Site icon Vistara News

ಮೆಚ್ಚಿನ ಜನತೆಗೆ ಮುಗಿಲಿನಿಂದ ದರ್ಶನ ನೀಡಿದಳೇ ರಾಣಿ ಎಲಿಜಬೆತ್!

queen

ಕೆಲವೊಮ್ಮೆ ಕಾಕತಾಳೀಯ ಘಟನೆಗಳು ವಿಚಿತ್ರವಾಗಿ ಸರ್ಪ್ರೈಸ್‌ ನೀಡುತ್ತದೆ! ಇದೂ ಅಂಥದ್ದೇ ಒಂದು ಕಾಕತಾಳೀಯ ಘಟನೆ. ಬ್ರಿಟನ್‌ ರಾಣಿ ಎಲಿಜಬೆತ್‌ ೨ ಸಾವಿನ ನಂತರ ಇದೀಗ ಇಂಗ್ಲೆಂಡ್‌ ಮಂದಿಗೆ ಎಲ್ಲೆಲ್ಲೂ ರಾಣಿಯೇ ಕಾಣುತ್ತಿದ್ದಾರೆ!

ರಾಣಿಯ ಸಾವಿನ ಸುದ್ದಿ ಕೇಳಿ ಶೋಕದಲ್ಲಿ ಮುಳುಗಿದ್ದ ಮಂದಿಗೆ ರಾಣಿ ಅಚಾನಕ್‌ ಆಗಸದಿಂದ ದರ್ಶನ ನೀಡಿದ್ದಾರೆ. ಮುಗಿಲು ಮುಟ್ಟಿದ್ದ ಶೋಕಾಚರಣೆಯ ಸಂದರ್ಭ, ಮುಗಿಲಿನಿಂದಲೇ ಆಕೆ ದರ್ಶನ ನೀಡಿ ಹಲವರ ಮುಖದಲ್ಲಿ ಆಶ್ಚರ್ಯವನ್ನೂ ನಗುವನ್ನೂ ತರಿಸಿದ್ದಾಳೇನೋ ಎಂಬಂತೆ ಜನ ಅವಕ್ಕಾಗಿದ್ದಾರೆ. ದೇಶದ ಹಲವೆಡೆ ಹಲವಾರು ಮಂದಿ ರಾಣಿಯ ಸಾವಿನ ಸುದ್ದಿ ಕೇಳಿ ಗಂಟೆಗಳೊಳಗಾಗಿ ರಾಣಿಯ ಆಕೃತಿಯ ಮೋಡವನ್ನು ಆಗಸದಲ್ಲಿ ಕಂಡು ಚಕಿತರೂ ಭಾವುಕರೂ ಆಗಿದ್ದಾರೆ!

ಟೆಲ್‌ಫೋರ್ಡ್‌ನ ಎ೪೧೬೯ ರಸ್ತೆಯಲ್ಲಿ ಲೆನ್ನೆ ಬೆಥೆಲ್‌ ಎಂಬಾಕೆ ತನ್ನ ಮಗಳ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಆಕೆಯ ಮಗಳು ಲೇಸೀ ತನ್ನ ಕಾರಿನಿಂದ ಹೊರಗೆ ಇಣುಕಿ ಆಗಸ ನೋಡಿ, ʻಅಯ್ಯೋ ದೇವರೇʼ ಎಂದು ಕಿರುಚತೊಡಗಿದಳಂತೆ. ಒಡನೆಯೇ ತನ್ನ ಫೋನ್‌ ತೆಗೆದು ಹಲವಾರು ಫೋಟೋ ಕ್ಲಿಕ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾಳೆ. ಹಾಗೂ ವಿವರವನ್ನೂ ಬರೆದುಕೊಂಡಿದ್ದಾಳೆ.

ʻನಾವು ಮನೆಗೆ ಮರಳುತ್ತಿದ್ದೆವು. ಇದೇ ಸಂದರ್ಭ, ರಾಣಿಯ ಮರಣವನ್ನು ಘೋಷಿಸಿ ಬಹಳ ಹೊತ್ತಾಗಿರಲಿಲ್ಲ. ಇದ್ದಕ್ಕಿದ್ದಂತೆ ನನ್ನ ೧೧ ವರ್ಷದ ಮಗಳು ಆಕಾಶದೆಡೆ ನೋಡಿ ಜೋರಾಗಿ ಕಿರುಚಿದಳು. ಓ ಮೈ ಗಾಡ್‌, ಓ ಮೈ ಗಾಡ್‌ ಎಂದು ಕಿರುಚುತ್ತಿದ್ದ ಆಕೆಯನ್ನು ನೋಡಿ ನಮಗೆ ಯಾಕೆ ಎಂದು ಅರ್ಥವಾಗಲಿಲ್ಲ. ನಾವೂ ಗಾಬರಿಯಾಗಿಬಿಟ್ಟಿದ್ದೆವು. ಏನಾಯ್ತು ಎಂದು ನಾವು ಕೇಳಿದಾಗ ಆಕೆ ಆಗಸಕ್ಕೆ ಕೈತೋರಿಸಿ, ಕ್ವೀನ್‌ ಎಂದು ಭಾವುಕಳಾಗಿದ್ದಾಳೆ. ನಾವು ಆಗಸ ನೋಡಿದಾಗ, ಕ್ವೀನ್‌ ಆಕೃತಿಯೇ ಮೋಡದಲ್ಲಿ ಮೂಡಿತ್ತು. ನೋಡಿದ ತಕ್ಷಣ, ಇದು ರಾಣಿ ಎಲಿಜಬೆತ್‌ ೨ರದ್ದೇ ಆಕೃತಿ ಎಂದು ಗುರುತಿಸಬಲ್ಲಷ್ಟು ನಿಚ್ಛಳವಾಗಿ ಆಗಸದಲ್ಲಿ ಮೂಡಿದ್ದು ಕಂಡು ನಮಗೆ ನಿಜಕ್ಕೂ ಆಶ್ಚರ್ಯವಾಗಿತ್ತು. ಯಾಕೆಂದರೆ ಆಗಷ್ಟೇ ರಾಣಿಯ ಸಾವಿನ ಸುದ್ದಿ ಕೇಳಿದ್ದೆವು. ಕಾಕತಾಳೀಯವೇ ಆಗಿರಬಹುದಾದರೂ, ಸಾವಿನ ದಿನವೇ ಹೀಗೆ ಆಗಸದಲ್ಲಿ ಕಂಡರೆ ಯಾರಿಗೆ ತಾನೇ ಹಾಗನಿಸುವುದಿಲ್ಲ ಹೇಳಿ? ಹಾಗಾಗಿ ಸಹಜವಾಗಿಯೇ ನಮಗೂ ರೋಮಾಂಚನವಾಗಿದೆ. ಕಾರು ನಿಲ್ಲಿಸಿ ಫೋಟೋ ತೆಗೆದುಕೊಂಡೆವು. ಚಿತ್ರ ನೋಡಿದ ಎಲ್ಲರಿಗೂ ನಿಜಕ್ಕೂ ಆಶ್ಚರ್ಯವಾಗಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Queen Elizabeth | ಬಂದಷ್ಟೇ ವೇಗವಾಗಿ ಖರ್ಚಾಗಿದ್ದ ರಾಣಿ ಎಲಿಜಬೆತ್‌ ಬಾರ್ಬಿ ಡಾಲ್!‌

