Site icon Vistara News

Snake belief : ನಾಗರಹಾವಿಗೆ ಡೀಸೆಲ್‌ ಎರಚಿದವನು ಮೈ ಉರಿಯಲ್ಲಿ ಹಾವಿನಂತೆ ಹೊರಳಾಡಿದ!; ಆಶ್ಚರ್ಯವಾದರೂ ನಿಜ!

Cobra rescued

ಮಂಗಳೂರು: ಕರಾವಳಿಯಲ್ಲಿ ಹಾವು (Indian Cobra) ಎಂದರೆ ದೇವರಿಗೆ ಸಮಾನ. ಹಾಗಾಗಿಯೇ ಇಲ್ಲಿ ನಾಗಾರಾಧನೆಗೆ (Nagaradhane) ವಿಶೇಷ ಮಹತ್ವ. ಹಾವಿಗೆ ತೊಂದರೆ ಕೊಡಬಾರದು, ನೋವು ಮಾಡಬಾರದು ಎನ್ನುವುದು ಇಲ್ಲಿ ಹುಟ್ಟಿನಿಂದಲೇ ಹೇಳಿಕೊಡುವ ಪಾಠ. ಜನರ ಬಹುತೇಕ ಎಲ್ಲ ಸಮಸ್ಯೆಗಳಿಗೆ ನಾಗರಾಜ, ಸುಬ್ರಹ್ಮಣ್ಯ ದೇವರ ಹರಕೆಯಲ್ಲಿ, ಪೂಜೆಯಲ್ಲಿ, ಆರಾಧನೆಯಲ್ಲಿ ಪರಿಹಾರ ಕಂಡುಕೊಳ್ಳುವುದು ಇಲ್ಲಿನ ರೂಢಿ. ಜನರು ಹಾವನ್ನು ಮನುಷ್ಯರಂತೆಯೂ ನೋಡುತ್ತಾರೆ. ಹಾವು ಸತ್ತಿರುವುದು ಕಂಡುಬಂದರೆ ಅದಕ್ಕೆ ಸಕಲ ಧಾರ್ಮಿಕ ವಿಧಿಗಳೊಂದಿಗೆ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ.

ಇಂಥ ನಂಬಿಕೆಯ ತಾಣದಲ್ಲಿ ಅಚ್ಚರಿಯೊಂದು ನಡೆದಿದೆ. ಇದು ನಾಗರ ಹಾವಿಗೆ ಉಪಟಳ ಮಾಡಿದವನು ಕೊನೆಗೆ ಹಾವಿನಂತೆಯೇ ಹೊರಳಾಡಿದ ಘಟನೆ. ಇದೀಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸೆಪ್ಟೆಂಬರ್‌ 5ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ (Kinnigoli) ಎಂಬಲ್ಲಿ ಬಹು ಮಹಡಿ ಕಟ್ಟಡವೊಂದರ ಬಳಿ ಒಂದು ನಾಗರಹಾವು ಕಂಡುಬಂದಿತ್ತು. ಆಗ ಅಲ್ಲಿ ಸೆಕ್ಯುರಿಟಿ ಗಾರ್ಡ್‌ (Security Guard) ಆಗಿದ್ದ ವ್ಯಕ್ತಿ ಹಾವನ್ನು ಅಲ್ಲಿಂದ ಓಡಿಸುವುದಕ್ಕಾಗಿ ಅದರ ಮೈಮೇಲೆ ಡೀಸೆಲ್‌ ಎರಚಿದ್ದ.

ಹಾಗೆ ಅವನು ಡೀಸೆಲ್‌ ಎರಚಿದ ಪರಿಣಾಮವಾಗಿ ನಾಗರಹಾವು ಮೈ ಉರಿಯಿಂದ ನರಳಲು ಶುರು ಮಾಡಿದೆ. ನೆಲದಲ್ಲಿ ಹೊರಳಾಡಿ ಒದ್ದಾಡಲು ಆರಂಭಿಸಿದೆ. ಹಾವು ಹೀಗೆ ಒದ್ದಾಡುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಿಯ ಉರಗ ತಜ್ಞ ಯತೀಶ್ ಕಟೀಲ್ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಯತೀಶ್ ಕಟೀಲ್ ಅವರು ಹಾವನ್ನು ಶಾಂಪೂ ಮೂಲಕ ಸ್ವಚ್ಛಗೊಳಿಸಿ ಹಾವಿನ ಉರಿ ಕಡಿಮೆ ಮಾಡಿದರು. ಬಳಿಕ ಅದನ್ನು ಒಯ್ದು ಕಾಡಿಗೆ ಬಿಟ್ಟಿದ್ದಾರೆ. ಒದ್ದಾಡುತ್ತಿದ್ದ ಹಾವು ಸತೀಶ್‌ ಅವರ ಕೈಯಲ್ಲಿ ನಿರಾಳವಾಗಿದ್ದನ್ನು ನೋಡಿ ಜನ ಅಚ್ಚರಿಪಟ್ಟಿದ್ದರು.

