ಜೈಪುರ: ವನ್ಯ ಜೀವಿಗಳ ಜೀವನ ಶೈಲಿ, ಆಹಾರ ಪದ್ಧತಿ ಸದಾ ಕುತೂಹಲ ಹುಟ್ಟಿಸುವಂತಹದ್ದು. ಅದರಲ್ಲೂ ಬೇಟೆಯಾಡುವ ಶೈಲಿ, ಬಲಿಷ್ಠ ಪ್ರಾಣಿಗಳು ಪರಸ್ಪರ ಕಾದಾಡುವ ರೀತಿ ರೋಚಕತೆಯಿಂದ ಕೂಡಿರುತ್ತದೆ. ಕೆಲವೊಮ್ಮೆ ಅಂತಹ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡಿ ಸದ್ದು ಮಾಡುತ್ತವೆ. ಇದೀಗ ಹುಲಿ ಮತ್ತು ಮೊಸಳೆಯೊಂದರ ಹೋರಾಟದ ವಿಡಿಯೊ ವೈರಲ್ ಆಗಿದೆ (Viral Video).
ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ (Ranthambore National Park) ಭೇಟಿ ನೀಡಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಹುಲಿ ಮತ್ತು ಮೊಸಳೆಯ ಕದನ ಸೆರೆಯಾಗಿದೆ. ಈ ವನ್ಯಜೀವಿ ಮೀಸಲು ಪ್ರದೇಶದಲ್ಲಿ ಹಲವು ಪ್ರಾಣಿಗಳು, ಪಕ್ಷಿಗಳು ವಾಸವಾಗಿವೆ. ಅದರಲ್ಲೂ ಹುಲಿಗಳು ಮತ್ತು ಚಿರತೆಗಳು ಇಲ್ಲಿನ ಆಹಾರ ಸರಪಳಿಯಲ್ಲಿ ಪ್ರಾಬಲ್ಯ ಹೊಂದಿದ್ದರೆ, ಕಾಡಿನಾದ್ಯಂತ ಹರಡಿರುವ ಸರೋವರಗಳಲ್ಲಿ ಅನೇಕ ದೊಡ್ಡ ಮೊಸಳೆಗಳನ್ನೂ ಕಾಣಬಹುದು.
ವಿಡಿಯೊದಲ್ಲೇನಿದೆ?
ಪ್ರವಾಸಿಗರು ಸಫಾರಿ ಹೋಗುತ್ತಿದ್ದಾಗ ಹುಲಿ ರಿದ್ಧಿ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಸರೋವರದ ಕಡೆಗೆ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು. ದಡದಲ್ಲಿ ಮಲಗಿದ್ದ ಮೊಸಳೆಯನ್ನು ಬೇಟೆಯಾಡುವುದು ಕೂಡ ರಿದ್ಧಿಯ ಯೋಜನೆಯಾಗಿತ್ತು. ಹುಲಿ ಸಮೀಪ ಬರುತ್ತಿದ್ದಂತೆ ಮೊಸಳೆ ಮರು ದಾಳಿ ನಡೆಸಲು ಮುಂದಾಯಿತು. ಆದರೆ ಸ್ವಲ್ಪವೂ ವಿಚಲಿತವಾಗದ ರಿದ್ಧಿ ಮತ್ತೊಮ್ಮೆ ಆಕ್ರಮಣ ಮಾಡಲು ಪ್ರಯತ್ನಿಸಿತು. ಇದರಿಂದ ಬೆದರಿದ ಮೊಸಳೆ ಸರೋವರದ ಕಡೆಗೆ ಕಡೆಗೆ ಓಡಿ ಹೋಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದ ನಿರಾಸೆಯಲ್ಲಿ ರಿದ್ಧಿ ಮರಳಿತು.
ಪ್ರವಾಸಿಗರೊಬ್ಬರು ಈ ರೋಚಕ ಕ್ಷಣವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೊವನ್ನು ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದೆ. “ರೋಚಕ ಕದನ: ರಿದ್ಧಿ ಹುಲಿ ಮೊಸಳೆ ಮೇಲೆ ದಾಳಿ ಮಾಡಿದ ಕ್ಷಣ” ಎಂಬ ಕ್ಯಾಪ್ಶನ್‌ನೊಂದಿಗೆ ವಿಡಿಯೊ ಶೇರ್ ಮಾಡಲಾಗಿದೆ. ಸದ್ಯ ಈ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
ನೆಟ್ಟಿಗರು ಏನಂದ್ರು?
ರಿದ್ಧಿಯ ಈ ಸಾಹಸ ಪ್ರವೃತ್ತಿ ಅನೇಕರಿಗೆ ಅದರ ಮುತ್ತಜ್ಜಿ ಮಚಾಲಿಯನ್ನು ನೆನಪಿಸಿತು. ತನ್ನ ಬೇಟೆಯ ಕಾರಣದಿಂದಲೇ ಮಚಾಲಿ ಜನಪ್ರಿಯವಾಗಿತ್ತು. ಇದೇ ಉದ್ಯಾನವನದಲ್ಲಿ ವಾಸವಿದ್ದ ಮಚಾಲಿ ʼಕ್ರೊಕಡೈಲ್ ಕಿಲ್ಲರ್ʼ, ʼಲೇಡಿ ಆಫ್ ದಿ ಲೇಕ್ʼ ಎಂದೇ ಹೆಸರು ಗಳಿಸಿತ್ತು. ಇದೀಗ ರಿದ್ಧಿಯ ಆಕ್ರಮಣ ಮನೋಭಾವವನ್ನು ನೋಡಿದ ನೆಟ್ಟಿಗರೊಬ್ಬರು, “ಮಚಾಲಿಯ ವಂಶ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಇವಳು ಕೂಡ ತನ್ನ ಮುತ್ತಜ್ಜಿ ಮಚಾಲಿಯಂತೆ ಧೈರ್ಯಶಾಲಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: ಈ ಹಸು, ಮಗುವಿನದ್ದು ಜನ್ಮ ಜನ್ಮದ ಅನುಬಂಧ; ಮುದ್ದಾದ ವಿಡಿಯೊಕ್ಕೆ ಮನಸೋತ ನೆಟ್ಟಿಗರು
2021ರ ಜೂನ್‌ನಲ್ಲಿ ಎರಡೂವರೆ ವರ್ಷದ ರಿದ್ಧಿ ಗಂಭೀರ ಗಾಯಗೊಂಡಿತ್ತು. ತನ್ನ ಸಹೋದರಿಯೊಂದಿಗೆ ನಡೆದ ಜಗಳದಿಂದ ಗಾಯಗೊಂಡಿದ್ದ ರಿದ್ಧಿ ಸದ್ಯ ಚೇತರಿಸಿಕೊಂಡಿದೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಸ್ತುತ 80ಕ್ಕೂ ಹೆಚ್ಚು ಹುಲಿಗಳಿವೆ. ಜಿಮ್ ಕಾರ್ಬೆಟ್ ಮತ್ತು ಕಾಜಿರಂಗಾ ನಂತರ ಇದು ಭಾರತದ ಮೂರನೇ ಅತ್ಯಂತ ಹೆಚ್ಚು ಹುಲಿ ಹೊಂದಿರುವ ಹುಲಿ ಮೀಸಲು ಪ್ರದೇಶ ಎನಿಸಿಕೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