ನಾವೆಲ್ಲ ಪಂಚತಂತ್ರದ ಕಥೆಗಳನ್ನು ಕೇಳಿ ಬೆಳೆದಿದ್ದೇವೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇರುವೆಯನ್ನು ರಕ್ಷಿಸಿದ ಪಾರಿವಾಳಕ್ಕೆ ಕಷ್ಟಕಾಲದಲ್ಲಿ ನೆರವಾದ ಇರುವೆಯ ಕಥೆಯನ್ನೂ ಕೇಳಿ ಅದರ ನೀತಿಯನ್ನು ಮನಗಂಡಿದ್ದೇವೆ. ಇದೆಲ್ಲ ಕೇವಲ ಕಥೆಗಳಲ್ಲಿ ಮಾತ್ರವೇ ಎಂಬುದು ಕಾಲಕ್ರಮೇಣ ಮನುಷ್ಯನಿಗೆ ಅರಿವಾದರೂ, ಆಗೊಮ್ಮೆ ಈಗೊಮ್ಮೆ ಇಂಥ ಘಟನೆಗಳು ಮನುಷ್ಯನ ಕಣ್ಣು ತೆರೆಸುವ ಕೆಲಸ ಮಾಡುತ್ತದೆ. ಮನುಷ್ಯ ಮಾನವೀಯತೆ ಮರೆತರೆ, ಪ್ರಾಣಿಗಳಂತೆ ಎಂದು ಮನುಷ್ಯನನ್ನು ಹೋಲಿಕೆ ಮಾಡುವುದೂ ಬಹಳ ಸಾಮಾನ್ಯ. ಆದರೆ, ಪ್ರಾಣಿಗಳಲ್ಲೂ ಮಾನವೀಯತೆ ಇದೆ ಎಂಬುದನ್ನು ಮನುಷ್ಯನಿಗೆ ಆಗಾಗ ಮನವರಿಕೆ ಮಾಡುವ ಕೆಲಸವನ್ನು ಇಂಥ ವಿಡಿಯೋಗಳು ಮಾಡುತ್ತಿರುತ್ತವೆ.
ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋ ಒಂದು ಕರಡಿಯದ್ದು. ʻಹುಲಿ, ಆನೆಯ ಕೈಗೆ ಸಿಕ್ಕರಾದರೂ ಬಚಾವಾಗಬಹುದು, ಆದರೆ, ಕರಡಿಯ ಕೈಯಲ್ಲಿ ಸಾಧ್ಯವಿಲ್ಲ, ಅಷ್ಟು ಡೇಂಜರಸ್ ಪ್ರಾಣಿ ಕರಡಿʼ ಎಂಬ ಮಾತುಗಳನ್ನು ಕೇಳಿಸಿಕೊಂಡಿದ್ದೇವಾದರೂ, ಇಲ್ಲೊಂದು ಕರಡಿ ತನ್ನ ಇನ್ನೊಂದು ಮುಖವನ್ನು ಜಗತ್ತಿಗೆ ತೋರಿಸಿದೆ. ನೀರಿನಲ್ಲಿ ಮುಳುತ್ತಿದ್ದ ಕಾಗೆಯೊಂದನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದೆ.
ಹಂಗೇರಿಯ ಬುಡಾಪೆಸ್ಟ್ ಪ್ರಾಣಿ ಸಂಗ್ರಹಾಲಯದಲ್ಲಿರುವ ವಾಲಿ ಎಂಬ ಹೆಸರಿನ ಕರಡಿಯೊಂದು ಆರಾಮವಾಗಿ ಏನೋ ತಿಂದುಕೊಂಡು ಅಡ್ಡಾಡುತ್ತಿದ್ದಾಗ ಅಲ್ಲೇ ಕೆಳಗೆ ಕಾಗೆಯೊಂದು ಕೊಳಕ್ಕೆ ಬಿದ್ದು ಜೀವಭಯದಲ್ಲಿ ರೆಕ್ಕೆ ಬಡಿದುಕೊಂಡು ದಡ ಸೇರಲು ತಿಳಿಯದೆ ಒದ್ದಾಡುತ್ತಿರುತ್ತದೆ. ಕರಡಿ ಒಮ್ಮೆ ಆ ಕಾಗೆಯತ್ತ ದೃಷ್ಟಿ ಹರಿಸಿದರೂ, ಅದನ್ನು ರಕ್ಷಿಸಲು ಒಡನೆಯೇ ಹೊರಡುವುದಿಲ್ಲ. ತನ್ನ ಪಾಡಿಗೆ ತಾನು ತಿನ್ನುವ ಕಾರ್ಯದಲ್ಲಿ ಮಗ್ನವಾಗಿ ಬಿಡುತ್ತದೆ. ಆದರೆ, ಮತ್ತೆ ತನ್ನ ದೃಷ್ಠಿಯನ್ನು ಕಾಗೆಯತ್ತ ಹರಿಸಿದಾಗ, ಮತ್ತೆಯೂ ಅದರ ಒದ್ದಾಟ ಮುಂದುವರಿದಿರುವುದನ್ನು ಗಮನಿಸಿ, ಕೂಡಲೇ, ತನ್ನ ಒಂದು ಕೈಯನ್ನು ನೀರಿನೊಳಗೆ ಹಾಕಿ ಕಾಗೆಯನ್ನು ಮೇಲೆತ್ತಿ ಅಲ್ಲೇ ನೆಲದಲ್ಲಿ ವಾಪಸ್ ಹಾಕಿ, ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ತಿನ್ನುವ ಕಾರ್ಯ ಮುಂದುವರಿಸುತ್ತದೆ. ಸ್ವಲ್ಪ ಹೊತ್ತು ಸತ್ತಂತೆ ಬಿದ್ದುಕೊಂಡ ಕಾಗೆ, ಮತ್ತೆ ರೆಕ್ಕೆ ಬಡಿದುಕೊಂಡು ಹೇಗೋ ಮೊದಲಿನಂತಾಗಿ ಚೈತನ್ಯ ಪಡೆಯುತ್ತದೆ. ಎದ್ದು ನಿಂತ ಕಾಗೆ ಅಲ್ಲೇ ತಿನ್ನುತ್ತಾ ಸುತ್ತಾಡುತ್ತಿರುವ ಕರಡಿಯನ್ನು ನೋಡುತ್ತಾ ನಿಲ್ಲುತ್ತದೆ, ಆದರೆ ಕರಡಿ ಮಾತ್ರ, ತಾನು ಕಾಗೆಗೆ ಜೀವದಾನ ಮಾಡಿದ್ದು ಅಂಥ ದೊಡ್ಡ ಸಂಗತಿಯೇ ಅಲ್ಲ ಎಂಬಂತೆ ತನ್ನ ಕೆಲಸದಲ್ಲೇ ಮಗ್ನವಾಗಿರುತ್ತದೆ.
