Site icon Vistara News

Viral News: ನೀರ ಬಿಟ್ಟು ರಸ್ತೆಗೆ ಬಂದ ಮೊಸಳೆಗೆ ಇಲ್ಲೇನು ಕೆಲಸ? ಅಪರೂಪದ Video ಇಲ್ಲಿದೆ ನೋಡಿ

Viral News

Viral News

ಮುಂಬೈ: ಮೊಸಳೆ (Crocodile) ಜಲಚರ. ಸಾಮಾನ್ಯವಾಗಿ ನದಿಯಲ್ಲಿ, ದೊಡ್ಡ ದೊಡ್ಡ ಸರೋವರಗಳಲ್ಲಿ, ಸಮುದ್ರದಲ್ಲಿ ವಾಸಿಸುತ್ತವೆ. ಅಪರೂಪಕ್ಕೆ ದಡಕ್ಕೆ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಮೈ ಬೆಚ್ಚಗೆ ಮಾಡಿಕೊಂಡು ಮತ್ತೆ ನೀರೊಳಗೆ ತೆರಳುತ್ತವೆ. ಇದೆಲ್ಲರಿಗೂ ಗೊತ್ತಿರುವ ವಿಷಯ. ಇದರಲ್ಲೇನು ವಿಶೇಷ ಎಂದು ನೀವು ಪ್ರಶ್ನಿಸಬಹುದು. ಇಲ್ಲಿದೆ ಟ್ವಿಸ್ಟ್‌. ನೀರಲ್ಲಿ ಇರುವ ಮೊಸಳೆ ನಗರಕ್ಕೆ ಅದರಲ್ಲಿಯೂ ಜನ ನಿಬಿಡ ರಸ್ತೆಗೆ ಬಂದರೆ ಹೇಗಾಗಬಹುದು? ಇದೆಲ್ಲ ಕಲ್ಪನೆ, ಸಿನಿಮಾದಲ್ಲಿ ನಡೆಯಬಹುದು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಹಾಗಾದರೆ ನಿಜವಾಗಿಯೂ ರಸ್ತೆಗೆ ಮೊಸಳೆ ಬಂದಿತ್ತೆ? ಎಲ್ಲಿ? ಯಾಕೆ? ಮುಂತಾದ ನಿಮ್ಮ ಪ್ರಶ್ನೆಗೆ ಈ ವೈರಲ್‌ ವಿಡಿಯೊದಲ್ಲಿ ಇದೆ ಉತ್ತರ (Viral News).

ಮಹಾರಾಷ್ಟ್ರದಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಈ ಮಳೆಗೆ ಬೇಗ ಬೇಗ ಮನೆ ಸೇರಿಕೊಂಡು ಬಿಡಬೇಕು ಎಂದು ಧಾವಂತದಲ್ಲಿ ಸಾಗುತ್ತಿದ್ದ ರತ್ನಗಿರಿ ಜಿಲ್ಲೆಯ ಜನರಿಗೆ ಕನಸಿನಲ್ಲಿಯೂ ಊಹಿಸದ ಅಚ್ಚರಿ ರಸ್ತೆ ಮಧ್ಯೆ ಎದುರಾಗಿತ್ತು. ತಮ್ಮ ಪಾಡಿಗೆ ತಾವು ಸಾಗುತ್ತಿದ್ದ ವಾಹನ ಚಾಲಕರು ಒಂದು ಕ್ಷಣ ದಂಗಾಗಿ ನಿಂತು ಅಪರೂಪದ ಅತಿಥಿಯನ್ನು ದಿಟ್ಟಿಸಿ ನೋಡತೊಡಗಿದರು. ಹೌದು, ಭಾರಿ ಮಳೆಯಿಂದಾಗಿ ಬೃಹತ್‌ ಗಾತ್ರದ ಮೊಸಳೆಯೊಂದು ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಎತ್ತ ಹೋಗಬೇಕು ಎನ್ನುವುದು ತಿಳಿಯದೆ ಅದು ಜನ ನಿಬಿಡ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿರುವ ದೃಶ್ಯ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ವಿಡಿಯೊದಲ್ಲಿ ಏನಿದೆ?

ರತ್ನಗಿರಿ ಜಿಲ್ಲೆಯ ಚಿಪ್ಲುನ್‌ ಎಂಬಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಚಿಪ್ಲುನ್‌ನಲ್ಲಿ ಹರಿಯುವ ಶಿವ ನದಿ ಅನೇಕ ಮೊಸಳೆಗಳಿಗೆ ಆಶ್ರಯತಾಣ. ಇಲ್ಲಿ ಜೋರಾಗಿ ಸುರಿದ ಮಳೆಗೆ ಬೃಹತ್‌ ಗಾತ್ರದ ಮೊಸಳೆಯೊಂದು ನೀರಿನಲ್ಲಿ ಕೊಚ್ಚಿಕೊಂಡು ಬಂದಿದೆ. ಅದು ರಸ್ತೆಯಲ್ಲಿ ಸಂಚರಿಸುವುದನ್ನು ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ವಾಹನಗಳ ಬೆಳಕಿನಲ್ಲಿ ಮೊಸಳೆ ರಸ್ತೆಯಲ್ಲಿ ರಾಜಾರೋಷವಾಗಿ ಅಡ್ಡಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ರತ್ನಗಿರಿ ಮೊಸಳೆಗಳಿಗೆ ಪ್ರಸಿದ್ಧ

ಭಾರತದ ಮೂರು ಮೊಸಳೆ ಪ್ರಭೇದಗಳಲ್ಲಿ ಒಂದಾದ ಮಗ್ಗರ್ ಮೊಸಳೆಗಳಿಗೆ ರತ್ನಗಿರಿ ಬಹಳ ಪ್ರಸಿದ್ಧ. ರತ್ನಗಿರಿ ಜಿಲ್ಲೆಯ ಚಿಪ್ಲುನ್ ಮತ್ತು ಇತರ ಸ್ಥಳಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇದರಿಂದ ನದಿಗಳ ನೀರಿನ ಮಟ್ಟ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಜುಲೈ 2ರ ತನಕ ಧಾರಾಕಾರ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

ಸದ್ಯ ವಿಡಿಯೊ ನೋಡಿದರ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮೊಸಳೆ ನೆಲದ ಮೇಲೆ ಇಷ್ಟು ಸರಾಗವಾಗಿ ನಡೆಯುತ್ತದೆ ಎನ್ನುವುದು ಗೊತ್ತೆ ಇರಲಿಲ್ಲ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ. ಕಣ್ಣನ್ನು ನಂಬಲೇ ಸಾಧ್ಯವಾಗುತ್ತಿಲ್ಲ ಎಂದು ಇನ್ನೂ ಹಲವರು ಉದ್ಘರಿಸಿದ್ದಾರೆ. ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕೋ ಎಂದು ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನೀರು ಬಿಟ್ಟು ರಸ್ತೆಯಲ್ಲಿ ಮೊಸಳೆಗೆ ಏನು ಕೆಲಸ? ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

Exit mobile version