Site icon Vistara News

Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

Viral Video

Viral Video

‍ಧರ್ಮಶಾಲಾ: ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಯುವಕನೊಬ್ಬ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಘಟನೆಯನ್ನು ಚಿತ್ರೀಕರಿಸಿ ಆತ್ಮಹತ್ಯೆಯ ಕಾರಣವನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video). ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತನನ್ನು 22 ವರ್ಷದ ಸುನಿಲ್ ತಿವಾರಿ ಅಲಿಯಾಸ್ ಛೋಟು ಎಂದು ಗುರುತಿಸಲಾಗಿದೆ.

ಸಾಯುವ ಮೊದಲು ಸುನಿಲ್ ತಿವಾರಿ 1 ನಿಮಿಷ 22 ಸೆಕೆಂಡುಗಳ ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಅದರಲ್ಲಿ ಆತ ಗ್ರಾಮದ ಮುಖ್ಯಸ್ಥ ಮತ್ತು ಆತನ ಸಹಚರರ ಕಿರುಕುಳಕ್ಕೆ ಹೇಗೆ ಬಲಿಯಾದೆ ಎನ್ನುವುದನ್ನು ವಿವರಿಸಿದ್ದಾನೆ. ಸದ್ಯ ಈ ವಿಡಿಯೊ ನೋಡಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಹೊಲದಲ್ಲಿ ಕುಳಿತಿರುವ ಸುನಿಲ್ ತಿವಾರಿಯನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಬಳಿಕ ಆತ ವಿಷದ ಬಾಟಲಿಯನ್ನು ಕ್ಯಾಮೆರಾದ ಎದುರು ಹಿಡಿಯುತ್ತ, ಅಳುತ್ತ ಮಾತನಾಡುತ್ತಾನೆ. ಗ್ರಾಮದ ಮುಖ್ಯಸ್ಥ ಮತ್ತು ಅವನ ಸಹಚರರು ಹೇಗೆ ಕಿರುಕುಳ ನೀಡಿದರು ಎನ್ನುವುದನ್ನು ವಿವರಿಸುತ್ತಾನೆ. ಜತೆಗೆ ವಿಷದ ಮಾತ್ರೆ ಸೇವಿಸಿರುವುದಾಗಿ ತಿಳಿಸಿದ್ದಾನೆ. ಸಾಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಗೊತ್ತಿಲ್ಲ ಎಂದೂ ಹೇಳುತ್ತಾನೆ.

“ಗ್ರಾಮದ ಮುಖ್ಯಸ್ಥ ಮತ್ತು ಅವನ ಸಹಚರರು ನನಗೆ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಅದಕ್ಕಾಗಿಯೇ ಇಂದು ನಾನು ನನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ನಾನು ಈ ವಿಷವನ್ನು ಸೇವಿಸಿದ್ದೇನೆ ಮತ್ತು ನಾನು ಎಷ್ಟು ಹೊತ್ತು ಬದುಕುತ್ತೇನೆ ಎಂಬುದು ನನಗೆ ತಿಳಿದಿಲ್ಲ. ನಾನು 5 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇನೆ. ನಾನು ಇಂದು ಹೊರಡುತ್ತಿದ್ದೇನೆ. ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳಿ. ನಾನು ನಿಮ್ಮನ್ನು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲʼʼ ಎಂದು ಸುನಿಲ್‌ ಹೇಳಿದ್ದಾನೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ವರದಿಗಳ ಪ್ರಕಾರ, ಸುನಿಲ್ ಅವರನ್ನು ಬುಧವಾರ ಸಂಜೆ ಗಂಭೀರ ಸ್ಥಿತಿಯಲ್ಲಿ ಝಾನ್ಸಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ʼʼಕೆಲವು ವ್ಯಕ್ತಿಗಳೊಂದಿಗಿನ ವಿವಾದದ ನಂತರ ನನ್ನ ಸಹೋದರ ಸುನಿಲ್ ವಿಷ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ಆರೋಪಿಸಿ ಸುನಿಲ್ ಸಹೋದರ ಶೀತಲ್ ಬುಧವಾರ ಮಜ್ಗವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

ಇಬ್ಬರ ಬಂಧನ

ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುನಿಲ್‌ ತನ್ನ ವಿಡಿಯೊದಲ್ಲಿ ಉಲ್ಲೇಖಿಸಿರುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬರೈಲ್ ಗ್ರಾಮದ ಮುಖ್ಯಸ್ಥ ದಿನೇಶ್, ರಾಜ್ ಕುಮಾರ್, ಪ್ರಶಾಂತ್, ಧನ್ನಿ ಮತ್ತು ಆಯುಷ್ ವಿರುದ್ಧ ಐಪಿಸಿ ಸೆಕ್ಷನ್ 30 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 18ರಂದು ಹರಿದ್ವಾರ ಬಾಬಾ ಗ್ರಾಮದ ಹೊರಗೆ ಸುನಿಲ್ ಮತ್ತು ಧನ್ನಿ ನಡುವೆ ವಾಗ್ವಾದ ನಡೆದಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಸುನಿಲ್ ತನ್ನ ಸಂಬಂಧಿಕರೊಂದಿಗೆ ಹೊರಟು ಹೋಗಿದ್ದ. ಬಳಿಕ ಎರಡೂ ಕಡೆಯವರಿಗೆ ಠಾಣೆಗೆ ಬರಲು ತಿಳಿಸಲಾಗಿತ್ತು. ಆದರೆ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Exit mobile version