Site icon Vistara News

Video Viral: ಬ್ಯಾಲೆಟ್‌ ಪೇಪರ್‌ ಕಳ್ಳ ಮತದಾನದ ರಹಸ್ಯ ಬಿಚ್ಚಿಟ್ಟ ಪರಮೇಶ್ವರ್;‌ ಕಾಂಗ್ರೆಸ್‌ EVM ಬೇಡ ಎನ್ನಲು ಇದೇ ಕಾರಣವೆಂದ ಜೆಡಿಎಸ್!

Video Viral Parameshwara statement on ballot paper bogus voting

ಬೆಂಗಳೂರು/ತುಮಕೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ತುಮಕೂರಿನಲ್ಲಿ ನಡೆದ ಯಾದವ ಸಮುದಾಯದ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwara) ಅವರು ಈ ಹಿಂದಿನ ಬ್ಯಾಲೆಟ್‌ ಮತದಾನ (Ballot paper voting) ಹಾಗೂ ಈಗಿನ ಇವಿಎಂ ಮತದಾನದ (EVM Voting) ಬಗ್ಗೆ ಸ್ಮರಿಸುತ್ತಾ ಆಡಿದ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಈಡು ಮಾಡಿದ್ದಲ್ಲದೆ, ವೈರಲ್‌ (Video Viral) ಆಗಿದೆ. ಜತೆಗೆ, ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. “ಈ ಹಿಂದೆ ಬ್ಯಾಲೆಟ್‌ ಪೇಪರ್‌ ಇದ್ದಾಗ ಒಬ್ರೋ ಇಬ್ರೋ ಕುಳಿತುಕೊಂಡು ಊರವರೆಲ್ಲರ ವೋಟು ಹಾಕುತ್ತಿದ್ದರು” ಎಂಬ ಪರಮೇಶ್ವರ್‌ ಹೇಳಿಕೆ ಈಗ ಸಖತ್‌ ವೈರಲ್‌ ಆಗಿದೆ. ಈ ವಿಡಿಯೊವನ್ನು ಜೆಡಿಎಸ್‌ ರಾಜ್ಯ ಘಟಕವು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿರುವುದು ಇದೇ ಕಾರಣಕ್ಕೆ ಎಂದು ಕಿಡಿಕಾರಿದೆ.

ವೈರಲ್‌ ಆಯ್ತು ಗೃಹ ಸಚಿವರ ಹೇಳಿಕೆ!

ತುಮಕೂರಿನಲ್ಲಿ ಏಪ್ರಿಲ್‌ 16ರಂದು ನಡೆದಿದ್ದ ಯಾದವ ಸಮುದಾಯದ ಸಭೆಯಲ್ಲಿ ಮಾತನಾಡಿದ್ದ ಡಾ. ಜಿ. ಪರಮೇಶ್ವರ್, ಇವಿಎಂ ಬರುವ ಮೊದಲು ಚುನಾವಣೆ ಹೇಗೆ ನಡೆಯುತ್ತಿತ್ತು ಎಂಬುದನ್ನು ವಿವರಿಸಿದ್ದರು. ಯಾದವ ಸಮುದಾಯ ತಮ್ಮ ಮೇಲೆ ಇಟ್ಟಿದ್ದ ಪ್ರೀತಿಯ ಬಗ್ಗೆ ಹೇಳುವ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿ ಈಗ ವಿವಾದಕ್ಕೆ ಸಿಲುಕಿದ್ದಾರೆ.

ಪರಮೇಶ್ವರ್‌ ಹೇಳಿದ್ದೇನು?