ಇದನ್ನೂ ಓದಿ: Snake News : ಮತ್ತೆ ಮಂಚಕ್ಕೆ ಬಂದ ಬುಸ್‌ ಬುಸ್‌ ನಾಗಪ್ಪ; ಯುವಕನ ಪಕ್ಕ ತಣ್ಣಗೆ ಮಲಗಿದ್ದ!

ಇದಾಗಿ ಒಂದು ವಾರ ಕಳೆದಿದೆ ಅಷ್ಟೆ. ಅಂದರೆ ಹಾವಿಗೆ ಡೀಸೆಲ್‌ ಎರಚಿದ ಘಟನೆ ನಡೆದಿದ್ದು ಒಂದು ಮಂಗಳವಾರ. ಅದರ ಮುಂದಿನ ಮಂಗಳವಾರ ಆವತ್ತು ಡೀಸೆಲ್‌ ಎರಚಿದ ಸೆಕ್ಯುರಿಟಿ ಗಾರ್ಡ್‌ಗೆ ಮೈ ಉರಿ ಬರಲು ಆರಂಭವಾಗಿದೆ. ಅವನು ಆವತ್ತು ಹಾವು ಹೇಗೆ ಒದ್ದಾಡಿತ್ತೋ ಅದೇ ರೀತಿ ಒದ್ದಾಡಿದ್ದಾನೆ.

ಸೆಕ್ಯುರಿಟಿ ಗಾರ್ಡ್​ ನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೊಂದು ರೀತಿಯಲ್ಲಿ ವಿಚಿತ್ರ ಘಟನೆಯಾಗಿದ್ದರೂ ನಾಗರ ಹಾವಿಗೆ ತೊಂದರೆ ಮಾಡಿದರೆ ಅದರ ಶಾಪ ತಟ್ಟುತ್ತದೆ ಅನ್ನೋ ಮಾತಿಗೆ ಇಂಬು ನೀಡಿದೆ. ಸುಬ್ರಹ್ಮಣ್ಯ ದೇವರಿಗೆ ಹರಕೆ ಹೊತ್ತರೆ ಉರಿ ಕಡಿಮೆಯಾಗಿ ಆರೋಗ್ಯ ಸರಿಯಾಗುತ್ತದೆ ಎಂಬ ಸಲಹೆಯನ್ನೂ ಸೆಕ್ಯುರಿಟಿ ಗಾರ್ಡ್‌ಗೆ ಜನರು ನೀಡಿದ್ದಾರೆ. ಆತನೂ ಒಪ್ಪಿಕೊಂಡಿದ್ದಾನೆ.

ಈ ನಡುವೆ ಹಾವಿಗೆ ಡೀಸೆಲ್‌ ಎರಚಿದ ವ್ಯಕ್ತಿ ಮನಸ್ಸಿನಲ್ಲಿ ಯಾವಾಗಲೂ ಛೆ ಹೀಗೆ ಮಾಡಬಾರದಿತ್ತು ಅಂದುಕೊಳ್ಳುತ್ತಿದ್ದ. ಹಾವಿಗೆ ತೊಂದರೆ ಮಾಡಿದ್ದರಿಂದ ತನಗೆ ಏನಾಗುತ್ತದೋ ಎಂಬ ಭಯದಲ್ಲೇ ಇದ್ದ. ಕೊನೆಗೆ ಹಾವಿಗೆ ಮಾಡಿದ ನೋವು ಆತನಿಗೆ ನಿಜವಾಗಿ ಕಾಡಿದೆ. ಇದು ಮನೋವೈಜ್ಞಾನಿಕವಾಗಿ ಪ್ರೂವ್‌ ಆಗುವ ಸಂಗತಿಯಾಗಿದೆ. ಒಟ್ಟಿನಲ್ಲಿ ಹಾವಿಗೆ ತೊಂದರೆ ಕೊಟ್ಟವರಿಗೂ ತೊಂದರೆ ಆಗುತ್ತದೆ ಎಂಬ ನಂಬಿಕೆ ನಿಜವಾಗಿದೆ.

ಈ ನಡುವೆ, ಉರಗ ತಜ್ಞ ಯತೀಶ್‌ ಕಟೀಲ್‌ ಅವರು ಯಾವ ಕಾರಣಕ್ಕೂ ಹಾವಿಗೆ ತೊಂದರೆ ಕೊಡಬೇಡಿ ಎಂಬ ಮನವಿಯನ್ನು ಮಾಡಿದ್ದಾರೆ.

Exit mobile version