ಎಂದಾದರೂ ರೆಸ್ಟೋರೆಂಟಿಗೆ ಹೋಗಿ ನಿಮ್ಮ ಊಟಕ್ಕೆ ನೀವೇ ತಯಾರಿ ಮಾಡಿ ಕೊಟ್ಟಿದ್ದೀರಾ?
ಇದೆಂಥಾ ಪ್ರಶ್ನೆ! ರೆಸ್ಟೋರೆಂಟಿಗೆ ಹೋಗೋದು ಅಡುಗೆಗೆ ಸಹಾಯ ಮಾಡೋದಕ್ಕಾ? ಎಲ್ಲಾದರೂ ಉಂಟೇ? ಇದರ ಬದಲು ನಮ್ಮ ನಮ್ಮಮನೆಯಲ್ಲೇ ಅಡುಗೆ ಮಾಡಿ ಉಣ್ಣಬಹುದಲ್ವಾ? ರೆಸ್ಟೋರೆಂಟಿಗೆ ಹೋಗಿ ಉಣ್ಣುವ ಕರ್ಮ ಯಾಕೆ ಎನ್ನುತ್ತೀರಾ? ಹಾಗಾದರೆ ಇಲ್ಲಿ ಕೇಳಿ. ಇಲ್ಲೊಂದು ರೆಸ್ಟೋರೆಂಟು ನಿಮಗೆ ಒಂದು ಡಿಫರೆಂಟ್ ಅನುಭವ ನೀಡಲು ಮುಂದಾಗಿದೆ. ಇಲ್ಲಿ ನಿಮ್ಮ ಊಟಕ್ಕೆ ಬೇಕಾದ ಮೀನನ್ನು ನೀವೇ ಹಿಡಿದು ಕೊಡಬಹುದು. ಸ್ವಲ್ಪ ಹೊತ್ತಿನಲ್ಲಿ ನಿಮಗೆ ನೀವು ಹಿಡಿದ ಮೀನಿನ ಅಡುಗೆ ಸಿದ್ಧವಾಗಿ ನಿಮ್ಮ ಟೇಬಲ್ ಮುಂದೆ ರೆಡಿಯಾಗುತ್ತದೆ!
ಹೌದು. ಜಪಾನಿನ ಒಸಾಕಾದಲ್ಲಿನ ಝೌ ಎಂಬ ರೆಸ್ಟೋರೆಂಟೊಂದು ಇಂತಹ ವಿನೂತನ ಐಡಿಯಾ ಮಾಡಿದೆ. ಇಲ್ಲಿಗೆ ಬರುವ ಗ್ರಾಹಕರು, ರೆಸ್ಟೋರೆಂಟಿನ ಒಳಗಿರುವ ಕೊಳದ ಪಕ್ಕ ಕೂತು ಗಾಳ ಹಾಕಿ ಮೀನು ಹಿಡಿಯಬಹುದು. ಅಥವಾ ದೋಣಿಯಲ್ಲಿ ಕೊಳದಲ್ಲಿ ಸುತ್ತಾಡಿ, ಮೀನು ಹಿಡಿಯಬಹುದು. ಮೀನು ಹಿಡಿದಿರೆಂದಾದಲ್ಲಿ, ಈ ರೆಸ್ಟೋರೆಂಟು ಅದನ್ನು ಘೋಷಿಸಿ ಗ್ರಾಹಕರು ಮಾಡಿದ ಸಾಧನೆಯನ್ನು ಎಲ್ಲರಿಗೂ ಕೇಳುವಂತೆ ಹೇಳಿ, ಮೀನು ಹಿಡಿದ ಗ್ರಾಹಕ ಹಾಗೂ ಮೀನಿನ ಜೊತೆಗೆ ಫೋಟೋ ಕ್ಲಿಕ್ಕಿಸುತ್ತಾರೆ. ಇದಾದ ನಂತರ ಈ ಮೀನನ್ನು ರೆಸ್ಟೋರೆಂಟಿನ ಅಡುಗೆಯವರ ಬಳಿಗೆ ಕಳಿಸಲಾಗುತ್ತದೆ. ಅವರು, ಮೀನು ಹಿಡಿದವರ ಆಸೆಯಂತೆ, ಅವರ ರುಚಿಗೆ ತಕ್ಕಂತೆ ಅವರಿಗೆ ಬೇಕಾದ ಅಡುಗೆಯನ್ನು ಮಾಡುತ್ತಾರೆ. ಮಾಡಿದ ಅಡುಗೆ ಸ್ವಲ್ಪ ಹೊತ್ತಿನಲ್ಲಿ ಟೇಬಲ್ಲಿಗೆ ಬರುತ್ತದೆ!
ಇಂಥದ್ದೊಂದು ವಿಶಿಷ್ಟ ಮಾದರಿಯ ರೆಸ್ಟೋರೆಂಟಿನ ಬಗೆಗಿನ ವಿಡಿಯೋ ಒಂದು ಇನ್ಸ್‌ಟಾಗ್ರಾಂನಲ್ಲಿ ಶೇರ್ ಮಾಡಲಾಗಿದ್ದು, ೧೯ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ಈ ಹೊಸ ಬಗೆಯ ರೆಸ್ಟೋರೆಂಟಿನ ಐಡಿಯಾಕ್ಕೆ ಫಿದಾ ಆಗಿದ್ದಾರೆ.