ಇನ್ನೂ ವಿಚಿತ್ರವೆಂದರೆ, ರಾಣಿಯ ಮರಣದ ಅದೇ ದಿನ ಹೀಗೆ ಮೋಡದ ಆಕಾರದಲ್ಲಿ ರಾಣಿ ಕಂಡಿದ್ದು ಕೇವಲ ಈಕೆಗೆ ಮಾತ್ರವಲ್ಲ. ಹಲವೆಡೆ ಹಲವು ಮಂದಿ ಇದನ್ನು ಗಮನಿಸಿದ್ದಾರೆ. ಅನೇಕರು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್‌ಗಳಲ್ಲಿ ರಾಣಿಯ ವಿವಿಧ ಭಂಗಿಗಳ ಆಕಾರದ ಮೋಡಗಳ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ.

೧೦ರ ಹರೆಯದ ಪುಟಾಣಿಯೊಬ್ಬಳು ರಾಣಿಯ ಸಾವಿನ ಅಧಿಕೃತ ಪ್ರಕಟಣೆ ಹೊರಬಿದ್ದ ಸುಮಾರು ಒಂದು ಗಂಟೆ ನಂತರ ರಾಣಿಯಾಕಾರದ ಮೋಡವನ್ನು ಗಮನಿಸಿ ಫೋಟೋ ತೆಗೆದಿದ್ದಾಳೆ. ಮತ್ತೊಬ್ಬರು ಕೂಡಾ, ತಮ್ಮ ಕೊಠಡಿಯಿಂದ ರಾಣಿಯ ಸೈಡ್‌ ಭಂಗಿಯ ಆಕಾರದ ಮೋಡವನ್ನು ಗಮನಿಸಿದ್ದು ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ತೆಗೆದು ಪೋಸ್ಟ್‌ ಮಾಡಿದ್ದಾರೆ. ಇವು ನಿಜಕ್ಕೂ ರಾಣಿಯಾಕಾರದಲ್ಲೇ ಕಾಣುತ್ತಿರುವುದು ಹಲವರಿಗೆ ಆಶ್ಚರ್ಯವನ್ನೂ ತರಿಸಿದೆ. ಸದ್ಯಕ್ಕೆ ಈ ಚಿತ್ರಗಳು ಅಂತರ್ಜಾಲದಲ್ಲಿ ಸಂಚಲನ ಮೂಡಿಸುತ್ತಿದ್ದು, ಅನೇಕರು ರಾಣಿ ಇನ್ನೂ ಬ್ರಿಟನ್‌ ಮೇಲಿನ ಪ್ರೀತಿಯಿಂದ ಆಗಸದಿಂದ ಎಲ್ಲರನ್ನೂ ಗಮನಿಸುತ್ತಿದ್ದಾಳೆ ಎಂದು ತಮ್ಮದೇ ವ್ಯಾಖ್ಯಾನ ನೀಡುತ್ತಿದ್ದಾರೆ. ಇದೇ ಸಂದರ್ಭ, ಲಂಡನ್‌ನ ವೆಸ್ಟ್‌ಮಿನ್ಸ್ಟರ್‌ನ ಎಲಿಜಬೆತ್‌ ಟವರ್‌ಗೆ ಹಿನ್ನೆಲೆಯಾಗಿ ಎರಡು ಕಾಮನಬಿಲ್ಲುಗಳು ಮೂಡಿದ್ದನ್ನೂ ಜನರು ತಮ್ಮದೇ ವ್ಯಾಖ್ಯಾನಗಳಲ್ಲಿ ರಾಣಿಯ ಸಾವಿನೊಂದಿಗೆ ತಾಳೆ ಮಾಡುತ್ತಿದ್ದಾರೆ.

ಇದನ್ನೂ ಓದಿ | Queen Elizabeth Death | ರಾಣಿ ನಿಧನದ ಸುದ್ದಿಯನ್ನು ಜೇನು ನೊಣಗಳಿಗೆ ಏಕೆ ತಿಳಿಸಬೇಕು? ಹೇಳದಿದ್ದರೆ ಏನಾಗುತ್ತದೆ?

Exit mobile version