ಬೀಜಿಂಗ್: ಈ ತಂತ್ರಜ್ಞಾನ ಯುಗವನ್ನು ಅಕ್ಷರಶಃ ಇಂಟರ್‌ನೆಟ್ ಆಳುತ್ತಿದೆ. ಪ್ರಪಂಚದ ಕೋಟ್ಯಂತರ ಮಂದಿ ಪ್ರತಿದಿನ ಆನ್‌ಲೈನ್ ವಿಡಿಯೊಗಳನ್ನು ತಯಾರಿಸಿ ಅವನ್ನು ಯುಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್ ಮುಂತಾದ ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಡುತ್ತಾರೆ. ಇಂತಹ ಕೆಲವೊಂದು ವಿಡಿಯೊಗಳು ಕೆಲವೇ ತಾಸುಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡು ವೈರಲ್ ಆಗುತ್ತವೆ. ಅಲ್ಲದೆ ಇಂತಹ ವಿಡಿಯೊಗಳೇ ಹಲವರ ಆದಾಯದ ಮೂಲವೂ ಹೌದು. ವಿಡಿಯೊಗಳಿಂದ ಕೋಟ್ಯಂತರ ರೂ. ಗಳಿಸುವವರು ನಮ್ಮ ಮಧ್ಯೆ ಇದ್ದಾರೆ. ಆದರೆ ಚೀನಾದ ಈ ಯುವತಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ಯಾಕೆಂದರೆ ಇವರು ಸೋಷಿಯಲ್ ಮೀಡಿಯಾ ಮೂಲಕ ಪ್ರತಿವಾರ ಬರೋಬ್ಬರಿ 120 ಕೋಟಿ ರೂ. ಗಳಿಸುತ್ತಾರೆ. ಅದು ಕೂಡ ಕೇವಲ 3 ಸೆಕೆಂಡ್‌ಗಳಲ್ಲಿ ಉತ್ಪನ್ನಗಳನ್ನು ಪರಿಚಯಿಸುವುದಕ್ಕೆ ಎನ್ನುವುದು ವಿಶೇಷ. ಸದ್ಯ ಈ ವಿಚಾರ ಸದ್ದು ಮಾಡುತ್ತಿದೆ (Viral News).
ಕೋಟಿ ಕೋಟಿ ಆದಾಯ
ಚೀನಾದ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ (Social media influencers) ಜೆಂಗ್ ಕ್ಸಿಯಾಂಗ್ ಕ್ಸಿಯಾಂಗ್ (Zheng Xiang Xiang) ಅವರೇ ಸೋಷಿಯಲ್ ಮೀಡಿಯಾ ಮೂಲಕ ಕೋಟಿ ಕೋಟಿ ಆದಾಯ ಗಳಿಸುತ್ತಿರುವವರು. ಅವರು ಆನ್‌ಲೈನ್ ಮೂಲಕ ವಿವಿಧ ಉತ್ಪನ್ನಗಳ ಪ್ರಚಾರ ಕ್ರಾಂತಿಯನ್ನೇ ಉಂಟು ಮಾಡಿದ್ದು, ಆ ಮೂಲಕ ಅಪಾರ ಆದಾಯ ಗಳಿಸುತ್ತಿದ್ದಾರೆ.
