Site icon Vistara News

Viral post | ಚಂಡಮಾರುತದಲ್ಲಿ ಗಾಯಗೊಂಡಿದ್ದ ರಣಹದ್ದು 5 ವರ್ಷ ಬಳಿಕ ವಿಮಾನದಲ್ಲಿ ಮರಳಿ ಗೂಡಿಗೆ!

vulture

ಚಂಡಮಾರುತ ಅಪ್ಪಳಿಸಿದಾಗ, ನೆರೆ ಹಾವಳಿಯಾದಾಗ, ಎಷ್ಟು ಮಂದಿ ಸತ್ತರು, ಎಷ್ಟು ಮನೆ ಮಠಗಳಿಗೆ ಹಾನಿಯಾಯ್ತು ಎಂಬ ಅಂದಾಜು ಲೆಕ್ಕಾಚಾರಗಳನ್ನೆಲ್ಲ ನಾವು ತೆಗೆದು ಅಯ್ಯೋ ಎನ್ನುತ್ತೇವೆ. ತಮ್ಮವರನ್ನು ಕಳೆದುಕೊಂಡವರ ನೋಡಿ ಮರುಕ ಪಡುತ್ತೇವೆ. ಆಸ್ತಿ ಪಾಸ್ತಿ ಕಳೆದುಕೊಂಡು ನಿರ್ಗತಿಕರಾದವರಿಗೆ ಸಹಾಯ ಮಾಡುತ್ತೇವೆ. ಆದರೆ, ಇಂಥ ಪ್ರಕೃತಿ ವಿಕೋಪಗಳಲ್ಲಿ ನಮ್ಮೆಲ್ಲರ ನಡುವೆ ಜೀವಿಸುತ್ತಿದ್ದ ಪ್ರಾಣಿ ಪಕ್ಷಿ ಗಿಡಮರಗಳ ಪರಿಸ್ಥಿತಿಯ ಬಗ್ಗೆ ನಾವು ಯೋಚಿಸಲು ಹೋಗುವುದಿಲ್ಲ. ಅವುಗಳಿಗೇನಾಯ್ತು, ಎಷ್ಟು ಪಕ್ಷಿಗಳು ತಮ್ಮ ಗೂಡು ಕಳೆದುಕೊಂಡಿರಬಹುದು, ಎಷ್ಟು ಪ್ರಾಣಿಗಳು ತಮ್ಮ ಅಮ್ಮನನ್ನು ಕಳೆದುಕೊಂಡಿರಬಹುದು ಎಂದೆಲ್ಲ ಯೋಚಿಸುವುದು ಅಪರೂಪ. ಆದರೂ, ಇವೆಲ್ಲ ಭಾರೀ ಸುದ್ದಿಯಾಗದಿದ್ದರೂ ಸಂಬಂಧ ಪಟ್ಟ ಇಲಾಖೆಗಳು, ಇವುಗಳ ಲೆಕ್ಕ ತೆಗೆದುಕೊಳ್ಳುತ್ತವೆ, ಕೈಯಲ್ಲಾದ ಕಾಳಜಿಯನ್ನು ಮಾನವೀಯತೆಯಿಂದ ಮಾಡುತ್ತವೆ ಕೂಡಾ.

ಇದೀಗ ಇಲ್ಲೊಂದು ಮನಮಿಡಿಯುವ ಸುದ್ದಿಯಿದೆ. ಬಹಳ ಅಪರೂಪದ ಸಂತಸದ ಸುದ್ದಿ. ಐದು ವರ್ಷಗಳ ಹಿಂದೆ ಚಂಡಮಾರುತದ ವೇಳೆಯಲ್ಲಿ ಗಾಯಗೊಂಡು ಪುರ್ವಸತಿ ಕೇಂದ್ರ ಸೇರಿದ ರಣಹದ್ದಿನ ಜಾತಿಗೆ ಸೇರಿದ ವಲಸಿಗ ಹಕ್ಕಿಯೊಂದು ಕೊನೆಗೂ ಚೇತರಿಸಿಕೊಂಡು ಹಾರಲು ಶಕ್ತವಾಗಿದೆ. ಅದೀಗ ಐದು ವರ್ಷಗಳ ನಂತರ ತನ್ನ ಸ್ವಸ್ಥಾನಕ್ಕೆ ಮರಳಿದೆ!

ಬಹುಶಃ ೨೦೧೭ರ ಓಖಿ ಚಂಡಮಾರುತವನ್ನು ನಾವೆಲ್ಲ ಮರೆತಿರಬಹುದು. ದಕ್ಷಿಣ ಭಾರತದ ಕರಾವಳಿಗೆ ಅಪ್ಪಳಿಸಿದ್ದ ಇದು ೩೦೦ ಮಂದಿಯನ್ನು ಬಲಿ ಪಡೆದುಕೊಂಡಿತ್ತು. ತಮಿಳುನಾಡು ಹಾಗೂ ಇತರ ಸುತ್ತಮುತ್ತಲ ರಾಜ್ಯಗಳಲ್ಲಿ ಭಾರೀ ಹಾವಳಿ ನಡೆಸಿದ್ದ ಇದು, ಸಾವಿರಾರು ಮಂದಿಯ ಮನೆ ಮಠ ಆಸ್ತಿಯನ್ನು ಬುಡಮೇಲು ಮಾಡಿತ್ತು. ಅಪಾರ ಹಾನಿ, ಬೆಳೆ ನಷ್ಟ ಮತ್ತಿತರ ತೊಂದರೆಗಳಿಗೆ ಜನರು ಸಿಲುಕಿದ್ದರು.

