Site icon Vistara News

ತನಗೆ ಒಮ್ಮೆ ಕಚ್ಚಿದ ಹಾವಿಗೆ ಮೂರು ಬಾರಿ ಕಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ; ಕೊನೆಗೆ ಬದುಕುಳಿದಿದ್ದು ಯಾರು?

Snake

Snake Bites Man in Bihar, He Bites it Back Thrice; Check Who Survived

ಪಟನಾ: ಹಾವುಗಳು (Snakes) ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಸಣ್ಣ ಹಾವು ಕಚ್ಚಿದರೂ ಗಾಬರಿಯಾಗುತ್ತದೆ. ಕೂಡಲೇ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯುತ್ತೇವೆ. ಹಳ್ಳಿಯಲ್ಲಾದರೆ ಆಯುರ್ವೇದದಿಂದ ಹಾವಿನ ವಿಷಯವನ್ನು ನಿಗ್ರಹಿಸಲಾಗುತ್ತದೆ. ಅಷ್ಟರಮಟ್ಟಿಗೆ, ಹಾವು ಕಚ್ಚಿದರೆ (Snake Bite) ಗಾಬರಿ, ಆತಂಕ, ಭಯ ಆಗುತ್ತದೆ. ಆದರೆ, ಬಿಹಾರದಲ್ಲೊಬ್ಬ (Bihar) ಭೂಪನು, ತನಗೆ ಕಚ್ಚಿದ ಹಾವಿಗೇ ವಾಪಸ್‌ ಮೂರು ಬಾರಿ ಕಚ್ಚಿದ್ದಾನೆ. ಎಂತಹ ಅದೃಷ್ಟ ನೋಡಿ, ಹಾವು ಕಚ್ಚಿಸಿಕೊಂಡ ವ್ಯಕ್ತಿಯು ಬದುಕುಳಿದರೆ, ಈತನಿಂದ ಕಚ್ಚಿಸಿಕೊಂಡ ಹಾವು ಸತ್ತುಹೋಗಿದೆ.

ಹೌದು, ಬಿಹಾರದ ರಾಜೌಲಿ ಪ್ರದೇಶದಲ್ಲಿ ಇಂತಹದ್ದೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಜಾರ್ಖಂಡ್‌ ಮೂಲದ ಸಂತೋಷ್‌ ಲೋಹರ್‌ ಎಂಬ ವ್ಯಕ್ತಿಯು ರೈಲ್ವೆ ಲೈನ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಈತನ ದಿನದ ಕೆಲಸ ಮುಗಿಸಿ ರೌಜಲಿಯಲ್ಲಿರುವ ಕ್ಯಾಂಪ್‌ನಲ್ಲಿ ಕಳೆದ ಮಂಗಳವಾರ (ಜುಲೈ 2) ಮಲಗಿದ್ದಾನೆ. ಇದೇ ವೇಳೆ ಹಾವೊಂದು ಸಂತೋಷ್‌ ಲೋಹರ್‌ಗೆ ಕಚ್ಚಿದೆ. ಹಾವು ಕಚ್ಚಿದ ಬಳಿಕ ಗಾಬರಿಯಾಗದ, ಆಸ್ಪತ್ರೆಗೆ ಓಡದ ಈತನು ಕಬ್ಬಿಣದ ರಾಡ್‌ನಿಂದ ಹಾವನ್ನು ಹಿಡಿದು, ಅದಕ್ಕೇ ಮೂರು ಬಾರಿ ಕಚ್ಚಿದ್ದಾನೆ. ಈತನು ಕಚ್ಚಿದ ತೀವ್ರತೆಗೆ ಹಾವೇ ಸತ್ತುಹೋಗಿದೆ.

Snake bite

ಸಂತೋಷ್‌ ಲೋಹರ್‌ನನ್ನು ಕೂಡಲೇ ಆತನ ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಈತನು ಬಹುತೇಕ ಗುಣಮುಖನಾಗಿದ್ದಾನೆ. “ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ ಕಾರಣ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶೀಘ್ರದಲ್ಲೇ ಆತನನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗುವುದು” ಎಂದು ಚಿಕಿತ್ಸೆ ನೀಡಿದ ಡಾ.ಸತೀಶ್‌ ಚಂದ್ರ ಅವರು ಮಾಹಿತಿ ನೀಡಿದ್ದಾರೆ. ಈತನ ಸಾಹಸವನ್ನು ಕೇಳಿದ ಸುತ್ತಮುತ್ತಲಿನ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಂತೋಷ್‌ ಲೋಹರ್‌ನು ಹಾವಿಗೆ ವಾಪಸ್‌ ಕಚ್ಚಿದ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈತನ ಸಂದರ್ಶನವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. “ನಮ್ಮ ಊರಿನಲ್ಲಿ ಒಂದು ಮಾತಿದೆ. ನಮಗೇನಾದರೂ ಹಾವು ಕಚ್ಚಿದರೆ, ಅದಕ್ಕೆ ಎರಡು ಬಾರಿ ವಾಪಸ್‌ ಕಚ್ಚಬೇಕು ಎಂಬ ಪದ್ಧತಿ ಇದೆ. ಅದರಂತೆ, ನಾನು ಹಾವಿಗೆ ವಾಪಸ್‌ ಕಚ್ಚಿದೆ. ಇದರಿಂದ ನಾನು ಬದುಕುಳಿದೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಈತನಿಗೆ ಕಚ್ಚಿದ ಹಾವಿನಲ್ಲಿ ವಿಷ ಇರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral News: ಒಂದು ತಿಂಗಳಲ್ಲಿ ಐದು ಬಾರಿ ಹಾವು ಕಡಿತ; ಪವಾಡ ರೀತಿಯಲ್ಲಿ ವ್ಯಕ್ತಿ ಬಜಾವ್‌!

Exit mobile version