Site icon Vistara News

Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Viral Video

Viral Video

ಹೈದರಾಬಾದ್‌: ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಇತ್ತೀಚೆಗೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ತಾಪಮಾನ ಗಣನೀಯವಾಗಿ ಕಡಿಮೆಯಾಗುತ್ತಿಲ್ಲ. ಅತ್ಯಧಿಕ ಉಷ್ಣಾಂಶದ ಕಾರಣದಿಂದ ದೇಶದ ಹಲವೆಡೆ ನಿಲ್ಲಿಸಿದ್ದ, ಚಲಿಸುತ್ತಿರುವ ವಾಹನಗಳು ಬೆಂಕಿಗಾಹುತಿಯಾಗುವ ಘಟನೆ ಪದೇ ಪದೆ ಘಟಿಸುತ್ತಲೇ ಇದೆ. ಸದ್ಯ ಅಂತಹದ್ದೇ ಒಂದು ದುರಂತ ತೆಲಂಗಾಣದಲ್ಲಿ ನಡೆದಿದ್ದು, ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬರ ಸಮಯಪ್ರಜ್ಞೆಯಿಂದ ಬಹು ದೊಡ್ಡ ಅನಾಹುತವೊಂದು ತಪ್ಪಿದೆ. ಸಿಬ್ಬಂದಿ ಬೆಂಕಿ ನಂದಿಸಲು ಏಕಾಂಗಿಯಾಗಿ ನಡೆಸುತ್ತಿರುವ ಪ್ರಯತ್ನ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸದ್ಯ ವೈರಲ್‌ ಆಗಿದೆ (Viral Video).

ತೆಲಂಗಾಣದ ಯಾದಾದ್ರಿ ಭುವನಗಿರಿಯ ಉಪನಗರದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಇಂಧನ ಹಾಕಿಸಿಕೊಳ್ಳಲು ಟ್ರಕ್ಕೊಂದು ಪೆಟ್ರೋಲ್‌ ಬಂಕ್‌ ಪ್ರವೇಶಿಸುತ್ತದೆ. ಬಿಸಿಲಿನ ಝಳಕ್ಕೆ ಇದ್ದಕ್ಕಿದ್ದಂತೆ ಟ್ರಕ್‌ನ ಇಂಧನ ಟ್ಯಾಂಕ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಳ್ಳುತ್ತದೆ. ಚಾಲಕ ಮತ್ತು ನಿರ್ವಾಹಕ ಕೂಡಲೇ ಟ್ರಕ್‌ನಿಂದ ಜಿಗಿದು ಪಾರಾಗುತ್ತಾರೆ.

ಸ್ಫೋಟದ ಶಬ್ದಕ್ಕೆ ಎಲ್ಲರೂ ದಂಗಾಗಿ ನಿಲ್ಲುತ್ತಾರೆ. ಈ ವೇಳೆ ಕೂಡಲೆ ಎಚ್ಚೆತ್ತುಕೊಳ್ಳುವ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯೋರ್ವರು ಧೈರ್ಯದಿಂದ ಮುನ್ನುಗ್ಗಿ ಅಗ್ನಿಶಾಮಕ ಯಂತ್ರ (Fire extinguisher)ವನ್ನು ಹಿಡಿದು ಉರಿಯುತ್ತಿರುವ ಟ್ರಕ್ ಕಡೆಗೆ ಧಾವಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಾರೆ.

