳೆದವರು. ತಮ್ಮನಿಗೆ ಮದುವೆ ಸಂಬಂಧ ಸರಿಯಾಗಿ ಹೆಣ್ಣು ಸಿಗದೇ ಇದ್ದಾಗ ಜ್ಯೋತಿಷಿಗಳ ಮೊರೆ ಹೋಗಿದ್ದೆವು. ಅವರು ತಿಳಿಸಿದಂತೆ ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳಿಗೆ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯ ಮಾಡಿದ್ದೇವೆʼʼ ಎಂದು ಶಂಸದ್ ವಿವರಿಸಿದ್ದಾರೆ.
ಧಾರವಾಡದ ಜ್ಯೋತಿಷಿಗಳ ಮಾರ್ಗದರ್ಶನದಂತೆ ಗೋಕರ್ಣಕ್ಕೆ ಬಂದ ಮುಸ್ಲಿಂ ಕುಟುಂಬಕ್ಕೆ ಇಲ್ಲಿ ಪಿತೃ ಕಾರ್ಯಕ್ಕೆ ಮಾರ್ಗದರ್ಶನ ಮಾಡಿದ್ದು ಕ್ಷೇತ್ರದ ಪುರೋಹಿತರಾದ ವೇದಮೂರ್ತಿ ನಾಗರಾಜ ಭಟ್ ಗುರ್ಲಿಂಗ್ ಹಾಗೂ ವೇ.ಸುಬ್ರಹಣ್ಯ ಚಿತ್ರಿಗೆಮಠ ಅವರು.
ಕೋಟಿ ತೀರ್ಥದ ಪಿತೃ ಶಾಲೆಯಲ್ಲಿ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲ ಹವನವನ್ನು ಶಾಸ್ತ್ರಬದ್ಧವಾಗಿ ಮಾಡಿದ್ದಾರೆ. ಹಿಂದೆ ತೀರಿ ಹೋದ ವ್ಯಕ್ತಿಗಳಿಗೆ ಮೋಕ್ಷ ಸಿಗದೆ ಇದ್ದಾಗ ಅವರು ಮುಂದಿನ ತಲೆಮಾರಿಗೆ, ಕುಟುಂಬಕ್ಕೆ ತೊಂದರೆ ಕೊಡುವ ಮೂಲಕ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಅಂದರೆ ಮುಸ್ಲಿಮರ ಮನೆಯಲ್ಲಿ ಹುಡುಗನಿಗೆ ಮದುವೆಯಾಗಿಲ್ಲ, ಮನಸ್ಸಿಗೆ ನೆಮ್ಮದಿ ಇಲ್ಲ ಎಂದಾದಾಗ ಜ್ಯೋತಿಷಿಗಳನ್ನು ಕೇಳಿದ್ದಾರೆ. ಅವರಿಗೆ ಮೋಕ್ಷರಾಹಿತ ಆತ್ಮದ ವಿಚಾರವನ್ನು ತಿಳಿಸಿ ಪಿತೃ ಕಾರ್ಯಕ್ಕೆ ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಪಿತೃ ಕಾರ್ಯ ಎನ್ನುವುದು ಪ್ರತಿ ವರ್ಷವೂ ಮಾಡಬೇಕು. ನಿರ್ದಿಷ್ಟ ತಿಥಿಗೆ, ಅದು ಗೊತ್ತಿಲ್ಲದಿದ್ದರೆ ಮಹಾಲಯ ಅಮಾವಾಸ್ಯೆ ಬರುವ ಪಿತೃ ಪಕ್ಷದಲ್ಲಿ ನಡೆಸಬಹುದು. ಆದರೆ, ಮೃತಪಟ್ಟವರಿಗೆ ಶ್ರಾದ್ಧ ಹಿಡಿಯಲು ಸಂಬಂಧಿಕರು ಇಲ್ಲದೆ ಇದ್ದರೆ ನಾರಾಯಣ ಬಲಿಯ ಮೂಲಕ ಸಂಪೂರ್ಣ ಶ್ರಾದ್ಧವನ್ನು ನಡೆಸಲಾಗುತ್ತದೆ. ನಾರಾಯಣ ಬಲಿ ಮಾಡಿದ ಮೇಲೆ ಮುಂದೆ ಶ್ರಾದ್ಧ ಕಾರ್ಯ ಮಾಡಬೇಕಾಗಿಲ್ಲ ಎನ್ನುವುದು ಸಂಪ್ರದಾಯ. ತ್ರಿಪಿಂಡಿ ಮತ್ತು ತಿಲ ಹೋಮ ಪಿತೃ ಕಾರ್ಯದ ಭಾಗ.
ಹಿಂದೂ ನಂಬಿಕೆ ಪಾಲನೆ ಹೊಸದೇನೂ ಅಲ್ಲ
ಗೋಕರ್ಣದಲ್ಲಿ ಗೋವಾ ಹಾಗೂ ವಿದೇಶಗಳ ಕ್ರಿಶ್ಚಿಯನ್ ಸಮುದಾಯದವರು ಹಿಂದೆ ಇಂತಹ ಪಿತೃ ಕಾರ್ಯ ನೆರವೇರಿಸಿದ ಅನೇಕ ಉದಾಹರಣೆಗಳಿವೆ. ಆದರೆ ಮುಸ್ಲಿಂ ಕುಟುಂಬವೊಂದು ಪಿತೃಕಾರ್ಯ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಆದರೆ, ಮುಸ್ಲಿಮರು ಹಿಂದೂ ನಂಬಿಕೆಗಳೊಂದಿಗೆ ಬದುಕುವುದು ಹೊಸದೇನೂ ಅಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಾಕಷ್ಟು ಮಂದಿ ಮುಸ್ಲಿಮರು ಹರಕೆ ಹೊತ್ತುಕೊಳ್ಳುತ್ತಾರೆ. ಅಲ್ಲಿ ಆಶ್ಲೇಷ ಬಲಿ, ನಾಗಪ್ರತಿಷ್ಠೆಯನ್ನು ಮಾಡುತ್ತಾರೆ. ಕರಾವಳಿಯಲ್ಲಿ ನಾಗರಪಂಚಮಿಯ ದಿನ ನಾಗನಿಗೆ ತನು ಎರೆಯುವ ಪ್ರಕ್ರಿಯೆಯಲ್ಲಿ ಹಲವಾರು ಕಡೆ ಮುಸ್ಲಿಮರೂ ಭಾಗಿಯಾಗುತ್ತಾರೆ.
ಇದನ್ನೂ ಓದಿ : Communal Harmony : ದರ್ಗಾದಲ್ಲೇ ಗಣಪತಿ ಪ್ರತಿಷ್ಠಾಪನೆ; ಘಂಟೆ ಬಡಿದು ಜೈ ಗಣೇಶ ಎಂದ ಮುಸ್ಲಿಮರು, ಎಂಥಾ ಸೌಹಾರ್ದ!