ಇದನ್ನೂ ಓದಿ | Baby Bump | ಹಾರ್ಲೇ ಡೇವಿಡ್ಸನ್ ಬೈಕ್ ರೈಡ್ ಮಾಡಿದ ಗರ್ಭಿಣಿ; ಬೇಬಿ ಬಂಪ್ ಫೋಟೊ ಶೂಟ್ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ೪.೫ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಜನರನ್ನು ದಂಗಾಗಿಸಿದೆ. ʻತನ್ನದೇ ಬೇಟೆಯಾಗಬಹುದಾಗಿದ್ದ ಜೀವವನ್ನು ಇನ್ನೊಂದು ಪ್ರಾಣಿ ರಕ್ಷಿಸುವುದು ನಿಜಕ್ಕೂ ಪ್ರಕೃತಿಯ ವಿಸ್ಮಯವೇ ಸರಿ, ಇದೊಂದು ನಿಜವಾದ ಮಾನವೀಯತೆʼ ಎಂದು ವಿವರಿಸುವ ಮೂಲಕ ಹಲವರನ್ನು ಈ ವಿಡಿಯೋ ಚಿಂತನೆಗೆ ಹಚ್ಚಿದಂತಿದೆ. ಆ ಕರಡಿ ಮಾಡಿದ ಉಪಕಾರವನ್ನು ಆ ಕಾಗೆ ಎಂದಿಗೂ ಮರೆಯದು ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೂ ಒಬ್ಬರು, ಮಾನವರಲ್ಲೂ ಕಾಣದ ಮಾನವೀಯತೆಯಿದು ಎಂದು ಬಣ್ಣಿಸಿದ್ದಾರೆ.
ʻತನ್ನದೇ ಬೇಟೆಯನ್ನು ರಕ್ಷಿಸುವ ಈ ಪ್ರಾಣಿಗಳ ಇಂಥ ನಡತೆಯನ್ನು ಕಂಡಾಗಲೆಲ್ಲ ಆಶ್ಚರ್ಯವಾಗುತ್ತದೆ. ಕೇವಲ ಹಸಿವಾದಾಗ ಮಾತ್ರ ಎಷ್ಟೇ ಕ್ರೂರ ಪ್ರಾಣಿಯಾದರೂ ಇನ್ನೊಂದು ಜೀವದ ಬೇಟೆಯಾಡುತ್ತದೆ. ಬಾಕಿ ಸಮಯದಲ್ಲಿ ತನ್ನಂತೆ ಒಂದು ಜೀವ ಎಂಬ ಅಂತಃಕರಣ ಪ್ರಾಣಿಗಳಲ್ಲೂ ಇರುತ್ತದೆʼ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಒಬ್ಬರು, ಪ್ರಾಣಿಗಳನ್ನು ನೋಡಿ ನಾವು ಮನುಷ್ಯರು ಕಲಿಯುವಂಥದ್ದು ಬಹಳಷ್ಟಿವೆ. ನಮ್ಮನ್ನು ನಾವು ತಿದ್ದಿಕೊಳ್ಳಬೇಕೆಂದರೆ, ನಾವು ಪ್ರಾಣಿಗಳ ನಡತೆಯನ್ನು ಗಮನಿಸುತ್ತಿರಬೇಕು. ಕೆಲವೊಮ್ಮೆ ನಮ್ಮ ನಡತೆಗೆ ನಾವೇ ನಾಚಿಕೆ ಪಟ್ಟುಕೊಳ್ಳಬೇಕು. ಪ್ರಕೃತಿಯ ಇಂತಹ ವಿಸ್ಮಯಗಳೆಲ್ಲ ಎಷ್ಟು ಚಂದ! ಎಂದಿದ್ದಾರೆ.
ಇದನ್ನೂ ಓದಿ | RRR Film | ಜ್ಯೂ.ಎನ್‌ಟಿಆರ್ ನೋಡಿ ಭಾವುಕರಾದ ಜಪಾನ್ ಅಭಿಮಾನಿಗಳು: ವಿಡಿಯೊ ವೈರಲ್!