ಕೆಲವೊಂದು ಆಸ್ಪತ್ರೆಗಳು ತಮ್ಮಲ್ಲಿ ನಡೆದ ಶಸ್ತ್ರಚಿಕಿತ್ಸೆಗಳನ್ನು ವಿಡಿಯೊ ಮಾಡಿ ಯುಟ್ಯೂಬ್‍ನಲ್ಲಿ ಪೋಸ್ಟ್ ಮಾಡುತ್ತಾರೆ. ಹಾಗಾಗಿ ನಾವು ಯುಟ್ಯೂಬ್‍ನಲ್ಲಿ ಹಲವು ಶಸ್ತ್ರಚಿಕಿತ್ಸೆಗಳ ವಿಡಿಯೊಗಳನ್ನು ನೋಡುತ್ತೇವೆ. ಆದರೆ ಚೀನಾದಲ್ಲಿ ಮಹಿಳೆಯೊಬ್ಬಳ ಸ್ತನ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ರಹಸ್ಯವಾಗಿ ಚಿತ್ರೀಕರಿಸಿದ ಆಸ್ಪತ್ರೆ ಅದನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೊ ಎಲ್ಲೆಡೆ ವೈರಲ್ (Viral News) ಆಗಿದೆ. ಇದರಿಂದ ನೊಂದ ಮಹಿಳೆ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ವರದಿ ಪ್ರಕಾರ, ಮಹಿಳೆ ಜನವರಿಯಲ್ಲಿ ಮಧ್ಯ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಯಲ್ಲಿ ಸ್ತನದ ಗಾತ್ರದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ತಿಂಗಳುಗಳ ನಂತರ, ಇತರ ಹಲವಾರು ಮಹಿಳೆಯರೊಂದಿಗೆ ತನ್ನ ವಿಡಿಯೊ ಚೀನಾದ ಸೋಶಿಯಲ್ ಮೀಡಿಯಾದ ಪ್ಲಾಟ್‍ಫಾರ್ಮ್‍ನಲ್ಲಿ ಪ್ರಸಾರವಾಗುತ್ತಿರುವುದನ್ನು ಕಂಡು ಅವಳು ಶಾಕ್ ಆದಳು. ಈ ಕ್ಲಿಪ್‍ನಲ್ಲಿ ಆಕೆಗೆ ಶಸ್ತ್ರಚಿಕಿತ್ಸೆಯ ನಂತರ, ಬ್ಯಾಂಡೇಜ್ ಮತ್ತು ಅರಿವಳಿಕೆಗೆ ಒಳಗಾಗಿರುವುದನ್ನು ತೋರಿಸಿದೆ ಎಂದು ವರದಿಯಾಗಿದೆ.
ಈ ಘಟನೆಯ ಬಗ್ಗೆ ಬೇಸರಗೊಂಡ ಮಹಿಳೆ ತನ್ನ ಜೀವನದಲ್ಲಿ ರಹಸ್ಯವಾಗಿಡಬೇಕಾಗಿದ್ದ ಈ ವಿಚಾರವನ್ನು ಬಹಿರಂಗಪಡಿಸಬಾರದೆಂದು ತಿಳಿಸಿ ವಿಡಿಯೊ ಶೂಟ್ ಮಾಡಿದ ವ್ಯಕ್ತಿಯನ್ನು ಗುರುತಿಸುವಂತೆ ಮತ್ತು ವಿಡಿಯೊವನ್ನು ಡಿಲೀಟ್ ಮಾಡುವಂತೆ ಆಕೆ ಪದೇ ಪದೇ ಆಸ್ಪತ್ರೆಯನ್ನು ಸಂಪರ್ಕಿಸಿ ವಿನಂತಿಸಿಕೊಂಡಿದ್ದಾಳೆ. ಹಾಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಮತ್ತು ಪರಿಹಾರವನ್ನು ನೀಡುವಂತೆ ಆಕೆ ಆಸ್ಪತ್ರೆಯ ಅಧಿಕಾರಿಗಳನ್ನು ಕೇಳಿದ್ದಾಳೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಕ್ಷಮೆಯಾಚಿಸಲು ಹಾಗೂ ವಿಡಿಯೊವನ್ನು ಡಿಲೀಟ್ ಮಾಡಲು ನಿರಾಕರಿಸಿದ್ದಾರೆ. ಈ ವಿಡಿಯೊವನ್ನು ಯಾರು ಮಾಡಿದರೆಂದು ಪತ್ತೆಹಚ್ಚುವುದು ಅಸಾಧ್ಯ ಎಂದು ಆಸ್ಪತ್ರೆ ಹೇಳಿದೆ.
