Site icon Vistara News

Viral News: ದೂರದ ಇಂಗ್ಲೆಂಡ್‌ನಲ್ಲಿಯೂ ಕೇರಳ ಕಲರವ; ನೆಟ್ಟಿಗರ ಗಮನ ಸೆಳೆದ ವಿಡಿಯೊ ಇಲ್ಲಿದೆ

Viral News

Viral News

ಲಂಡನ್‌: ದೇವರ ಸ್ವಂತ ನಾಡು (God’s Own Country) ಎಂದು ಕರೆಯಲ್ಪಡುವ ಕೇರಳ (Kerala) ಪ್ರಾಕೃತಿಕವಾಗಿ ಸಂಪತ್ಭರಿತ ರಾಜ್ಯ. ಇದೇ ಕಾರಣಕ್ಕೆ ದೇಶ-ವಿದೇಶದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇದೀಗ ಕೇರಳ ಪ್ರವಾಸೋದ್ಯಮ ಇಲಾಖೆಯು ಬಸ್ ಬ್ರ್ಯಾಂಡಿಂಗ್ ಮೂಲಕ ಕೇರಳದ ಹಿರಿಮೆಯನ್ನು ವಿದೇಶಗಳಲ್ಲಿ ಪಸರಿಸಲು ಮುಂದಾಗಿದೆ. ದೂರದ ಇಂಗ್ಲೆಂಡ್‌ನಲ್ಲಿ ಇದೀಗ ಕೇರಳದ ಪ್ರಾಕೃತಿಕ ಸೌಂದರ್ಯ ಬಹು ಜನಪ್ರಿಯ. ಅದಕ್ಕೆ ಕಾರಣವಾಗಿದ್ದು ಲಂಡನ್‌ನ ಡಬಲ್ ಡೆಕ್ಕರ್ ಬಸ್‌ನ ಅಲಂಕರಿಸಿರುವ ಕೇರಳದ ಅದ್ಭುತ ದೃಶ್ಯಗಳು. ಸದ್ಯ ಬಸ್‌ ರಸ್ತೆಯಲ್ಲಿ ಸಂಚರಿಸುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ಡಬಲ್ ಡೆಕ್ಕರ್ ಬಸ್‌ನ ಸುತ್ತ ಕೇರಳದ ಸುಂದರ ಹಿನ್ನೀರಿನ ದೃಶ್ಯಗಳನ್ನು ಅಳವಡಿಸಲಾಗಿದೆ. ಈ ಮನವೋಹಕ ದೃಶ್ಯವನ್ನು ನೋಡಿದ ಎಂತಹವರೂ ತಲೆದೂಗಲೇಬೇಕು. ಕೇರಳದತ್ತ ಆಕರ್ಷಿತರಾಗಲೇಬೇಕು. ರಾಜ್ಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಈ ಜಾಹೀರಾತು ಈಗಾಗಲೇ ಹಲವರ ಗಮನ ಸೆಳೆದಿದೆ. ವಿಶೇಷವಾಗಿ ಬೇಸಿಗೆ ರಜಾದಿನಗಳಲ್ಲಿ ಪ್ರವಾಸಿಗರನ್ನು ಇನ್ನಷ್ಟು ರಾಜ್ಯದತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಕೇರಳ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜಾಹೀರಾತು ಹೊತ್ತ ಬಸ್‌ ದೂರದ ಲಂಡನ್‌ನಲ್ಲಿ ಸಂಚರಿಸುತ್ತಿರುವುದನ್ನು ನೋಡಿ ಅನೇಕರು ರೋಮಾಂಚಿತರಾಗಿದ್ದಾರೆ. ಬಸ್‌ನಲ್ಲಿ ಚಿತ್ರೀಕರಿಸಿರುವ ಹಿನ್ನೀರಿನ ದೃಶ್ಯಗಳನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಬಳಿಕ ವಿಡಿಯೊ ಬಸ್‌ನ ಸಂಪೂರ್ಣ ಚಿತ್ರಣವನ್ನು ಒದಗಿಸುತ್ತದೆ. ಅಲಪ್ಪುಳದ ಹೌಸ್‌ ಬೋಟ್‌, ಸ್ನೇಕ್ ಬೋಟ್ ರೇಸ್‌ ಮತ್ತು ನದಿ, ಹಸಿರಿನ ಚಿತ್ರದೊಂದಿಗೆ ಈ ಬಸ್‌ ಕೇರಳ ಪ್ರವಾಸೋದ್ಯಮದ ಲಾಂಛನವನ್ನೂ ಒಳಗೊಂಡಿದೆ. ಬಸ್‌ನ ಒಂದು ಬದಿಯಲ್ಲಿ #TravelForGood ಎಂದು ಹ್ಯಾಶ್ ಬರೆಯಲಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೊ ನೋಡಿದ ನೆಟ್ಟಿಗರು ಖುಷಿಯ ಉದ್ಘಾರ ತೆಗೆದಿದ್ದಾರೆ. ʼʼವಾವ್‌! ಇಡೀ ಆಲಪ್ಪುಳವೇ ಈ ಒಂದು ಬಸ್‌ನಲ್ಲಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಆಳಪ್ಪುಳ ಮತ್ತು ಕುಟ್ಟನಾಡು ತನ್ನ ಸೌಂದರ್ಯದಿಂದ ವಿದೇಶಿಗರನ್ನೂ ಸೆಳೆಯುತ್ತದೆʼʼ ಎಂದಿದ್ದಾರೆ ಮತ್ತೊಬ್ಬರು. ಇನ್ನೊಬ್ಬರು ಕಮೆಂಟ್‌ ಮಾಡಿ ʼʼಪ್ರಪಂಚದಾದ್ಯಂತದ ಜನರು ಭಾರತವನ್ನು ಕೇರಳದ ಮೂಲಕ ಗುರುತಿಸುತ್ತಿರುವುದು ಹೆಮ್ಮೆಯ ಸಂಗತಿʼʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಗದೊಬ್ಬರು ಈ ಜಾಹೀರಾತಿನ ಯೋಚನೆಯನ್ನು ಶ್ಲಾಘಿಸಿದ್ದಾರೆ. ʼʼಅತ್ಯುತ್ತಮ ಯೋಜನೆ ಇದು. ಕೇರಳ ಪ್ರವಾಸೋದ್ಯಮಕ್ಕೆ ಇಲಾಖೆಗೆ ಹ್ಯಾಟ್‌ಆಫ್‌ʼʼ ಎಂದಿದ್ದಾರೆ.

