ಇಂದು ಎಲ್ಲರ ಕೈಗೂ ಮೊಬೈಲ್ ಫೋನ್, ಕ್ಯಾಮರಾ ಬಂದಿರುವುದರಿಂದ, ಎಲ್ಲೆಡೆ ಸಿಸಿಟಿವಿಗಳಿರುವುದರಿಂದ ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವಿಡಿಯೋಗಳದ್ದೇ ಕಾರುಬಾರು. ಅದರಲ್ಲೂ, ಪ್ರಾಣಿಪಕ್ಷಿಗಳ, ಕ್ರೂರಮೃಗಗಳ ಆಶ್ಚರ್ಯವೆನಿಸುವ, ತಮಾಷೆಯ ವಿಡಿಯೋಗಳೂ ಕೂಡಾ ವೈರಲ್ ಆಗಿ ದಂಗುಬಡಿಸುತ್ತವೆ. ಈಗ ಹಾಗೆಯೇ ದಂಗುಬಡಿಸುವ ಸುದ್ದಿ ಊಟಿಯಿಂದ ಬಂದಿದೆ. ಊಟಿಯ ಗಾಲ್ಫ್ ಕೋರ್ಸ್ ಪಕ್ಕದಲ್ಲೇ ಹುಲಿಯೊಂದು ತನ್ನ ಬೇಟೆಯನ್ನು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು ಪ್ರವಾಸಿಗರ ಮೈಯಲ್ಲೂ ನಡುಕ ಹುಟ್ಟಿಸಿದೆ!
ತಮ್ಮ ಮನೆಯ, ಹೊಟೇಲಿನ ಸುತ್ತಮುತ್ತ ಚಿರತೆಗಳು ಸುತ್ತಾಡುವುದನ್ನು, ನಾಯಿಯನ್ನು ಹೊತ್ತೊಯ್ದ ಸುದ್ದಿಯನ್ನು ಜನರ ಬಾಯಿಯಲ್ಲಿ ಸಾಮಾನ್ಯವಾಗಿ ಕೇಳಿರುತ್ತೇವೆ. ಹಾಗೂ ನೋಡಿರುತ್ತೇವೆ ಕೂಡಾ. ಹಾಗೂ ಇದು ಬಹಳ ಸಾಮಾನ್ಯವೂ ಕೂಡಾ. ಆದರೆ ಹುಲಿಯ ಹೆಸರು ಕೇಳಿದರೆ ಮಾತ್ರ ಎಲ್ಲರ ಮೈಯ ರೋಮವೂ ನೆಟ್ಟಗಾಗುತ್ತದೆ. ಯಾಕೆಂದರೆ, ಹುಲಿಯೆಂದರೆ ಹುಲಿಯೇ!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದ್ದು, ಊಟಿಯ ಗಾಲ್ಫ್ ಕೋರ್ಸ್‌ನ ಬೇಲಿಯಿಂದಾಚೆಗೆ ಹುಲಿಯೊಂದು ಹಸುವೊಂದನ್ನು ತಿನ್ನುತ್ತಿರುವ ದೃಶ್ಯ ಸೆರೆಯಾಗಿದೆ. ʻಹುಲಿ ತನ್ನ ಆಹಾರದೊಂದಿಗೆ!ʼ ಎಂಬ ತಲೆಬರಹದ ಅಡಿಯಲ್ಲಿ ʻಇದು ಊಟಿಯ ಗಾಲ್ಫ್ ಕೋರ್ಸ್‌ನ ಬದಿಯಲ್ಲೇʼ ಎಂಬ ವಿವರಣೆಯೊಂದಿಗೆ ಪೋಸ್ಟ್ ಮಾಡಲಾದ ವಿಡಿಯೋ ನೋಡಿ ಜನ ದಂಗಾಗಿದ್ದಾರೆ.
