ನವ ದೆಹಲಿ: ರೇಪ್ ಆರೋಪಿ ಸ್ವಾಮಿ ನಿತ್ಯಾನಂದನ ಸ್ವಘೋಷಿತ ರಾಷ್ಟ್ರ ʼಕೈಲಾಸʼದಿಂದ ಪ್ರತಿನಿಧಿಯೊಬ್ಬಳನ್ನು ವಿಶ್ವಸಂಸ್ಥೆ ಸಭೆಗೆ ಕಳಿಸಿರುವ ಸುದ್ದಿಯನ್ನು ನೀವು ಓದಿದ್ದೀರಿ. ಹೀಗೆ ಪ್ರತಿನಿಧಿಯಾಗಿ ಬಂದ ʼಮಾ ವಿಜಯಪ್ರಿಯಾ ನಿತ್ಯಾನಂದʼ ಯಾರು ಎಂಬ ಕುತೂಹಲ ಈಗ ಮೂಡಿದೆ.
ಕೇಸರಿ ಬಟ್ಟೆ ಧರಿಸಿ, ತಲೆಯ ಮೇಲೆ ಒಣಗಿದ ಕೂದಲ ಜೊಂಪೆಯನ್ನೇ ರುಮಾಲಿನಂತೆ ಕಟ್ಟಿಕೊಂಡ, ರುದ್ರಾಕ್ಷಿ ಧರಿಸಿದ ವಿಜಯಪ್ರಿಯಾ ಎಂಬಾಕೆಯನ್ನು ನಿತ್ಯಾನಂದ ʼಕೈಲಾಸದಿಂದ ವಿಶ್ವಸಂಸ್ಥೆಗೆ ಕಾಯಂ ಪ್ರತಿನಿಧಿʼ ಆಗಿಸಿದ್ದಾನೆ. ನಿರರ್ಗಳ ಇಂಗ್ಲಿಷ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿರುವ ಈಕೆ ʼತನಗೆ ಭಾರತ ಕಿರುಕುಳ ನೀಡುತ್ತಿದೆʼ ಎಂದು ನಿತ್ಯಾನಂದ ಹೇಳಿಕೊಟ್ಟಿದ್ದನ್ನೇ ಅಲ್ಲಿ ಪಲುಕಿದ್ದಾಳೆ.
ವಿಜಯಪ್ರಿಯಾ ನಿತ್ಯಾನಂದ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿರುವ ಪ್ರಕಾರ ಈಕೆ ಅಮೆರಿಕದ ವಾಷಿಂಗ್ಟನ್ ಡಿಸಿಯ ನಿವಾಸಿ. ಆದರೆ ʼಕೈಲಾಸʼ ರಾಷ್ಟ್ರದ ರಾಯಭಾರಿ ಎಂದು ಹೇಳಿಕೊಂಡಿದ್ದಾಳೆ. ಈ ದೇಶದ ಪರವಾಗಿ ವಿವಿಧ ಸಂಘಸಂಸ್ಥೆಗಳ ಜತೆಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದು ಈಕೆಯ ಕಾಯಕವಂತೆ.
ವಿಶ್ವಸಂಸ್ಥೆ ಸಭೆಯ ಸಂದರ್ಭದಲ್ಲಿ ಈಕೆ ಹಲವಾರು ರಾಷ್ಟ್ರಗಳ ಪ್ರತಿನಿಧಿಗಳ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಅವುಗಳನ್ನು ತನ್ನ ಸೋಶಿಯಲ್ ಖಾತೆಗೆ ಜಮಾ ಮಾಡಿದ್ದಾಳೆ. ಅಮೆರಿಕದ ಕೆಲವು ಅಧಿಕಾರಿಗಳ ಜತೆ ಒಪ್ಪಂದಗಳಿಗೆ ಸಹಿ ಮಾಡಿಸಿಕೊಳ್ಳುತ್ತಿರುವ ವಿಡಿಯೋಗಳನ್ನೂ ಅಪ್‌ಲೋಡ್ ಮಾಡಿದ್ದಾಳೆ. ಕೈಲಾಸ ಹಲವು ದೇಶಗಳಲ್ಲಿ ರಾಯಭಾರ ಕಚೇರಿಗಳನ್ನೂ ಎನ್‌ಜಿಒಗಳನ್ನೂ ತೆರೆದಿದೆ ಎಂದೂ ಈಕೆ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Swami Nithyananda: ʼಭಾರತ ತನಗೆ ಕಿರುಕುಳ ನೀಡುತ್ತಿದೆʼ: ವಿಶ್ವಸಂಸ್ಥೆಯಲ್ಲಿ ಭಾಗವಹಿಸಿದ ಕೈಲಾಸದ ಪ್ರತಿನಿಧಿ!