ಮೊದಲೆಲ್ಲ ಮತದಾನಕ್ಕಾಗಿ ಎಲ್ಲವೂ ಒತ್ತೋದು. ಈ ಇವಿಎಂ ಇರಲಿಲ್ಲ. ಅವಾಗ ಒಬ್ಬರೋ ಇಬ್ಬರೋ ಸೇರಿಕೊಂಡು ಒತ್ತಿಬಿಡ್ರೋ ಅತ್ಲಾಗೆ ಅನ್ನೋರು. ಅನೇಕ ಸಂದರ್ಭದಲ್ಲಿ ನಾನು ಅದನ್ನು ಜ್ಞಾಪಿಸಿಕೊಳ್ಳುತ್ತೇನೆ. ನಮ್ಮ ಮಧುಚಂದ್ರ ಇವಾಗಲೂ ಇದ್ದಾನೆ. ನಮ್ಮ ಹಟ್ಟಿ ಒಳಗೆ ಒಬ್ರೋ ಇಬ್ರೋ ಕುಳಿತುಕೊಂಡು ಮತಕ್ಕೆ ಸಂಬಂಧಿಸಿ ಸೀಲ್‌ ಒತ್ತಿ ಅಂತಾ ಕಳುಹಿಸೋರು. ಇವತ್ತಿಗೂ ಸಹ ಯಾದವ ಸಮುದಾಯದವರು ನನ್ನನ್ನು ಕರೆಯೋದು ನಮ್ಮಯಪ್ಪ ಅಂತಲೇ. ಅದಕ್ಕಾಗಿ ನಾನು ಯಾದವ ಸಮುದಾಯದ ಖುಣ ತೀರಿಸುವ ಕೆಲಸವನ್ನು ಮಾಡಬೇಕಿದೆ. ಆ ಕೆಲಸವನ್ನು ನಾನು ಮಾಡಿಯೇ ತೀರುತ್ತೇನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ಸಖತ್‌ ವೈರಲ್‌ ಆಗಿದೆ.

ಕಾಂಗ್ರೆಸ್‌ ಗೆಲುವಿನ ಫಾರ್ಮುಲಾ ಈ ಕಳ್ಳವೋಟು; ಜೆಡಿಎಸ್‌ ಕಿಡಿ

ಈ ಬಗ್ಗೆ ಜೆಡಿಎಸ್‌ ರಾಜ್ಯ ಘಟಕವು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದೆ. ಡಾ. ಜಿ. ಪರಮೇಶ್ವರ್‌ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೊವನ್ನು ಸಹ ಅಪ್ಲೋಡ್‌ ಮಾಡಿದೆ. ಕಾಂಗ್ರೆಸ್‌ ಗೆಲುವಿನ ಫಾರ್ಮೂಲಾದ ಸೀಕ್ರೆಟ್‌ ಇದೇ ಆಗಿದೆ ಎಂದು ಕಿಡಿಕಾರಿದೆ. ಅಂದಹಾಗೆ ಇದನ್ನು ನಾವು ಹೇಳುತ್ತಿರುವುದಲ್ಲ, ಸ್ವತಃ ರಾಜ್ಯದ ಗೃಹ ಮಂತ್ರಿ ಪರಮೇಶ್ವರ್‌ ಅವರು ನೀಡಿರುವ ಹೇಳಿಕೆ ಇದಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: Neha Murder Case: ಕಾಂಗ್ರೆಸ್‌ನಿಂದ ಜಿಹಾದಿ ಕರ್ನಾಟಕ ಸೃಷ್ಟಿ, ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಆರ್. ಅಶೋಕ್‌ ಗುಡುಗು

ಜೆಡಿಎಸ್‌ ಪೋಸ್ಟ್‌ನಲ್ಲೇನಿದೆ?

“ಕಳ್ಳ ವೋಟು was the secret Winning Formula of @INCIndia!” ಇದನ್ನು ನಾವು ಹೇಳಿದಲ್ಲ, ಸ್ವತಃ ನಮ್ಮ ರಾಜ್ಯದ ಗೃಹಮಂತ್ರಿಗಳಾದ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. ಇದು ಅವರು ಬಯಲು ಮಾಡಿರುವ ಸತ್ಯ. ಈ ಹೇಳಿಕೆಯು ಕಾಂಗ್ರೆಸ್‌ ಪಕ್ಷದ ಅಸಲಿ ಮುಖವನ್ನು ಬಯಲು ಮಾಡಿದೆ.

ಇವಿಎಂ ಬರುವ ಮುಂಚೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದವರು ಒಬ್ಬರೋ ಇಬ್ಬರನ್ನೋ ಕೂರಿಸಿ ಕಳ್ಳ ಮತದಾನ ಮಾಡಿಸಿಕೊಂಡು, ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತಿತ್ತು. ಈ ಸತ್ಯವನ್ನು ಸಚಿವರೇ ಒಪ್ಪಿಕೊಂಡಿದ್ದಾರೆ.

ಇವಿಎಂ ಬದಲು ಮರಳಿ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿರುವುದು ಇದೇ ಕಾರಣಕ್ಕೆ!!” ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ.

Exit mobile version