ಬೆಂಗಳೂರು: ತಂಗಿ ಮನೆಯಲ್ಲೇ ಕಳ್ಳತನ (theft) ಮಾಡದ ಅಕ್ಕ ಪೊಲೀಸರ ಬಲೆಗೆ ಬಿದ್ದ ಘಟನೆ ಬೆಂಗಳೂರಿನ (bengaluru) ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral News) ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಭಾಗದ ಶಶಿಕಲಾ (30) ಬಂಧಿತ ಆರೋಪಿ.
ಗಂಡನಿಗೆ ಹುಷಾರಿಲ್ಲ ಎಂದು ಗಂಡನೊಂದಿಗೆ ಅಕ್ಕನ ಮನೆಗೆ ತಂಗಿ ಹೋಗಿದ್ದಾಗ ಈ ಘಟನೆ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಅಕ್ಕನ ಮನೆಗೆ ಹೋಗಿದ್ದ ತಂಗಿ ಮತ್ತು ಆಕೆಯ ಪತಿ ಔಷಧ ತರಲು ಅಕ್ಕನಿಗೆ ಸ್ಕೂಟರ್ ಕೀ ಕೊಟ್ಟಿದ್ದರು. ಸ್ಕೂಟರ್ ಕೀ ಯೊಂದಿಗೆ ತಂಗಿಯ ಮನೆ ಕೀ ಕೂಡ ಇತ್ತು. ಇದನ್ನು ಗಮನಿಸಿದ ಅಕ್ಕ ನೇರವಾಗಿ ತಂಗಿಯ ಮನೆಗೆ ಹೋಗಿದ್ದಾಳೆ.
ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ತಂಗಿಯ ಮನೆಯ 100 ಮೀಟರ್ ದೂರದಲ್ಲಿ ಸ್ಕೂಟರ್ ನಿಲ್ಲಿಸಿ ನಡೆದುಕೊಂಡು ತಂಗಿ ಮನೆಗೆ ಹೋದ ಅಕ್ಕನಿಗೆ ಬೀರು ಕೀ ಸಿಗದ ಕಾರಣ ಬೀರು ಒಡೆದು ಚಿನ್ನ ಮತ್ತು ಬೆಳ್ಳಿಯನ್ನು ಕಳ್ಳತನ ಮಾಡಿದ್ದಾಳೆ.
ಮನೆಗೆ ಬಂದ ತಂಗಿಗೆ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ತಿಳಿದು ಆಡುಗೋಡಿ ಠಾಣೆಗೆ ದೂರು ನೀಡಿದ್ದರು. ಮನೆ ಕೀ ಒಡೆಯದೆ ಬೀರು ಬೀಗ ಮಾತ್ರ ಒಡೆದಿರುವುದು ಪೊಲೀಸರ ಸಂಶಯಕ್ಕೆ ಕಾರಣವಾಗಿತ್ತು.
ಈ ವೇಳೆ ಸಿಸಿಟಿವಿ ಮೂಲಕ ಟ್ರ್ಯಾಕ್ ಮಾಡಿ ಅಕ್ಕನ ವಿಚಾರಸಿದಾಗ ಸತ್ಯ ಬಹಿರಂಗವಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಳವಾದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯಿಂದ ಒಟ್ಟು 5,50,000 ಮೌಲ್ಯದ 70 ಗ್ರಾಂ ಚಿನ್ನ ಮತ್ತು 350 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ದೆಹಲಿ ಗ್ಯಾಂಗ್ ಬಂಧನ
ದೆಹಲಿಯಿಂದ ಬಂದು ಬೆಂಗಳೂರಿನ ಮನೆ ಒಡೆದಿದ್ದ ಗ್ಯಾಂಗ್ ಅನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಅಕ್ಬರ್, ಸೋನು ಯಾದವ್ ಬಂಧಿತ ಆರೋಪಿಗಳು.
ಸಂಜಯ್ ನಗರದ ರೇಣುಕಾ ಎಂಬುವರ ಮನೆಯಲ್ಲಿ 50 ಲಕ್ಷ ಮೌಲ್ಯದ 700 ಗ್ರಾಂ ಚಿನ್ನವನ್ನು ಆರೋಪಿಗಳು ಕದ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯ್ ನಗರ ಪೊಲೀಸರು ದೆಹಲಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಹಿಂದೆ ಹಲವು ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಕದ್ದ ಮಾಲುಗಳನ್ನು ಪತ್ನಿ ಮುಬೀನಾಗೆ ನೀಡುತಿದ್ದ ಅಕ್ಬರ್. ಕದ್ದ ಚಿನ್ನವನ್ನು ಮಾರಾಟ ಮಾಡಲು ಹೋದಾಗ ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ 405 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಸಂಜಯ್ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Missing Case : ಕಾಣೆಯಾಗಿದ್ದ ನವ ವಿವಾಹಿತೆ ಬಾವಿಯಲ್ಲಿ ಜೀವಂತವಾಗಿ ಪತ್ತೆ! ಎಳೆದುಕೊಂಡು ಹೋಗಿ ಹಳೆ ಬಾವಿಗೆ ತಳ್ಳಿದವರ‍್ಯಾರು?
ಮನೆಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ
ವೈಟ್ ಫೀಲ್ಡ್ ಪೊಲೀಸರು ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಅಲ್ ಮೋಹಿನ್ ಮುಲ್ಲಾ (23), ಮೊಹಮ್ಮದ್ ಶಾರಿಫ್(24) ಬಂಧಿತ ಆರೋಪಿಗಳು.
ಕದ್ದ ಬೈಕ್ ನಲ್ಲಿ ಏರಿಯಾಗಳ ರೌಂಡ್ ಹಾಕುತಿದ್ದ ಆರೋಪಿಗಳು. ಬೆಳಗ್ಗೆ ಖಾಲಿ ಇರುವ ಮನೆಗಳನ್ನು ನೋಡಿ ಕಳ್ಳತನ ಮಾಡುತ್ತಿದ್ದರು.
ರಾತ್ರಿ ವೇಳೆ ಚಿಂದಿ ಆಯುವ ನೆಪದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಮನೆಯೊಂದರಿಂದ 100 ಗ್ರಾಂ ಚಿನ್ನ, ನಾಲ್ಕು ವಾಚ್ ಗಳನ್ನು ಕಳವು ಮಾಡಿದ್ದ ಆರೋಪಿಗಳಿಂದ 76 ಗ್ರಾಂ ಚಿನ್ನ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.