ವಾಷಿಂಗ್ಟನ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಸಂಚರಿಸಿದ್ದ ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ (Boeing Starliner) ಬಾಹ್ಯಾಕಾಶ ನೌಕೆ ಗುರುವಾರ (ಜೂನ್ 6) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಸುರಕ್ಷಿತವಾಗಿ ಇಳಿದಿದೆ. ಈ ವೇಳೆ ಸುನೀತಾ ವಿಲಿಯಮ್ಸ್ ಅವರು ಇತರ ಏಳು ಗಗನಯಾತ್ರಿಗಳನ್ನು ಆತ್ಮೀಯವಾಗಿ ತಬ್ಬಿಕೊಂಡಿದ್ದಾರೆ. ಜತೆಗೆ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.
ಐಎಸ್ಎಸ್‌ನ ಸಂಪ್ರದಾಯದಂತೆ ಗಂಟೆ ಬಾರಿಸುವ ಮೂಲಕ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಸ್ವಾಗತಿಸಲಾಯಿತು. ಡ್ಯಾನ್ಸ್ ಮಾಡುತ್ತಲೇ ಅವರು ಕಾಲಿಟ್ಟರು. ಸುನೀತಾ ವಿಲಿಯಮ್ಸ್ ʼಡ್ಯಾನ್ಸ್ ಪಾರ್ಟಿʼ ಬಗ್ಗೆ ಮಾತನಾಡುತ್ತಾ, ತಮ್ಮ ಸಿಬ್ಬಂದಿಯನ್ನು ʼಮತ್ತೊಂದು ಕುಟುಂಬʼ ಎಂದು ಕರೆದಿದ್ದಾರೆ. ಅಂತಹ ದೊಡ್ಡ ಸ್ವಾಗತಕ್ಕಾಗಿ ಧನ್ಯವಾದ ಅರ್ಪಿಸಿದರು.
Hugs all around! The Expedition 71 crew greets Butch Wilmore and @Astro_Suni aboard @Space_Station after #Starliner docked at 1:34 p.m. ET on June 6. pic.twitter.com/wQZAYy2LGH
— Boeing Space (@BoeingSpace) June 6, 2024
ಫ್ಲೊರಿಡಾದಲ್ಲಿರುವ ಕೇಪ್ ಕ್ಯಾನವರಲ್ ಸ್ಪೇಸ್ ಫೋರ್ಸ್ ಸೆಂಟರ್‌ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಉಡಾವಣೆಯಾದ ಸುಮಾರು 26 ಗಂಟೆಗಳ ನಂತರ ಬಾಹ್ಯಾಕಾಶ ನೌಕೆ ಐಎಸ್‌ಎಸ್‌ನಲ್ಲಿ ಇಳಿಯಿತು. ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಒಂದು ವಾರ ಕಳೆಯಲಿದ್ದಾರೆ ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ನಾಸಾ ಬಾಹ್ಯಾಕಾಶ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಆರನೇ ಬಾಹ್ಯಾಕಾಶ ನೌಕೆ ಎಂಬ ಖ್ಯಾತಿಗೆ ಸ್ಟಾರ್‌ಲೈನರ್ ಭಾಜನವಾಯಿತು.
ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿರುವುದು ಇದು ಮೂರನೇ ಬಾರಿ. ಈ ಹಿಂದೆ ಅವರ ಈ ಮೂರನೇ ಬಾಹ್ಯಾಕಾಶ ಪ್ರಯಾಣ ತಾಂತ್ರಿಕ ಕಾರಣಗಳಿಂದ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ. ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ (ಮೂರು ಬಾರಿ) ಮಾಡಿದ್ದಾರೆ.
ಇದನ್ನೂ ಓದಿ: Sunita Williams: ಸುನೀತಾ ವಿಲಿಯಮ್ಸ್ ಗಗನಯಾತ್ರೆ ಮತ್ತೆ ಸ್ಥಗಿತ; ಮೇ 17ಕ್ಕೆ ಮುಂದೂಡಿಕೆ
ಗಣೇಶನ ಆರಾಧಕಿ
ವಿಶೇಷ ಎಂದರೆ ಸುನೀತಾ ಇಂದಿಗೂ ಭಾರತದೊಂದಿಗಿನ ತಮ್ಮ ನಂಟನ್ನು ಕಡಿದುಕೊಂಡಿಲ್ಲ. ಅವರು ಗಣಪತಿಯನ್ನು ಆರಾಧಿಸುತ್ತಾರೆ. ಈ ಹಿಂದೆ ಬಾಹ್ಯಾಕಾಶಕ್ಕೆ ತೆರಳುವಾಗ ಅವರು ಗಣೇಶ ವಿಗ್ರಹ ಮತ್ತು ಭಗವದ್ಗೀತೆಯನ್ನು ಕೊಂಡೊಯ್ದಿದ್ದರು. ʼʼಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪ್ರಾರ್ಥಿಸುತ್ತೇನೆ. ಸಿದ್ಧಿ ವಿನಾಯಕ ನನ್ನ ಶುಭ ಸಂಕೇತʼʼ ಎಂದು ಅವರು ಈ ಹಿಂದೆ ಹೇಳಿದ್ದರು. ʼʼಬಾಹ್ಯಾಕಾಶ ಪ್ರಯಾಣ ಸೇರಿದಂತೆ ಯಾವುದೇ ಕೆಲಸಕ್ಕೂ ಗಣೇಶನ ಆಶೀರ್ವಾದ ನನಗೆ ಬೇಕು. ಗಣೇಶ ನನ್ನ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿದ್ದಾನೆ. ಪ್ರತಿ ಬಾರಿ ನಾನು ಬಾಹ್ಯಾಕಾಶ ಪ್ರಯಾಣದಲ್ಲೂ ಸಣ್ಣ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತೇನೆʼʼ ಎಂದು ಸುನೀತಾ ವಿಲಿಯಮ್ಸ್ ಹಿಂದೆ ತಿಳಿಸಿದ್ದರು.