Site icon Vistara News

Viral video: ಗೃಹ ಸಚಿವ ಅಮಿತ್‌ ಶಾ ಕಾರ್‌ಗೂ CAAಗೂ ಇದೆ ಸಂಬಂಧ!

amit shah car CAA

ಹೊಸದಿಲ್ಲಿ: ಗೃಹ ಸಚಿವ ಅಮಿತ್‌ ಶಾ (Home Minister Amit Shah) ಅವರ ಖಾಸಗಿ ಕಾರಿನ ನಂಬರ್‌ ಎಷ್ಟು? ಇದಕ್ಕೂ ಪೌರತ್ವ ನೋಂದಣಿ ತಿದ್ದುಪಡಿ ಕಾಯಿದೆಗೂ (Citizen Amendment Act – CAA) ಸಂಬಂಧವಿದೆ ಎಂದರೆ ನಂಬುತ್ತೀರಾ? ಇದೀಗ ವೈರಲ್‌ ವಿಡಿಯೋ (viral video) ಆಗಿರುವ ಅಮಿತ್‌ ಶಾ ಅವರ ಕಾರಿನ ವಿಡಿಯೋ ನೋಡಿದರೆ ನೀವೇ ತೀರ್ಮಾನ ಮಾಡಬಹುದು.

ಹೌದು, ಇಂದು ಬಿಜೆಪಿ ಹೈಕಮಾಂಡ್‌ ಸಭೆಗೆ ದಿಲ್ಲಿಯ ಬಿಜೆಪಿ ಕಚೇರಿಗೆ ಅಮಿತ್‌ ಶಾ ಆಗಮಿಸಿದಾಗ ಚಿತ್ರಿಸಿದ ವಿಡಿಯೋ ಇದು. ಅವರ ಕಾರಿನ ನಂಬರ್‌ ಗಮನಿಸಿದವರು ಅಚ್ಚರಿಪಟ್ಟಿದ್ದಾರೆ. ಇದರಲ್ಲಿ ʼCAA’ ಇದೆ. `DL1 CAA 4421′ ಎಂಬುದು ಈ ಕಾರಿನ ನಂಬರ್‌. ಅಮಿತ್‌ ಶಾ ಅವರು ಸಿಎಎ ಜಾರಿಗೆ ಟೊಂಕ ಕಟ್ಟಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆನ್‌ಲೈನ್‌ ಜಾಣರು ತಮ್ಮದೇ ಅಭಿಪ್ರಾಯಗಳನ್ನು ಈ ಕುರಿತು ತೇಲಿಬಿಟ್ಟಿದ್ದಾರೆ. “ಅಮಿತ್‌ ಶಾ ಸಿಎಎ ಜಾರಿ ಬಗ್ಗೆ ಎಷ್ಟು ಸೀರಿಯಸ್‌ ಆಗಿದ್ದಾರೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ” ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. “ಇದು ಸೂಕ್ಷ್ಮ ಸಂದೇಶ” “CAA ಬರ್ತಾ ಇದೆ, ದಾರಿ ಬಿಡಿ” “ಇದು ಕಾಕತಾಳೀಯ ಆಗಿರಲಿಕ್ಕಿಲ್ಲ” “ಇದು ಮೊದಲೇ ನಮ್ಮ ಕಣ್ಣಿಗೆ ಯಾಕೆ ಬೀಳ್ಲಿಲ್ಲ?” ಎಂದೂ ಇನ್ನೂ ಹಲವರು ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ಅಮಿತ್‌ ಶಾ ಅವರು ಸಿಎಎ ಲೋಕಸಭೆ ಚುನಾವಣೆಗೂ ಮುನ್ನ ಜಾರಿಯಾಗಲಿದೆ ಎಂದು ಹೇಳಿದ್ದರು. ಇತ್ತೀಚೆಗೆ ಗೃಹ ಸಚಿವಾಲಯ ಸಿಎಎ ಜಾರಿಗೆ ಬೇಕಾದ ನಿಯಮಾವಳಿಗಳನ್ನು ಹೊರಡಿಸಲಿದೆ ಎಂದು ಹೇಳಿತ್ತು.

2019ರಲ್ಲೇ ಸಿಎಎ ತಿದ್ದುಪಡಿ ಜಾರಿಯಾದರೂ ನಿಯಮಗಳ ಅಧಿಸೂಚನೆ ಹೊರಡಿಸಿರಲಿಲ್ಲ. ಈ ಕಾಯ್ದೆಯ ಅನ್ವಯ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹಿಂದೂಗಳು, ಸಿಖ್‌ಗಳು, ಬೌದ್ಧರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರು ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಪ್ರವೇಶಿಸಿದ್ದರೆ ಅಂಥವರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಅವಕಾಶವನ್ನು ಈ ಸಿಎಎ ಒದಗಿಸುತ್ತದೆ. ಕೇವಲ ಧರ್ಮವೇ ಭಾರತೀಯ ಪೌರತ್ವ ಪಡೆಯಲು ಮಾನದಂಡವಾದ್ದರಿಂದ ದೇಶಾದ್ಯಂತ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು.

ಸಿಎಎ ವಿರೋಧಿಸಿ 2019 ರಲ್ಲಿ ಭಾರೀ ಪ್ರತಿಭಟನೆಗಳು ಕೂಡ ನಡೆದವು. ಅನೇಕ ರಾಜಕೀಯ ನಾಯಕರು ಸಿಎಎ ಅನ್ನು ರಾಷ್ಟ್ರೀಯ ನಾಗರಿಕರ ನೋಂದಣಿ(NRC)ಗೆ ಸಂಪರ್ಕ ಕಲ್ಪಿಸಿದ್ದರಿಂದ ಗೊಂದಲವು ಉಂಟಾಯಿತು. ಈ ಮಧ್ಯೆ, ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಜೋರಾದ್ದರಿಂದ ಪ್ರತಿಭಟನೆಗಳನ್ನು ಕೈ ಬಿಡಲಾಯಿತು.

ಅಲ್ಲದೇ, ಕೋವಿಡ್ ಕಾರಣದಿಂದಾಗಿ ಸಿಎಎ ಜಾರಿ ಸಂಬಂಧ ನಿಯಮಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ಕೂಡ ವಿಳಂಬ ಮಾಡಿತು. ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸುವುದು ಮೊದಲ ಆದ್ಯತೆಯಾದ್ದರಿಂದ ನಿಯಮಗಳನ್ನು ರಚಿಸಲು ಕೇಂದ್ರ ಸರ್ಕಾರವು ಮುಂದಾಗಲಿಲ್ಲ. ಈಗ ಮತ್ತೆ ಸಿಎಎ ಕುರಿತು ಅಧಿಸೂಚನೆ ಹೊರಡಿಸಲು ಸರ್ಕಾರವು ಈಗ ಮುಂದಾಗಿದೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರವು ಮತ್ತೆ ಸಿಎಎಯತ್ತ ತನ್ನ ಕಣ್ಣು ನೆಟ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: CAA Rules: ಕೇಂದ್ರ ಸರ್ಕಾರದಿಂದ ಶೀಘ್ರವೇ ಸಿಎಎ ನಿಯಮಗಳ ಅಧಿಸೂಚನೆ?

Exit mobile version