ಆದರೆ ವಿಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ಯಾರು ಎಂಬುದು ಆಸ್ಪತ್ರೆಯವರಿಗೆ ತಿಳಿದಿರಬೇಕು. ಯಾಕೆಂದರೆ ಆಸ್ಪತ್ರೆಯ ಆಪರೇಟಿಂಗ್ ಥಿಯೇಟರ್‌ನೊಳಗೆ ವೈದ್ಯರ ಅನುಮತಿ ಇಲ್ಲದೇ ಸಾಮಾನ್ಯ ಜನರು ಬರಲು ನಿಷೇಧವಿದೆ. ಮತ್ತು ಈ ವಿಡಿಯೊದಲ್ಲಿ ವೈದ್ಯರು ಮತ್ತು ನರ್ಸ್‍ಗಳಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರಿಂದಾಗಿ ಹೊರಗಿನವರು ಪ್ರವೇಶಿಸಲು ಮತ್ತು ವಿಡಿಯೊ ಮಾಡಲು ಸಾಧ್ಯವಿಲ್ಲ ಎಂದು ಮಹಿಳೆ ವಾದಿಸಿದ್ದಾಳೆ. ಆದರೆ ವಿಡಿಯೊವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯು ಆಸ್ಪತ್ರೆಯಿಂದ ಹೊರಹೋಗಿದ್ದಾನೆ ಮತ್ತು ಅವರು ತಮ್ಮ ಬಗ್ಗೆ ಮಾಹಿತಿಯನ್ನು ನೀಡಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿದೆ. ಹಾಗಾಗಿ ಆಸ್ಪತ್ರೆಯ ವಿರುದ್ದ ಸಿಟ್ಟಿಗೆದ್ದ ಮಹಿಳೆ ಆಸ್ಪತ್ರೆಯ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾಳೆ.
ಇದನ್ನೂ ಓದಿ: ವಾಟರ್ ಟ್ಯಾಂಕ್ ಮೇಲಿನಿಂದ ಜಿಗಿದ ವಿದ್ಯಾರ್ಥಿ; ವಿಡಿಯೋ ಇದೆ
ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣ ಆಸ್ಪತ್ರೆಯ ಈ ಪ್ರತಿಕ್ರಿಯೆಗೆ ಆನ್‍ಲೈನ್‍ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆಯ ಬೇಜವಾಬ್ದಾರಿಯ ಬಗ್ಗೆ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿದ ಹೆನಾನ್ನ ಟಿಯಾನ್ಕ್ಸಿನ್(Tianxin) ಕಾನೂನು ಸಂಸ್ಥೆಯ ವಕೀಲ ಮಾ ಬಿನ್, ರೋಗಿಗಳ ಮುಖಗಳನ್ನು ಅವರ ಒಪ್ಪಿಗೆಯಿಲ್ಲದೆ ತೋರಿಸುವ ವಿಡಿಯೊಗಳನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡುವುದು ಗೌಪ್ಯತೆ ಹಕ್ಕುಗಳು ಮತ್ತು ಇಮೇಜ್ ಹಕ್ಕುಗಳ ಉಲ್ಲಂಘನೆಯಾಗಿದೆ . ವಿಡಿಯೊವನ್ನು ಹೊರಗಿನ ವ್ಯಕ್ತಿ ಮಾಡಿದ್ದರೂ ಕೂಡ ಅದಕ್ಕೆ ಆಸ್ಪತ್ರೆಯೇ ಜವಾಬ್ದಾರವಾಗಿರುತ್ತದೆ ಎಂದು ತಿಳಿಸಿದ್ದಾರೆ