ಬೆಂಗಳೂರು: ಕಾಲದ ಜತೆಗೆ ಜೀವನ ಶೈಲಿಯೂ ಬದಲಾಗುತ್ತಿದೆ. ಆಹಾರ ಪದ್ಧತಿ, ಉಡುಗೆ ತೊಡುಗೆ ಮಾತ್ರವಲ್ಲ ಆಚರಣೆಗಳಲ್ಲಿಯೂ ಬದಲಾವಣೆ ಕಂಡು ಬರುತ್ತಿದೆ. ಇದೀಗ ಬದಲಾವಣೆಯ ಗಾಳಿ ಮದುವೆ ಪದ್ಧತಿ ಮೇಲೂ ಬೀಸಲಾರಂಭಿಸಿದೆ. ಸಾಂಪ್ರದಾಯಿಕ ಮಂಟಪದಲ್ಲಿ ವಿವಾಹವಾಗುವ ಬದಲು ಬೆಟ್ಟದ ಮೇಲೆ, ಗಾಳಿಯಲ್ಲಿ, ನೀರಿನಾಳದಲ್ಲಿ ಹೀಗೆ ಬೇರೆ ಬೇರೆ ವಿಧಾನಗಳಲ್ಲಿ ಸಪ್ತಪದಿ ತುಳಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೋಡಿಯೊಂದು ಚಲಿಸುತ್ತಿರುವ ರೈಲಿನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸದ್ಯ ಈ ವಿಡಿಯೊ ವೈರಲ್ (Viral Vieo) ಆಗಿದೆ.
ವಿಡಿಯೊದಲ್ಲಿ ಏನಿದೆ?
ಈ ವಿಡಿಯೊದಲ್ಲಿ ಜೋಡಿಯೊಂದು ರೈಲಿನಲ್ಲಿ ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳುವುದು ಕಂಡು ಬಂದಿದೆ. ರೈಲಿನ ಬೋಗಿಯೊಂದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಯುವಕ ಮೊದಲು ಯುವತಿಯ ಹಣೆಗೆ ಸಿಂಧೂರ ಹಚ್ಚುತ್ತಾನೆ. ಹೂಮಾಲೆಗಳ ವಿನಿಮಯದ ನಂತರ ಭಾವುಕ ವಧು ವರನನ್ನು ಅಪ್ಪಿಕೊಳ್ಳುತ್ತಾಳೆ. ಬಳಿಕ ಸುತ್ತಲಿದ್ದವರ ಹರ್ಷೋದ್ಗಾರದ ನಡುವೆ ಆ ಯುವಕ ಅವಳ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟುತ್ತಾನೆ. ಅಸನ್ಸೋಲ್-ಜಸಿದಿಹ್ ರೈಲು ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ ಎಂದು ಕೆಲವು ವರದಿಗಳು ತಿಳಿಸಿದೆ. ಅದಾಗ್ಯೂ ಯಾವ ರೈಲು ಎನ್ನುವುದರ ಬಗ್ಗೆ ಖಚಿತತೆ ಇಲ್ಲ.
ನೆಟ್ಟಿಗರು ಏನಂದ್ರ?
ಸಹಜವಾಗಿಯೇ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಸ್ಮರಣೀಯ ಮದುವೆಗೆ ಅಲಂಕಾರಿಕ ಹೋಟೆಲ್, ಸಭಾಂಗಣಗಳು ಅಥವಾ ಅಥವಾ ಔತಣಕೂಟವೇ ಆಗಬೇಕೆಂದಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಹಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼʼವಿವಿಧೋದ್ದೇಶದ ಭಾರತೀಯ ರೈಲ್ವೆ” ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು “ಬಜೆಟ್ ಸೀಮಿತವಾಗಿದ್ದಿರಬೇಕು. ಇಲ್ಲದಿದ್ದರೆ ಅವರು ವಿಮಾನದಲ್ಲಿ ವಿವಾಹವಾಗುತ್ತಿದ್ದರುʼʼ ಎಂದು ಊಹಿಸಿದ್ದಾರೆ.