ಅವರ ಆರಂಭಿಕ ಪ್ರಯತ್ನಗಳ ಹೊರತಾಗಿಯೂ, ಅಗ್ನಿಶಾಮಕ ಸಿಲಿಂಡರ್ ಖಾಲಿಯಾದ ನಂತರ ಬೆಂಕಿ ಮತ್ತೆ ಹೊತ್ತಿಕೊಂಡಿತು. ಕೂಡಲೇ ಅವರು ಮತ್ತೊಂದು ಅಗ್ನಿಶಾಮಕವನ್ನು ತಂದು ಬೆಂಕಿಯನ್ನು ನಿಯಂತ್ರಿಸುವ ಸಾಹಸವನ್ನು ಮುಂದುವರಿಸಿದರು. ಅವರ ಧೈರ್ಯದಿಂದ ಪ್ರೇರಿತರಾಗಿ ಬಂಕ್‌ನಲ್ಲಿದ್ದ ಇತರರು ಸಹ ಕೈ ಜೋಡಿಸತೊಡಗಿದರು. ಎಲ್ಲರ ಪ್ರಯತ್ನದ ಫಲವಾಗಿ, ಸತತ ಹೋರಾಟದ ನಂತರ ಬೆಂಕಿ ನಿಯಂತ್ರಣಕ್ಕೆ ಬಂತು. ಈ ಮೂಲಕ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿತು. ಅದು ಪೆಟ್ರೋಲ್‌ ಬಂಕ್‌ ಆಗಿರುವ ಕಾರಣ ತುಸು ಹೆಚ್ಚು ಕಡಿಮೆಯಾಗಿದ್ದರೂ ಬಹು ದೊಡ್ಡ ಸ್ಫೋಟ ಸಂಭವಿಸುವ ಸಾಧ್ಯತೆ ಇತ್ತು. ಸಿಬ್ಬಂದಿಯ ಸಮಯೋಚಿತ ಕಾರ್ಯದಿಂದಾಗಿ ಆಪತ್ತು ಕೂದಲೆಳೆ ಅಂತರದಲ್ಲಿ ತಪ್ಪಿತು.

ನೆಟ್ಟಿಗರಿಂದ ಮೆಚ್ಚುಗೆ

ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಪ್‌ಲೋಡ್‌ ಅದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಹಲವು ಲೈಕ್‌ ಬಟನ್‌ ಒತ್ತಿದರೆ ಇನ್ನು ಕೆಲವರು ಸಿಬ್ಬಂದಿಯ ಸಮಯೋಚಿತ ನಿರ್ಧಾರವನ್ನು, ಧೈರ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ʼʼಬೆಂಕಿ ನಂದಿಸಲು ಏಕಾಂಗಿಯಾಗಿ ಹೋರಾಡಿದ ಸಿಬ್ಬಂದಿಗೆ ಅತ್ಯಂತ ಶೂರ ಎನ್ನುವ ಅವಾರ್ಡ್‌ ಕೊಡಬೇಕು. ಒಂದು ವೇಳೆ ಸ್ಥಳದಲ್ಲಿ ನಾನು ಇದ್ದಿದ್ದರೆ ಇತರರಂತೆ ಓಡಿ ಹೋಗುತ್ತಿದ್ದೆʼʼ ಎಂದು ಒಬ್ಬರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

ʼʼಈ ಸಿಬ್ಬಂದಿಯ ಧೈರ್ಯಕ್ಕೆ ಹ್ಯಾಟ್ಸಾಫ್‌ʼʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼಬೆಂಕಿ ಆಕಸ್ಮಿಕದಿಂದ ಪಾರಾಗುವುದು ಹೇಗೆ ಎನ್ನುವ ಬಗ್ಗೆ ಈತನಿಗೆ ತರಬೇತಿ ಸಿಕ್ಕಿರಬೇಕು. ಅದಕ್ಕೆ ಆತ ಧೈರ್ಯವಾಗಿ ಮುನ್ನುಗ್ಗಿದ್ದಾನೆʼʼ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಆತನ ಧೈರ್ಯಕ್ಕೆ ಪ್ರಶಸ್ತಿ ಕೊಡಲೇಬೇಕುʼʼ ಎಂದು ಮಗದೊಬ್ಬರು ಆಗ್ರಹಿಸಿದ್ದಾರೆ. ಈತನೇ ನಿಜವಾದ ಹೀರೋ ಎಂದು ಅನೇಕರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:Weight Lose: ತೂಕ ಇಳಿಸಲು ಬಯಸುವಿರಾ? ಈ ಸಂಗತಿ ತಿಳಿದಿರಲಿ

Exit mobile version