ಟಿಕ್‌ಟಾಕ್ ಆ್ಯಪ್‌ನ ಚೀನಾದ ಅವತರಿಣಿಕೆ ಡೌಯಿನ್‌ಲ್ಲಿ ಜೆಂಗ್ ಕ್ಸಿಯಾಂಗ್ 50 ಲಕ್ಷಕ್ಕಿಂತ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅವರು ಮಿಂಚಿನ ವೇಗದಲ್ಲಿ ಉತ್ಪನ್ನಗಳನ್ನು ಪರಿಚಯಿಸುವ ವಿಧಾನ ಬಹು ಜನಪ್ರಿಯವಾಗಿದೆ. ಬಹುತೇಕ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳು ಪ್ರತಿ ಉತ್ಪನ್ನಗಳ ಗುಣಗಳನ್ನು ವಿವರಿಸುತ್ತಾರೆ. ಆದರೆ ಜೆಂಗ್ ಕ್ಸಿಯಾಂಗ್ ಹಾಗಲ್ಲ. ಅವರು ಯಾವುದೇ ಪ್ರೊಡಕ್ಟ್ ಅನ್ನು ಮೂರು ಸೆಕೆಂಡ್‌ಗಳ ಕಾಲ ತೋರಿಸುತ್ತಾರಷ್ಟೆ. ಆ ಬಗ್ಗೆ ವಿವರಣೆಯನ್ನೂ ನೀಡುವುದಿಲ್ಲ. ಕೇವಲ ಬೆಲೆಯನ್ನಷ್ಟೇ ಹೇಳುತ್ತಾರೆ. ಅವರ ಈ ವಿಶಿಷ್ಟ ರೀತಿಯೇ ಜನರನ್ನು ಆಕರ್ಷಿಸುತ್ತಿದೆ.
ಲೈವ್ ಸ್ಟ್ರೀಮ್ ವೇಳೆ ಜೆಂಗ್ ಕ್ಸಿಯಾಂಗ್ ಅವರ ಸಹಾಯಕರು ಬಾಕ್ಸ್‌ನಲ್ಲಿ ಒಂದರ ಹಿಂದೆ ಒಂದರಂತೆ ಉತ್ಪನ್ನಗಳನ್ನು ನೀಡುತ್ತಾರೆ. ಜೆಂಗ್ ಕ್ಸಿಯಾಂಗ್ ಅದನ್ನು ಕೈಯಲ್ಲಿ ಹಿಡಿದು ಕ್ಯಾಮೆರಾದ ಮುಂದೆ ಪ್ರದರ್ಶಿಸಿ ಅದರ ಬೆಲೆ ಹೇಳಿ ಆಚೆ ಎಸೆಯುತ್ತಾರೆ. ಹೀಗೆ ಪ್ರತಿ ಉತ್ಪನ್ನಕ್ಕೆ ಅವರು ಕೇವಲ ಮೂರು ಸೆಕೆಂಡ್ ಅವಧಿಯನ್ನಷ್ಟೇ ವಿನಿಯೋಗಿಸುತ್ತಾರೆ.
ಇದನ್ನೂ ಓದಿ: Viral Video: ಕಾಳಿಂಗ ಸರ್ಪದೊಂದಿಗೆ ಮಗುವಿನ ಆಟ; ಇಲ್ಲಿದೆ ಬೆಚ್ಚಿ ಬೀಳಿಸುವ ವಿಡಿಯೊ
ವಾರಕ್ಕೆ 120 ಕೋಟಿ ರೂ. ಆದಾಯ!
ಜೆಂಗ್ ಕ್ಸಿಯಾಂಗ್ ಅವರ ಈ ಕ್ವಿಕ್ ರಿವ್ಯೂ ತಂದುಕೊಡುವ ಆದಾಯ ಮಾತ್ರ ನೀವು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಅವರು ಈ ವಿಡಿಯೊಗಳಿಂದ ವಾರಕ್ಕೆ ಸುಮಾರು 120 ಕೋಟಿ ರೂ. ಸಂಪಾದಿಸುತ್ತಾರೆ ಎಂದರೆ ನೀವು ನಂಬಲೇ ಬೇಕು. ಸಾಂಪ್ರದಾಯಿಕ ಶೈಲಿಯನ್ನು ಮೀರಿ ಅವರ ಈ ಕಿರು ಅವಧಿಯ ವಿಡಿಯೊ ಹೊಸತನದಿಂದ ಕೂಡಿದ್ದು, ಜನರನ್ನು ಬಹುವಾಗಿ ಆಕರ್ಷಿಸುತ್ತದೆ. ಈ ಕಾರಣಕ್ಕಾಗಿಯೇ ಅವರಿಗೆ ಈ ರೀತಿಯ ಬೇಡಿಕೆ ಕಂಡು ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