ಯಾಕೆ ಕೇವಲ ಚಿತ್ರಕಾರರು, ಚಿತ್ರನಟರು, ಸಂಗೀತಕಾರರು ಇಂಥವರು ಮಾತ್ರ ಕಲಾವಿದರು? ಅಡುಗೆಯೂ ಒಂದು ಕಲೆಯಾದರೆ, ಅಡುಗೆ ಮಾಡುವವರೂ ಕಲಾವಿದರೇ ಆಗಬೇಕಲ್ಲವೇ ಎಂಬ ಪ್ರಶ್ನೆ ಈ ವಿಡಿಯೋ ನೋಡಿದವರಿಗೆ ಉದ್ಭವಿಸದೇ ಇರದು. ಯಾಕೆಂದರೆ, ಇನ್ನೇನು ಕ್ಷಣಾರ್ಧದಲ್ಲಿ ತಿಂದು ಮುಗಿದು ಹೋಗಬಹುದಾದ ತಿನಿಸಿಗೆ ದಿನಗಟ್ಟಲೆ ಪರಿಶ್ರಮ ಹಾಕಿ ಮಾಡುವುದಿದೆಯಲ್ಲ, ಕ್ಷಣಾರ್ಧದಲ್ಲಿ ಮುಗಿದು ಹೋದರೂ ಅದು ಕೊಡುವ ಸಂತೃಪ್ತ ಭಾವ ಯಾವ ಕಲಾವಿದನಿಗೂ ಸಿಗಲಿಕ್ಕಿಲ್ಲವೇನೋ.
ಈಗಂತೂ ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ಬಗೆಯ ಕೇಕ್‌ಗಳನ್ನು ನೋಡಿದರೆ ಕೇಕ್ ಕಲಾವಿದರು ಎಂಬ ಬೇರೆಯದೇ ಕಲಾವಿದರು ನಮ್ಮಲ್ಲಿದ್ದಾರೆ ಎಂಬುದು ಅರಿವಾಗುತ್ತದೆ. ಕೇಕ್‌ನ ಡಿಸೈನ್‌ಗಳ ಮೇಲೆ ನಡೆದಷ್ಟು ಕ್ರಿಯಾಶೀಲ ಪ್ರಯೋಗಗಳು ಬಹುಶಃ ಯಾವ ತಿನಿಸಿನ ಮೇಲೂ ನಡೆದಿರಲಿಕ್ಕಿಲ್ಲವೇನೋ. ಅಷ್ಟು ನಮೂನೆಯ, ಥರಹೇವಾರಿ ಡಿಸೈನುಗಳ, ನಾನಾ ರುಚಿಯ, ನವನವೀನ ಐಡಿಯಾಗಳ ಕೇಕುಗಳು ದಿನನಿತ್ಯ ಬಂದು ಹೋಗುತ್ತಲೇ ಇರುತ್ತವೆ. ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಸದ್ಯ ಅತ್ಯಂತ ಜನಪ್ರಿಯವಾಗಿರುವ ಪಿಂಟಾರ ಕೇಕ್‌ಗಳ ಪೈಕಿ ಈಗ ಈ ಪಿಂಟಾರಾ ಕೇಕ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಇಲ್ಲೊಬ್ಬ ಕೇಕ್ ಕಲಾವಿದ ಮಾಡಿದ ಪಿಂಟಾರ ಕೇಕ್ ಸಾಮಾಜಿಕ ಜಾಲತಾಣದಲ್ಲಿ ಮಿಲಿಯಗಟ್ಟಲೆ ವೀಕ್ಷಣೆ ಪಡೆದಿದೆ. ಅಮೌರಿ ಗುಯ್ಚಾನ್ ಎಂಬವರು ಹಂಚಿಕೊಂಡ ವಿಡಿಯೋ ಒಂದು ಪಿಂಟಾರಾ ಕೇಕ್ ಕೂಡಾ ಎಂಥ ಅದ್ಭುತ ಕಲೆ ಎಂಬುದನ್ನು ತೋರಿಸಿದೆ. ʻಚಾಕೋಲೇಟ್ ಪಿಂಟಾರಾ, ಬಹಳ ನೋವಿನಿಂದ ಕತ್ತರಿಸುತ್ತಿದ್ದೇನೆ. ಆದರೆ ಇದರೊಳಗಿನ ಕ್ಯಾಂಡಿಗಳು ಬಹಳ ರುಚಿಯಾಗಿದ್ದವುʼ ಎಂಬ ತಲೆಬರಹದೊಂದಿಗೆ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.
ಗುಯ್ಚಾನ್ ಕೇಕ್ ಮಾಡುವ ವಿಡಿಯೋ ಇದರಲ್ಲಿದ್ದು ತೂಗು ಹಾಕಲಾಗಿರುವ ಪಿಂಟಾರಾ ಕೇಕ್‌ನನ್ನು ಒಡೆಯುವ ದೃಶ್ಯವಿದೆ. ಈ ಕೇಕೇ ಒಂದು ಕಲಾಕೃತಿಯ ಹಾಗಿದ್ದು, ಇದನ್ನು ಹೇಗಾದರೂ ಒಡೆದು ತಿಂದು ಮುಗಿಸಿಬಿಡುವುದು ಎಂದು ಯಾರಿಗಾದರೂ ಅನಿಸುವಷ್ಟು ಸುಂದರವಾಗಿದೆ.
