Site icon Vistara News

Viral Video: ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದೇ ಬಿಟ್ಟ ಜನ; ಶಾಕಿಂಗ್‌ ವಿಡಿಯೋ ವೈರಲ್‌

Viral Video

ಪಂಜಾಬ್‌: ಸಿಖ್ಖರ ಪವಿತ್ರ ಗ್ರಂಥವನ್ನು ಹರಿದು ಹಾಕಿದನೆಂದು 19 ವರ್ಷದ ಯುವಕನನ್ನು ಜನ ಹೊಡೆದು ಕೊಂದಿರುವ ಘಟನೆ ಪಂಜಾಬ್‌(Panjab)ನಲ್ಲಿ ನಡೆದಿದೆ. ಬಂದಾಳ ಗ್ರಾಮದಲ್ಲಿರುವ ಗುರುದ್ವಾರದ ಬಳಿ ಈ ಘಟನೆ ನಡೆದಿದ್ದು, ತಲ್ಲಿ ಗುಲಾಮ್‌ ಗ್ರಾಮದ ನಿವಾಸಿಯಾಗಿದ್ದ ಭಕ್ಷೀಸ್‌ ಸಿಂಗ್‌ ಎಂಬ ಯುವಕ ಗುರುದ್ವಾರ(Gurudwara)ಕ್ಕೆ ಪ್ರವೇಶಿಸುತ್ತಿದ್ದಂತೆ ಗುರು ಗ್ರಂಥ ಸಾಹೀಬ್‌ ಪುಸ್ತಕ(Guru Granth Sahib)ದ ಕೆಲವೊಂದು ಪುಟಗಳನ್ನು ಹರಿದು ಹಾಕಿದ್ದಾನೆ. ಇದರಿಂದ ಅಲ್ಲದೇ ಇದ್ದ ಜನರು ಕೋಪಗೊಂಡು ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ಪರಿಣಾಮವಾಗಿ ಆತನ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಹಲವೆಡೆ ಖಂಡನೆ ವ್ಯಕ್ತವಾಗಿದೆ.

ಮಾನಸಿಕ ಅಸ್ವಸ್ಥ ಎಂದ ತಂದೆ

ಘಟನೆ ಬಗ್ಗೆ ಭಕ್ಷೀಸ್‌ ಸಿಂಗ್‌ ತಂದೆ ಲಖ್ವಿಂದರ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, ತಮ್ಮ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರೆದಿದೆ. ಇನ್ನು ತಮ್ಮ ಮಗನನ್ನು ಹತ್ಯೆ ಮಾಡಿರುವವರ ವಿರುದ್ಧ ಕೇಸ್‌ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸರು ಹೇಳೋದೇನು?

ಪೊಲೀಸರ ಮಾಹಿತಿ ಪ್ರಕಾರ ಗುರು ಗ್ರಂಥ ಸಾಹೀಬ್‌ ಗ್ರಂಥದ ಪುಟಗಳನ್ನು ಹರಿದು ಭಕ್ಷೀಸ್‌ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆಗ ಕೆಲವು ಜನರ ಗುಂಪು ಆತನನ್ನು ಹಿಡಿದಿದ್ದಾರೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಗ್ರಾಮಕ್ಕೆ ಹಬ್ಬಿತ್ತು. ತಕ್ಷಣ ಅನೇಕ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಭಕ್ಷೀಸ್‌ನನ್ನು ಮನಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಕ್ಷೀಸ್‌ ಸ್ಥಳದಲ್ಲೇ ಅಸುನೀಗಿದ್ದಾನೆ. ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಸೌಮ್ಯ ಮಿಶ್ರಾ ಸೇರಿದಂತೆ ಹಿರಿಯ ಪೊಲೀಸರು ದೌಡಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಮೃತ ಯುವಕ ಮತ್ತು ಆತನ ಕುಟುಂಬದ ವಿರುದ್ಧ ಗುರು ಗ್ರಂಥ ಸಾಹೀಬ್‌ ಸತ್ಕಾರ್‌ ಸಮಿತಿ ಅಧ್ಯಕ್ಷ ಲಖ್ವೀರ್‌ ಸಿಂಗ್‌ ದೂರು ನೀಡಿದ್ದು, ಪೊಲೀಸರು ಸೆಕ್ಷನ್‌ 295-A (ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ)ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Jyotika Trolled: ಆನ್​ಲೈನ್​ ಮೂಲಕ ವೋಟ್ ಮಾಡಿದ್ದಾರಂತೆ ಜ್ಯೋತಿಕಾ! ಟ್ರೋಲ್‌ ಆದ ಸೂರ್ಯ ಪತ್ನಿ!

ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಆಗ್ರಹ

ಇಷ್ಟೆಲ್ಲದರ ನಡುವೆ ಅಕಾಲ್‌ ಜತೇದರ್‌(ಸಿಖ್‌ ಮುಖಂಡ) ಗೈನಿ ರಗ್ಬೀರ್‌ ಸಿಂಗ್‌ ಗುರುದ್ವಾರದಲ್ಲಿ ನಡೆದಿರುವ ಅಪವಿತ್ರತೆಗೆ ಖಂಡನೆ ವ್ಯಕ್ತಪಡಿಸಿದ್ದು, ಮೃತ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಒತ್ತಾಯಿಸಿದ್ದಾರೆ. ಇಂತಹದ್ದೇ ಘಟನೆಗಳು ಹಿಂದೆ ನಡೆದ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಜರುಗಿಸುವಲ್ಲಿ ವಿಫಲವಾಗಿರುವುದೇ ಮತ್ತೆ ಇಂತಹ ಘಟನೆಗಳು ನಡೆಯಲು ಕಾರಣ. ಸಿಖ್‌ ಸಂಘಟನೆ ಈ ಕುಟುಂಬವನ್ನು ಸಾಮಾಜಿಕ ಮತ್ತು ಧಾರ್ಮಿಕವಾಗಿ ಬಹಿಷ್ಕರಿಸಬೇಕು. ಸಿಖ್‌ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಕೆಂಬ ಉದ್ದೇಶದಿಂದಲೇ ಇಂತಹ ಕೃತ್ಯಗಳಿಗೆ ಸಂಚು ರೂಪಿಸಲಾಗುತ್ತಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.

Exit mobile version