ಮ್ಯಾಡ್ರಿಡ್: ಜಗತ್ತನಾದ್ಯಂತ ಹತ್ತಾರು ದೇಶಗಳಲ್ಲಿ ಹಲವು ರೀತಿಯ, ಕೆಲವೊಮ್ಮೆ ವಿಚಿತ್ರ ನಿಯಮ, ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಅದರಲ್ಲೂ, ಸಾರ್ವಜನಿಕ ಸ್ಥಳಗಳಲ್ಲಿ ಜನರ ವರ್ತನೆ ಕುರಿತು ಬಹುತೇಕ ದೇಶಗಳು ಹೆಚ್ಚಿನ ನಿಗಾ ವಹಿಸುತ್ತವೆ. ಕಠಿಣ ನಿಯಮಗಳ ಮೂಲಕ ಶಿಸ್ತು ಕಾಪಾಡುತ್ತವೆ. ಇದರ ಮಧ್ಯೆಯೇ, ಸ್ಪೇನ್ (Spain) ದೇಶದ ನಗರವೊಂದರಲ್ಲಿ ವಿಚಿತ್ರ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಸಮುದ್ರದಲ್ಲಿ ಈಜಾಡುವವರು, ಮೋಜು-ಮಸ್ತಿ ಮಾಡುವವರು ನೀರಿನಲ್ಲೇ ಮೂತ್ರ ವಿಸರ್ಜನೆ ಮಾಡಿದರೆ 67 ಸಾವಿರ ರೂ.ನಿಂದ 1 ಲಕ್ಷ ರೂ. ದಂಡ ವಿಧಿಸುವುದಾಗಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಸುದ್ದಿ ಈಗ ಭಾರಿ (Viral News) ಚರ್ಚೆಗೆ ಗ್ರಾಸವಾಗಿದೆ.
ಹೌದು, ಸ್ಪೇನ್‌ನ ಮಾರ್ಬೆಲ್ಲಾ ಎಂಬ ನಗರದಲ್ಲಿರುವ ಸಮುದ್ರಗಳಲ್ಲಿ ನೀರಿನ ಸ್ವಚ್ಛತೆ, ಶಿಸ್ತು ಕಾಪಾಡುವ ದಿಸೆಯಲ್ಲಿ ಹೊಸ ನಿಯಮಗಳನ್ನು ರೂಪಿಸಲಾಗುತ್ತದೆ. ಸಾರ್ವಜನಿಕರ ಆರೋಗ್ಯ, ನೀರಿನ ಗುಣಮಟ್ಟ, ಸ್ವಚ್ಛತೆ ದೃಷ್ಟಿಯಿಂದ ನಿಯಮಗಳನ್ನು ರೂಪಿಸುತ್ತಿದೆ. ಅದರಲ್ಲೂ, ಮೊದಲ ಬಾರಿಗೆ ಮೂತ್ರ ವಿಸರ್ಜನೆ ಮಾಡಿ ಸಿಕ್ಕಿಬಿದ್ದರೆ 67 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ದಂಡ ಪಾವತಿಸಿದ ಒಂದು ವರ್ಷದಲ್ಲಿ ಮತ್ತೆ ಸಿಕ್ಕಿಬಿದ್ದರೆ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ
ಮಾರ್ಬೆಲ್ಲಾ ನಗರದಲ್ಲಿ ಜಾರಿಗೆ ತರಲು ಚಿಂತನೆ ನಡೆದಿರುವ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಪರ-ವಿರೋಧ ಚರ್ಚೆಯಾಗುತ್ತಿದೆ. ಟ್ರೋಲ್‌ಗಳನ್ನು ಮಾಡಲಾಗುತ್ತಿದೆ. ಅದರಲ್ಲೂ, ಕೆಲ ಮಾಧ್ಯಮಗಳು ಬೀಚ್‌ಗಳಿಗೆ ತೆರಳಿ ಜನರ ಅಭಿಪ್ರಾಯಗಳು ಕೇಳಿವೆ. “ನಾವು ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೇವೆ ಎಂಬುದನ್ನು ಹೇಗೆ ಪತ್ತೆ ಹಚ್ಚುತ್ತಾರೆ? ಮೀನುಗಳನ್ನು ಕೇಳಿ, ಅವರು ನಮಗೆ ದಂಡ ವಿಧಿಸುತ್ತಾರೆಯೇ” ಎಂಬುದಾಗಿ ಪ್ರವಾಸಿಗರೊಬ್ಬರು ಖಾರವಾಗಿ ಪ್ರಶ್ನಿಸಿದ್ದಾರೆ.
ಒಂದಷ್ಟು ಜನರು ಈ ಚಿಂತನೆಯೇ ನಾನ್‌ಸೆನ್ಸ್ ಎಂದಿದ್ದಾರೆ. “ಸಮುದ್ರದ ನೀರನ್ನು ಸ್ವಚ್ಛವಾಗಿಡಬೇಕು, ಯಾರೂ ಮೂತ್ರ ವಿಸರ್ಜನೆ ಮಾಡಬಾರದು ಎಂಬುದು ಸರಿ. ಆದರೆ, ಅದನ್ನು ತಿಳಿಯುವ ವಿಧಾನ ಏನಿದೆ? ಅದನ್ನು ಹೇಗೆ ಪತ್ತೆಹಚ್ಚುತ್ತಾರೆ? ಸಾರ್ವಜನಿಕರ ಹಣವನ್ನು ಹೀಗೆ ಖರ್ಚು ಮಾಡುವ, ನಾನ್‌ಸೆನ್ಸ್ ಯೋಜನೆಗಳನ್ನು ರೂಪಿಸುವ ಬದಲು, ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡದಿರುವ, ನೀರಿನ ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರೆ ಒಳ್ಳೆಯದಿತ್ತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.