ಈ ಎಲ್ಲ ತಮಷೆಯ ನಡುವೆ ನೆಟ್ಟಿಗರೊಬ್ಬರು ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ. “ಮದುವೆಯಾಗುವುದು ಹೀಗೆ ತುಂಬ ಸುಲಭವಾಗಿರುವಾಗ ವಿಚ್ಛೇದನವನ್ನು ಏಕೆ ನೋವಿನ ಪ್ರಕ್ರಿಯೆಯನ್ನಾಗಿ ಮಾಡಬೇಕು? ಜೋಡಿಯೊಂದು ಚಲಿಸುವ ರೈಲಿನಲ್ಲಿ ಮದುವೆಯಾಗಬಹುದಾಗಿದ್ದರೆ ವಿಚ್ಛೇದನಕ್ಕಾಗಿ ನ್ಯಾಯಾಲಯವನ್ನು ಏಕೆ ಸಂಪರ್ಕಿಸಬೇಕು? ವಿಚ್ಛೇದನವನ್ನು ಮದುವೆಯಷ್ಟೇ ಸುಲಭಗೊಳಿಸಿʼʼ ಎಂದು ಸಲಹೆ ನೀಡಿದ್ದಾರೆ. ಹಲವರು ಇದಕ್ಕೆ ಪರ-ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ವಿವಾಹ ಹಲವು ಚರ್ಚೆಯನ್ನು ಹುಟ್ಟು ಹಾಕಿದ್ದಂತೂ ಸತ್ಯ.
ಸರಳವಾಗಿ ಹಸೆಮಣೆಗೇರಿದ ಪೂಜಾ ಗಾಂಧಿ
ಈ ಮಧ್ಯೆ ನವೆಂಬರ್ 29ರಂದು ನಟಿ, ʼಮಳೆ ಹುಡುಗಿʼ ಪೂಜಾ ಗಾಂಧಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿ ಪ್ರಕಾರ ವಿವಾಹಿತರಾಗಿದ್ದು ಗಮನ ಸೆಳೆದಿದೆ. ಆಡಂಬರದ ಮದುವೆಗಳ ಭರಾಟೆ ನಡುವೆ ಅವರು ಸರಳವಾಗಿ ಉದ್ಯಮಿ ವಿಜಯ್ ಘೋರ್ಪಡೆ ಅವರ ಕೈ ಹಿಡಿದಿದ್ದು ಮೆಚ್ಚುಗೆ ಗಳಿಸಿದೆ. ತನ್ನ ಕನ್ನಡ ಪ್ರೇಮದಿಂದ ಈಗಾಗಲೇ ಹಲವರ ಮನಸ್ಸು ಕದ್ದಿದ್ದ ಪೂಜಾ ಗಾಂಧಿ ಮದುವೆಯಲ್ಲಿಯೂ ಸರಳತೆ ಮೆರೆದಿದ್ದು ಮಾದರಿ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Viral News: ಗೂಗಲ್ ಉದ್ಯೋಗ ತೊರೆದು ಉಬರ್ ಚಾಲಕನಾದ; ಇದರ ಹಿಂದಿದೆ ಅಚ್ಚರಿಯ ಕಾರಣ
A couple got married at Max hospital in Vaishali, Ghaziabad. The groom was suffering from dengue and was admitted to the hospital on November 25 with his wedding due on Nov 27. The wedding took place as scheduled, but in the hospital. pic.twitter.com/8yEruMHyxB
— Piyush Rai (@Benarasiyaa) November 30, 2023
ಆಸ್ಪತ್ರೆಯಲ್ಲೇ ಮದುವೆಯಾದ ಜೋಡಿ
ಇದರ ಜತೆಗೆ ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಜೋಡಿಯೊಂದು ಆಸ್ಪತ್ರೆಯಲ್ಲೇ ಮದುವೆಯಾದ ವಿಡಿಯೊ ವೈರಲ್ ಆಗಿತ್ತು. ವಿವಾಹ ನಿಶ್ಚಯವಾಗಿದ್ದ ವರನಿಗೆ ಡೆಂಗ್ಯೂ ಕಾಣಿಸಿಕೊಂಡಿತ್ತು. ಹೀಗಾಗಿ ಆತ ಆಸ್ಪತ್ರೆಗೆ ದಾಖಲಾಗಿದ್ದ. ಮೊದಲೇ ನಿಗದಿ ಪಡಿಸಿದ ದಿನದಂದೇ ವಿವಾಹ ನೆರವೇರಿಸಲು ವಧು-ವರರ ಕುಟುಂಬದವರು ತೀರ್ಮಾನಿಸಿದ್ದರು. ಅದರಂತೆ ವರ ದಾಖಲಾಗಿರುವ ಕೋಣೆಯನ್ನೇ ಮಂಟಪದಂತೆ ಶೃಂಗರಿಸಿ ಅಲ್ಲೇ ಮದುವೆ ನೆರವೇರಿಸಿದ್ದರು. ಸದ್ಯ ಈ ವಿಚಾರವೂ ಗಮನ ಸೆಳೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