ಕನ್ಯಾಕುಮಾರಿಯ ಸಮೀಪದಲ್ಲಿ ವಲಸೆ ಬಂದ ಹಕ್ಕಿಗಳಿಗೂ ಈ ಚಂಡಮಾರುತದಿಂದ ಬಹಳ ತೊಂದರೆಯಾಗಿತ್ತು. ಹಲವು ಪಕ್ಷಿಗಳು ಜೀವ ಕಳೆದುಕೊಂಡಿದ್ದರೆ, ಹಲವನ್ನು ರಕ್ಷಿಸಲಾಗಿತ್ತು. ಈ ಸಂದರ್ಭ ಅಲ್ಲಿ ಗಾಯಗೊಂಡು ಪುನರ್ವಸತಿ ಕೇಂದ್ರ ದಾಖಲಾದ ಹಕ್ಕಿಗಳ ಪೈಕಿ ಈ ರಣಹದ್ದೂ ಒಂದು. ಅರಣ್ಯ ಇಲಾಖೆಯ ಪಶುವೈದ್ಯ ವಿಭಾಗದಡಿ ಪಾಲನೆ ಮಾಡಲಾಗುತ್ತಿದ್ದ ಇದೀಗ ಬರೋಬ್ಬರಿ ಐದು ವರ್ಷಗಳ ನಂತರ ಚೇತರಿಸಿಕೊಂಡು ಹಾರಲು ಸಿದ್ಧವಾಗಿದೆ!

ಇದನ್ನೂ ಓದಿ | Viral news | 88ನೇ ಮದುವೆಯಾಗಲು ಹೊರಟ 61ರ ಹರೆಯದ ಯುವಕ!

ಅರಣ್ಯ ಇಲಾಖೆ, ಈ ಹಕ್ಕಿ ಇದೀಗ ಬೆಳೆದು ದೊಡ್ಡವೂ ಆಗಿದ್ದು, ಹಾರಲು ಸಿದ್ಧವಾಗಿದೆ. ಇದಕ್ಕೆ ಚಂಡಮಾರುತದ ನೆನಪಿನಲ್ಲಿ ಒಖಿ ಎಂದೇ ನಾಮಕರಣ ಮಾಡಲಾಗಿದೆ ಎಂದಿದೆ. ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಹಕ್ಕಿಯ ಚೇತರಿಕೆಯ ವಿಮಾನ ಪಯಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ರಾಜಸ್ಥಾನದ ಜೋಧ್‌ಪುರಕ್ಕೆ ಕಳುಹಿಸಲಾಗಿದ್ದು ಅಲ್ಲಿನ ಮಾಚಿಯಾ ಜೈವಿಕ ಉದ್ಯಾನವನಲ್ಲಿ ಬಿಡಲಾಗಿದೆ. ಈಗಾಗಲೇ ಹಕ್ಕಿಯನ್ನು ಅಲ್ಲಿಗೆ ರವಾನೆ ಮಾಡಲಾಗಿದೆ ಎಂದಿದ್ದಾರೆ.

ʻತಮಿಳುನಾಡಿನಿಂದ ರಾಜಸ್ಥಾನಕ್ಕೆ ಏರ್‌ ಇಂಡಿಯಾದಲ್ಲಿ ಪಯಣಿಸಿರುವ, ೨೦೧೭ರ ಚಂಡಮಾರುತ ಓಖಿಯಲ್ಲಿ ಗಾಯಗೊಂಡಿದ್ದ ಹಕ್ಕಿ ಒಖಿಯ ಹೃದಯಸ್ಪರ್ಶಿ ಕಥೆಯಿದು. ಇದೀಗ ಐದು ವರ್ಷಗಳ ನಂತರ ಸಂಪೂರ್ಣವಾಗಿ ಹಾರಲು ಶಕ್ತವಾಗಿದೆ!ʼ ಎಂಬ ತಲೆಬರಹದಡಿ ವಿಡಿಯೋ ಜೊತೆಗೆ ಪೋಸ್ಟ್‌ ಮಾಡಲಾಗಿದೆ.

ಹಕ್ಕಿಯೊಂದನ್ನು ವಿಮಾನದಲ್ಲಿ ಕಳುಹಿಸಿದ್ದು ಇದೇ ಮೊದಲ ಬಾರಿಯಾದ್ದರಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಕ್ಕಿಗೆ ನೀರು ಆಹಾರಗಳನ್ನೂ ನೀಡಲಾಗಿದೆ. ಜೋಧ್‌ಪುರ ತಮಿಳುನಾಡಿನಿಂದ ೨,೬೦೦ ಕಿಮೀ ದೂರದಲ್ಲಿರುವುದರಿಂದ ಹಕ್ಕಿಯನ್ನು ಸಾಧ್ಯವಾದಷ್ಟು ಬೇಗ ತಲುಪಬಹುದಾದ ವಿಮಾನದಲ್ಲಿ ಒಂದು ಗೂಡಿನೊಳಗೆ ಹಾಕಿ ಕಳುಹಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಂದೆ ಹಕ್ಕಿ ಸಹಜವಾಗಿ ಎಲ್ಲ ಹಕ್ಕಿಗಳಂತೆ ಜೋಧಪುರದ ಜೈವಿಕ ಉದ್ಯಾನದಲ್ಲಿ ಬದುಕಲಿದೆ.

ಇದನ್ನೂ ಓದಿ | Viral video | ಹಸಿವಿಲ್ಲದಂತೆ ನಟಿಸುವ ಈ ನಾಯಿಯ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ!

Exit mobile version