ಸತ್ತು ಬಿದ್ದಿರುವ ಹಸುವಿನ ಹಿಂಭಾಗದಲ್ಲಿ ಸ್ವಲ್ಪ ಭಾಗವನ್ನು ಈಗಾಗಲೇ ತಿಂದಿರುವ ಹುಲಿಯೊಂದು ಅಲ್ಲೇ ಪೊದೆಗಳ ಅಕ್ಕ ಪಕ್ಕ ಅಡ್ಡಾಡುವ ವಿಡಿಯೋನ ಸಣ್ಣ ತುಣಕು ಇದಾಗಿದೆ. ಮನುಷ್ಯರ ವಸತಿಯಿರುವ ಪ್ರದೇಶದಲ್ಲಿ ಬಹಳ ಹತ್ತಿರದಲ್ಲೇ ಹುಲಿಯೊಂದು ಹೀಗೆ ಕಾಣ ಸಿಕ್ಕಿದ್ದು ಮಾತ್ರ ಬಹುತೇಕರಿಗೆ ಶಾಕ್ ಆಗಿದೆ.
ಇದನ್ನೂ ಓದಿ | Viral video | ಹಸಿವಿಲ್ಲದಂತೆ ನಟಿಸುವ ಈ ನಾಯಿಯ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ!
ʻಊಟಿಯ ಬಳಿ ದಟ್ಟವಾದ ಕಾಡಿನ ನಡುವೆಯೇ ಈ ಗಾಲ್ಫ್ ಕೋರ್ಸ್ ಮಾಡಲಾಗಿದೆ ಅನಿಸುತ್ತದೆ. ಅದಕ್ಕಾಗಿಯೇ ಇಷ್ಟು ಹತ್ತಿರದಲ್ಲಿ ಹುಲಿಗಳು ಕಾಣಿಸುತ್ತಿವೆ. ಆದರೆ ಇಲ್ಲಿ ಗಾಲ್ಫ್ ಆಡುವಾಗ ಆದಷ್ಟು ಹುಷಾರಾಗಿರಬೇಕು. ಬಹಳ ಡೇಂಜರಸ್ ವಿಷಯ ಇದುʼ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು, ʻಮನುಷ್ಯರು ಅಲ್ಲಿ ಆಡುವಾಗ ಮನುಷ್ಯರಿಗಿಂತ ಹೆಚ್ಚು ಹುಲಿಯೇ ಜಾಗ್ರತೆ ವಹಿಸಬೇಕಾಗಿದೆ. ಯಾಕೆಂದರೆ, ನಾವು ಹುಲಿಗಳಿಗೆ ಸೇರಬೇಕಾದ ಜಾಗವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ನಮ್ಮ ಮನರಂಜನೆಗಾಗಿ ಅವುಗಳು ಬದುಕುವ ಪ್ರದೇಶವನ್ನು ನಮ್ಮ ವಶದಲ್ಲಿಟ್ಟುಕೊಂಡಿದ್ದೇವೆ. ತಮಾಷೆಯಲ್ಲ, ಇದು ಸತ್ಯ ಕೂಡಾʼ ಎಂದಿದ್ದಾರೆ.
ʻಅಯ್ಯೋ, ಇಲ್ಲಿ ನಾನು ಗಾಲ್ಫ್ ಆಡಿದ್ದೇನೆ. ಆದರೆ, ಹುಲಿಯನ್ನು ಇಷ್ಟು ಹತ್ತಿರದಿಂದ ನೋಡುವ ಅದೃಷ್ಟ ನನಗೆ ಸಿಕ್ಕಿಲ್ಲʼ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ʻಇದು ಬಹಳ ಬೇಸರದ ವಿಷಯ. ಮನುಷ್ಯ ತನ್ನ ಲೋಭ, ಲಾಭಕ್ಕೆ ಕಾಡನ್ನು ಅತಿಕ್ರಮಿಸುತ್ತಿದ್ದಾನೆ. ಹುಲಿಯೊಂದು ಹಸುವನ್ನು ಬೇಟೆಯಾಡಿ ತಿಂದಿರುವುದು ಅವು ನರಭಕ್ಷಕರಾಗುವುದಕ್ಕೆ ಮೊದಲ ಹೆಜ್ಜೆʼ ಎಂದು ಇನ್ನೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Viral post | ಚಂಡಮಾರುತದಲ್ಲಿ ಗಾಯಗೊಂಡಿದ್ದ ರಣಹದ್ದು 5 ವರ್ಷ ಬಳಿಕ ವಿಮಾನದಲ್ಲಿ ಮರಳಿ ಗೂಡಿಗೆ!