ವಿಜಯಪ್ರಿಯ ಮಾತ್ರವಲ್ಲ, ಇನ್ನೂ ಐವರು ಮಹಿಳೆಯರು ಕೂಡ ಕೈಲಾಸದಿಂದ ಆಕೆಯ ಜತೆಗೆ ಆಗಮಿಸಿದ್ದಾರೆ. ಇವರ ವೇಷಭೂಷಣವೂ ಹೆಚ್ಚುಕಡಿಮೆ ಈಕೆಯಂತೆಯೇ ಇದೆ. ಇವರನ್ನು ಕೈಲಾಸ ಚೀಫ್ ಮುಕ್ತಿಕಾ ಆನಂದ, ಕೈಲಾಸ ಸೇಂಟ್ ಲೂಯಿಸ್ ಚೀಫ್ ಸೋನಾ ಕಾಮತ್, ಕೈಲಾಸ ಯುಕೆ ಚೀಫ್ ನಿತ್ಯಾ ಆತ್ಮದಾಯಕಿ, ಕೈಲಾಸ ಸ್ಲೊವೇನಿಯನ್ ಮಾ ಪ್ರಿಯಂಪರಾ ನಿತ್ಯಾನಂದ, ಕೈಲಾಸ ಫ್ರಾನ್ಸ್ ಚೀಫ್ ನಿತ್ಯಾ ವೆಂಕಟೇಶಾನಂದ ಎಂದು ಆಕೆ ಕರೆದುಕೊಂಡಿದ್ದಾಳೆ.
ನಿತ್ಯಾನಂದ ತನ್ನ ಗುರು, ತನ್ನ ಪಾಲಿಗೆ ಎಲ್ಲವೂ ಈತನೇ ಎಂದು ಈಕೆ ಹೇಳಿಕೊಂಡಿದ್ದಾಳೆ. ʼನಮಸ್ಕಾರʼ ಎನ್ನುವ ಬದಲು ʼನಿತ್ಯಾನಂದಂʼ ಎನ್ನುತ್ತಾಳೆ.
ಕೈಲಾಸವನ್ನು ಒಂದು ರಾಷ್ಟ್ರ ಎಂದು ಗುರುತಿಸಬೇಕು ಎಂಬ ನಿತ್ಯಾನಂದನ ಬೇಡಿಕೆಗೆ ವಿಶ್ವಸಂಸ್ಥೆ ಸೊಪ್ಪು ಹಾಕಿಲ್ಲ. ಈ ಸ್ವಘೋಷಿತ ದೇವಮಾನವನ ಮಾತುಗಳನ್ನು ತಾನು ಪರಿಗಣಿಸಿಲ್ಲ ಎಂದು ಅದು ಹೇಳಿದೆ. ಸಾರ್ವಜನಿಕರ ಅಭಿಪ್ರಾಯ ಮಂಡನೆಗೆ ವಿಶ್ವಸಂಸ್ಥೆ ಸಮಿತಿ ಸಭೆಯನ್ನು ಕರೆದ ವೇಳೆಗೆ ನಿತ್ಯಾನಂದನ ಪ್ರತಿನಿಧಿ ಮಾತನಾಡಿದ್ದಾಳೆ ಅಷ್ಟೇ ಎಂದು ಅದು ಹೇಳಿದೆ.
ಇದನ್ನೂ ಓದಿ: Swami Nithyananda | ಬ್ರಿಟನ್ ಸಂಸತ್ತಿನಲ್ಲಿ ದೀಪಾವಳಿ ಆಚರಿಸಿದನೇ ನಿತ್ಯಾನಂದ?