ಮೆಕ್ಸಿಕೋ: ಪ್ರೀತಿಪಾತ್ರರಾದವರನ್ನು ಕಳೆದುಕೊಳ್ಳುವಂತಹ ನೋವು ಬೇರೊಂದಿಲ್ಲ. ಅದರಲ್ಲೂ ಮನೆಯಲ್ಲಿ ನಗು ನಗುತ್ತಾ ಆಟ ಆಡುತ್ತಿದ್ದ ಮಕ್ಕಳು ಡಿಢೀರ್ ಸಾವನ್ನಪ್ಪಿದ್ದರೆ ಅದರ ನೋವು ಊಹಿಸೋಕೆ ಸಾಧ್ಯವಿಲ್ಲ. ಇನ್ನು ಕೆಲವೊಮ್ಮೆ ಸತ್ತಿದ್ದಾರೆಂದು ವೈದ್ಯರು ಹೇಳಿದ ಬಳಿಕ ಮತ್ತೆ ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಾಗ ಬದುಕಿ ಬಂದಿದ್ದೂ ಇದೆ. ಅಂತಹದ್ದೇ ಒಂದು ಅಪರೂಪವಾದ ಘಟನೆ(Viral News)ಯೊಂದು ಮೆಕ್ಸಿಕೋ(Mexico)ದಲ್ಲಿ ನಡೆದಿದೆ. ಆದರೆ ಸತ್ತು ಬದುಕಿದ ಬಾಲಕಿ ಮತ್ತೆ ಕೊನೆಯುಸಿರೆಳೆದಿದ್ದು, ಪೋಷಕರು ಎರಡೆರಡು ಬಾರಿ ನೋವು ಅನುಭವಿಸುವಂತಾಗಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೆಕ್ಸಿಕೋದ ಕ್ಯಾಮಿಲಾ ರೊಕ್ಸಾನಾ ಮರಿನೇಜ್ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಇದಾದ ಬಳಿಕ 12 ಗಂಟೆಗಳ ಬಳಿಕ ಆಕೆ ಜೀವಂತವಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. ಮಗಳು ಇನ್ನೇನು ಬದುಕಿದಳಲ್ಲಾ ಎಂದು ಪೋಷಕರು ಬಹಳ ಖುಷಿಯಲ್ಲಿದ್ದರು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಕ್ಯಾಮಿಲಾ ಕೊನೆಯುಸಿರೆಳೆದಿದ್ದಾಳೆ.
ಏನಿದು ಘಟನೆ?
ಈ ಘಟನೆ ಕಳೆದ ವರ್ಷ ಮೆಕ್ಸಿಕೋದ ಸ್ಯಾನ್ ಲೂಯಿಸ್ ಪೋಟೋಸಿಯಲ್ಲಿ ನಡೆದಿದ್ದು, ಕ್ಯಾಮಿಲಾ ತಾಯಿ ಮೇರಿ ಜೇನ್ ಮೆಂಡೋಜಾ ಈ ಬಗ್ಗೆ ಮಾಹಿತಿ ನೀಡಿದ್ದಾಳೆ.ಅವರು ಹೇಳುವ ಪ್ರಕಾರ, ಹೊಟ್ಟೆ ನೋವು ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಕ್ಯಾಮಿಲಾ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಳು. ತಕ್ಷಣ ಆಕೆಯನ್ನು ಮಕ್ಕಳ ತಜ್ಞ ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ಅವರ ಸಲಹೆ ಮೇರೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಕೆಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಕೇವಲ ಹಣ್ಣು ಮತ್ತು ನೀರು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದರು.
ಆದರೆ ಅವಳ ಸ್ಥಿತಿ ದಿನೇ ದಿನೇ ಹದಗೆಡುತ್ತಲೇ ಹೋಗಿತ್ತು.ವೈದ್ಯರ ಚಿಕಿತ್ಸೆ ಯಾವುದೇ ರೀತಿಯಲ್ಲಿ ಫಲಕಾರಿಯಾಗಲೇ ಇಲ್ಲ. ಅವಳನ್ನು ವೆಂಟಿಲೇಟರ್‌ನಲ್ಲಿ ಇಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕ್ಯಾಮಿಲಾ ಕೊನೆಯುಸಿರೆಳೆದಿದ್ದಾಳೆ. ಆಕೆ ಸಾವನ್ನಪ್ಪಿರುವ ಬಗ್ಗೆ ಸ್ವತಃ ವೈದ್ಯರೇ ದೃಢಪಡಿಸಿದ್ದರು. ಡಿಹೈಡ್ರೇಶನ್‌ನಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು. ಇದಾದ ಬಳಿಕ ಮಗುವಿನ ದೇಹದೊಂದಿಗೆ ಪೋಷಕರು ಮನೆಗೆ ವಾಪಾಸಾಗಿ, ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು.
ಇದನ್ನೂ ಓದಿ:Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್ ಫೈಟ್; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್
ಅಂತ್ಯಕ್ರಿಯೆ ತಯಾರಿ ನಡೆಸುತ್ತಿದ್ದ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಶಾಕ್‌ವೊಂದು ಕಾದಿತ್ತು. ಕಾಫಿನ್‌ನನ್ನು ಮಲಗಿಸಿದ್ದ ಮಗಳ ದೇಹದಲ್ಲಿ ಚಲನೆಗಳನ್ನು ಕಂಡು ಎಲ್ಲರೂ ಒಂದು ಕ್ಷಣಕ್ಕೆ ದಂಗಾಗಿದ್ದರು. ಮಗುವಿನ ನಾಡಿ ಹಿಡಿದು ಪರಿಶೀಲನೆ ನಡೆಸಿದಾಗ ಕ್ಯಾಮಿಲಾ ಬದುಕಿರುವುದು ತಿಳಿಯಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರಾದೃಷ್ಟವಶಾತ್ ಆಕೆ ಎರಡನೇ ಬಾರಿ ಸಾವನ್ನಪ್ಪಿದ್ದಾಳೆ. ಅಂತೂ ಇಂತೂ ಮಗು ಮತ್ತ ಬದುಕಿ ಬಂದಲ್ಲ ಎಂಬ ಖುಷಿಯಲ್ಲಿದ್ದ ಪೋಷಕರ ನೋವು ಊಹಿಸಲು ಸಾಧ್ಯವಿರಲಿಲ್ಲ.