ಇದನ್ನೂ ಓದಿ: Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

ಕೇರಳ ಪ್ರವಾಸೋದ್ಯ,ಮ ಸಚಿವ ಪಿ.ಎ..ಮೊಹಮ್ಮದ್‌ ರಿಯಾಸ್‌ ಈ ವಿಡಿಯೊವನ್ನು ಶೇರ್‌ ಮಾಡಿದ್ದಾರೆ. ʼʼಕೇರಳ ಟೂರಿಸಂನ ಹೊಸ ಅಭಿಯಾನ ಇದು. ನಮ್ಮ ಆಲಪ್ಪುಳ ಮತ್ತು ಹೌಸ್‌ಬೋಟ್‌ ಲಂಡನ್‌ನ ಬಸ್ಸಿನಲ್ಲಿ ರಾರಾಜಿಸುತ್ತಿದೆ. ಇನ್ನಷ್ಟು ದೇಶಗಳಲ್ಲಿ ಈ ರೀತಿಯ ಜಾಹೀರಾತು ಅಭಿಯಾನ ಮುಂದುವರಿಸಲಿದ್ದೇವೆʼʼ ಎಂದು ತಿಳಿಸಿದ್ದಾರೆ. ಕೇರಳದ ಈ ರೀತಿಯ ಸೃಜನಶೀಲತೆ ಹಿಂದೆಯೂ ವಿದೇಶಿಗರ ಗಮನ ಸೆಳೆದಿತ್ತು. 2018ರಲ್ಲಿಯೂ ಲಂಡನ್‌ನ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಕೇರಳದ ಪ್ರವಾಸಿ ತಾಣಗಳನ್ನು ಪ್ರಚುರಪಡಿಸಲಾಗಿತ್ತು. ಒಟ್ಟಿನಲ್ಲಿ ಕೇರಳದ ಈ ಐಡಿಯ ಸೂಪರ್‌ ಎಂದಿದ್ದಾರೆ ನೆಟ್ಟಿಗರು.

Exit mobile version