Site icon Vistara News

Viral Video: BMW ಕಾರು ಬಾನೆಟ್‌ ಮೇಲೆ ವ್ಯಕ್ತಿ…ಬ್ಯುಸಿ ರಸ್ತೆಯಲ್ಲಿ ಬಾಲಕನ ಪುಂಡಾಟ; ವಿಡಿಯೋ ವೈರಲ್‌

Viral Video

ನವದೆಹಲಿ: ಕೆಲವು ದಿನಗಳ ಹಿಂದೆಯಷ್ಟೇ ಪುಣೆ(Pune)ಯಲ್ಲಿ ಬಾಲಕನೋರ್ವ ಪೋರ್ಷೆ ಕಾರು ಚಲಾಯಿಸಿ ಇಬ್ಬರು ಐಟಿ ನೌಕರ(IT Employees)ರನ್ನು ಬಲಿ ತೆಗೆದುಕೊಂಡು ಘಟನೆ ಮಾಸು ಮುನ್ನವೇ ಮತ್ತೊಂದು ಅಂತಹದ್ದೇ ಒಂದು ಘಟನೆ ಥಾಣೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬನನ್ನು ಬಾನೆಟ್‌ ಮೇಲೆ ಮಲಗಿಸಿಕೊಂಡು 17ವರ್ಷದ ಬಾಲಕನೋರ್ವ ತಂದೆಯ BMW ಕಾರು ಚಲಾಯಿಸಿದ ಘಟನೆ ವರದಿಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಬಾಲಕ, ಬಾನೆಟ್‌ನಲ್ಲಿದ್ದ ವ್ಯಕ್ತಿ ಹಾಗೂ ಬಾಲಕನ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಘಟನೆ ವಿವರ:

ಥಾಣೆಯ ಕಲ್ಯಾಣ್‌ ನಗರದ ಜನ ನಿಬಿಡ ಶಿವಾಜಿ ಚೌಕ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದ ರೀಲ್ಸ್‌ನಿಂದಾಗಿ ಪ್ರಭಾವಿತನಾಗಿ ನಿವೃತ ಸರ್ಕಾರಿ ಅಧಿಕಾರಿಯ ಅಪ್ರಾಪ್ತ ವಯಸ್ಸಿನ ಪುತ್ರ BMW ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯೊಬ್ಬನನ್ನು ಮಲಗಿಸಿಕೊಂಡು ಡ್ರೈವಿಂಗ್‌ ಮಾಡಿದ್ದಾನೆ. ಇನ್ನು ಕಾರು ಬಾನೆಟ್‌ ಮೇಲಿದ್ದ ವ್ಯಕ್ತಿಯನ್ನು ಶುಭಮ್‌ ಮಿಥಿಲಾ ಎಂದು ಗುರುತಿಸಲಾಗಿದೆ. ಈ ಸೆಕೆಂಡ್‌ ಹ್ಯಾಂಡ್‌ ಕಾರನ್ನು 5ಲಕ್ಷ ರೂ ನೀಡಿ ಬಾಲಕನ ತಂದೆ ಖರೀದಿಸಿದ್ದ ಎನ್ನಲಾಗಿದೆ. ಇದೀಗ ಕಾರು ಮಾಲೀಕನ ವಿರುದ್ಧ ಕೇಸ್‌ ದಾಖಲಾಗಿದೆ.

ಕಳೆದ ಭಾನುವಾರ ಪುಣೆಯಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಬಾರ್‌ನಲ್ಲಿ ಮದ್ಯ ಸೇವಿಸಿ ಪಾನಮತ್ತರಾಗಿದ್ದ 17 ವರ್ಷದ ಬಾಲಕ ಚಾಲನೆ ಮಾಡುತ್ತಿದ್ದ ಪೋರ್ಶೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮೃತಪಟ್ಟಿದ್ದರು. ಇದಾದ ಬಳಿಕ ಪೊಲೀಸರು ಬಾಲಾಪರಾಧಿ ನ್ಯಾಯಾಲಯದ ತೀರ್ಪಿನಂತೆ ಬಾಲಕನನ್ನು ಬಂಧಿಸಿ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಬಳಿಕ ತಂದೆ ವಿಶಾಲ್​ ಅಗರ್ವಾಲ್​ರನ್ನು ಬಂಧಿಸಿದ್ದರು.

ಇದನ್ನೂ ಓದಿ:Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

ಎಲ್ಲೆಡೆ ಪೊಲೀಸರ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಮೀನನ್ನು ರದ್ದುಗೊಳಿಸಿ ಮತ್ತೆ ಬಂಧಿಸಲಾಗಿತ್ತು. ಮೊದಲು ವಿಶಾಲ್ ಅಗರ್ವಾಲ್​ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ ಕಾರಿಗೆ ಬೇರೆ ಡ್ರೈವರ್​ ಇದ್ದಾರೆ ಎಂದು ಹೇಳಿದ್ದರು. ಇನ್ನು ಬಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕ ಎಂಬಂತೆ ಘಟನೆಗೂ ಮುನ್ನ ಆತ ಸ್ನೇಹಿತರ ಜೊತೆಗೂಡಿ ಬಾರ್‌ನಲ್ಲಿ ಕುಡಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಹೀಗಾಗಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಹಿಸಲಾಗಿತ್ತು. ಇದೆಲ್ಲಾ ನಡೆದ ಬಳಿಕ ಆತ ಮದ್ಯಪಾನ ಮಾಡಿರಲಿಲ್ಲ ಎನ್ನುವ ವರದಿ ಆಸ್ಪತ್ರೆಯಿಂದ ಹೊರಬಿದ್ದಿತ್ತು. ಇದೀಗ ವೈದ್ಯರು ದುಡ್ಡಿನ ಆಸೆಗೆ ಬಿದ್ದು ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರಿತ ಪೊಲೀಸರು ರಕ್ತದ ಮಾದರಿಯನ್ನು ತಿರುಚಿದ ಆರೋಪದ ಮೇಲೆ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.

Exit mobile version