ರೆಸ್ಟೋರೆಂಟ್ ತನ್ನ ವೆಬ್‌ಸೈಟಿನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ʻನಿಮಗೆ ಮೀನು ಹಿಡಿಯಲು ಆಸೆಯಿದ್ದರೆ ಇಲ್ಲಿಗೆ ಬನ್ನಿ. ಕಡಿಮೆ ದರದಲ್ಲಿ, ಮೀನು ಹಿಡಿಯಿರಿ, ಅಷ್ಟೇ ಅಲ್ಲ, ನೀವೇ ಹಿಡಿದ ತಾಜಾ ಮೀನನ್ನೇ ತಿನ್ನಿ. ಮೀನು ಹಿಡಿಯುವುದು ಹೇಗೆ ಎಂದೂ ನಿಮಗೆ ತಿಳಿದ ಅನುಭವವೂ ಇಲ್ಲಿ ದಕ್ಕುವ ಜೊತೆಗೆ ಅದೇ ಮೀನಿನಡುಗೆಯನ್ನು ತಿಂದ ಸಂತೃಪ್ತಿಯೂ ನಿಮ್ಮದುʼ ಎಂದಿದೆ.
ಇದನ್ನೂ ಓದಿ | Viral Video | ಸರಿಯಾದ ಸಮಯಕ್ಕೆ ಬಾರದೆ ವಿಮಾನ ತಪ್ಪಿಸಿಕೊಂಡ ಮಹಿಳೆ, ಏರ್ಪೋರ್ಟ್ನಲ್ಲಿ ಮಾಡಿದ್ದು ಹುಚ್ಚಾಟ !
ಮಜಾ ಎಂದರೆ, ರೆಡ್ ಸ್ನ್ಯಾಪರ್ ಮೀನಿನ ನಿಜವಾದ ಬೆಲೆ ೪,೧೮೦ ಜಪಾನಿ ಯೆನ್‌ಗಳಾಗಿದ್ದು, ಇದನ್ನೂ ನೀವೇ ಹಿಡಿದಿರೆಂದಾದಲ್ಲಿ ಇದರ ಬೆಲೆ ೧,೮೧೦ ರೂಪಾಯಿಗಳಂತೆ!
ಇದನ್ನು ಕೇಳಿ ಹೌದಾ ಎಂದು ಕೊಳಕ್ಕೆ ನೆಗೆದುಬಿಡಬೇಡಿ. ಇಲ್ಲಿಗೇ ಕಥೆ ಮುಗಿದಿಲ್ಲ. ಮೀನು ಹಿಡಿಯಲು ಹಾಗೇ ಹೊರಟು ಬಿಡಲಾಗುವುದಿಲ್ಲ ಎಂಬುದು ನೆನಪಿದೆಯೇ? ಈ ರೆಸ್ಟೋರೆಂಟಿನೊಳಕ್ಕೆ ಕಾಲಿಟ್ಟು, ಅದೇನೇ ಆಗಲಿ ಈ ಬಾರಿ ರೆಡ್ ಸ್ನ್ಯಾಪರ್ ಮೀನು ಹಿಡಿದೇ ಬಿಡುತ್ತೇನೆ ಎಂದು ಶಪಥ ಹಾಕಿ ಮೀನು ಹಿಡಿಯಲು ಕೊಳಕ್ಕೆ ಧುಮುಕುವ ಮೊದಲು, ಗಾಳ ಕೊಂಡುಕೊಳ್ಳುವುದು ಬಹಳ ಮುಖ್ಯ ಎಂಬುದು ನೆನಪಿಡಿ. ಅದಕ್ಕಾಗಿ ಈ ರೆಸ್ಟೋರೆಂಟಿನಲ್ಲಿ ೧೧೦ ಜಪಾನೀ ಯೆನ್ ಪ್ರತ್ಯೇಕವಾಗಿ ನೀಡಬೇಕು.
ಮೀನು ಹಿಡಿಯುವುದು ಕಷ್ಟವಾಗುತ್ತದೆ ಎಂದನಿಸಿದರೆ, ರೆಸ್ಟೋರೆಂಟಿನ ಸಿಬ್ಬಂದಿಗಳ ಕೈಯಲ್ಲಿ ಹೇಗೆ ಹಿಡಿಯುವುದು ಎಂದು ಕಲಿಯಬಹುದು. ಅವರೂ ಗ್ರಾಹಕರ ಜೊತೆ ಸಹಾಯಕ್ಕೆ ಬರುತ್ತಾರಂತೆ.
ಬಹಳಷ್ಟು ಮಂದಿಗೆ ಈ ರೆಸ್ಟೋರೆಂಟಿನ ವಿನೂತನ ಐಡಿಯಾ ಬಹಳ ಇಷ್ಟವಾಗಿದೆ. ಹಲವರು ಇದನ್ನು ತಮ್ಮ ಬಕೆಟ್ ಲಿಸ್ಟಿಗೆ ಸೇರಿಸುತ್ತೇವೆಂದು ಬರೆದುಕೊಂಡಿದ್ದಾರೆ. ಇದೊಂದು ಬಹಳ ಇಂಟರೆಸ್ಟಿಂಗ್ ಐಡಿಯಾ ಎಂದು ಅನೇಕರು ಹೊಗಳಿದ್ದಾರೆ. ಮತ್ತೊಬ್ಬರು ನಾವು ಈಗಾಗಲೇ ಇಲ್ಲಿ ನು ಹಿಡಿದು ಉಂಡಿದ್ದೇವೆ, ಇದೊಂದು ಬಹಳ ಸುಂದರ ಅನುಭವ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Viral Video | ಹಿಮಾಚಲ ಪ್ರದೇಶದಲ್ಲಿ ಆಂಬ್ಯುಲೆನ್ಸ್ಗಾಗಿ ತಮ್ಮ ಬೆಂಗಾವಲು ಕಾರು ನಿಲ್ಲಿಸಿದ ಪ್ರಧಾನಿ ಮೋದಿ