ಇದನ್ನೂ ಓದಿ | Viral news | ನೀಲಿ, ಪಿಂಕ್ ಬಣ್ಣದ ಬ್ಲೂಬೆರಿ, ಸ್ಟ್ರಾಬೆರಿ ಸಮೋಸಾಗಳನ್ನು ನೋಡಿದ್ದೀರಾ?
ಇದರ ಹಿಂದಿನ ಅಷ್ಟೂ ಪರಿಶ್ರಮ ಖ್ಯಾತ ಕೇಕ್ ಕಲಾವಿದ ಅಮೌರಿ ಗುಯ್ಚಾನ್‌ಗೆ ಸಲ್ಲುತ್ತದೆ. ಈ ಪಿಂಟಾರಾ ಕೇಕ್ ಮಾಡಲು ತೆಗೆದುಕೊಂಡ ಸಮಯ ಐದು ದಿನಗಳಂತೆ. ಸುಮಾರು ೩,೭೦೦ ಲೂಪ್‌ಗಳ ಇದರಲ್ಲಿದ್ದು. ಒಂದೊಂದನ್ನೇ ಮಾಡಿ ಅಂಟಿಸಲಾಗಿದೆ. ಆಕರ್ಷಕವಾಗಿ ಅಲಂಕರಿಸಿರುವ ಈ ಕೇಕ್ ಒಳಗೆ ಸಾಕಷ್ಟು ಕ್ಯಾಂಡಿಗಳನ್ನು ತುಂಬಿಸಲಾಗಿದ್ದು, ಲೂಪ್‌ಗಳಂತೆ ಡಿಸೈನ್ ಮಾಡಿ ಅವುಗಳಿರುವ ಕೋನ್ ಆಕೃತಿಯ ಚಾಕೋಲೇಟ್‌ಗಳನ್ನು ಮಾಡಲಾಗಿದೆ. ಆಮೇಲೆ ಅದಕ್ಕೆ ಕೆಂಪು ಬಣ್ಣ ಬಳಿಯಲಾಗಿದ್ದು, ಈ ಎಲ್ಲ ಕೋನ್‌ಗಳನ್ನೂ ಒಂದಕ್ಕೊಂದು ಅಂಟಿಸಲಾಗಿದೆ. ಪಕ್ಕನೆ ನೋಡಿದರೆ, ದೀಪಾವಳಿಯ ನಕ್ಷತ್ರಾಕಾರದ ಗೂಡು ದೀಪದಂತೆ ಕಾಣುತ್ತದೆ. ಪ್ರತಿ ಬರ್ತ್‌ಡೇ ಪಾರ್ಟಿಯಲ್ಲೂ ಇದನ್ನು ಒಡೆಯುವ ದೃಶ್ಯ ಸಾರ್ಥಕತೆಯ ಕ್ಷಣ ಎಂದು ವಿವರಿಸಿರುವ ಅವರು, ಈ ಕ್ಷಣವನ್ನು ಸ್ಟಾರ್ ಶೋ ಎಂದು ಕರೆದುಕೊಂಡಿದ್ದಾರೆ.
ಈತನ ಥರಹೇವಾರಿ ಕೇಕ್‌ಗಳ ವಿಡಿಯೋಗಳನ್ನು ಇಷ್ಟಪಡುವ ಈತನ ಅಭಿಮಾನಿಗಳು ಈ ಪಿಂಟಾರಾ ಕೇಕ್ ಈತನ ಕೈಯಲ್ಲಿ ಮೂಡಿದ ಅತ್ಯದ್ಭುತ ಕಲಾಕೃತಿ ಎಂದು ಬಣ್ಣಿಸಿದ್ದಾರೆ. ಈತನ ಕೈಚಳಕ ನೋಡಿ ನಿಜಕ್ಕೂ ಶಾಕ್ ಆಗಿದೆ ಎಂದು ಹಲವರು ಮೂಕವಿಸ್ಮಿತರಾಗಿದ್ದರೆ, ಈನ್ನೂ ಕೆಲವರು ನೀವು ಚಾಕೋಲೇಟ್ ಜಗತ್ತಿನ ಬಾಬ್ ರೋಸ್ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ | Garba Dance | ಸ್ವಿಮ್ಮಿಂಗ್ ಪೂಲ್‌ನಲ್ಲೂ ಗಾರ್ಬಾ ನೃತ್ಯ, ರಾಜಸ್ಥಾನದಲ್ಲಿ ನವರಾತ್ರಿ ರಂಗಿನ ವಿಡಿಯೊ ವೈರಲ್