ಬೆಂಗಳೂರು: ಇದೊಂಥರಾ ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ (Theft case) ಮಹಿಳೆಯ ಸ್ಟೋರಿ. ಈ ಸ್ಟೋರಿಯಲ್ಲಿ ನಾಲ್ಕು ಪಾತ್ರಗಳಿವೆ. ಒಬ್ಬಾಕೆ ಅವಳೇ. ಇನ್ನೊಂದು ಅವಳ ಗಂಡ. ಮತ್ತಿಬ್ಬರು ಆಕೆಯ ಸ್ನೇಹಿತರಾದ ಧನರಾಜ್ ಮತ್ತು ರಾಕೇಶ್! ಇದು ಗಂಡನಿಗೆ ಬುದ್ಧಿ ಕಲಿಸಲೆಂದು ಹೋಗಿ ಫಜೀತಿಗೆ ಸಿಲುಕಿದ ಹೆಣ್ಮಗಳ ಸ್ಟೋರಿ.
ಏನಿದು ಇಂಟ್ರೆಸ್ಟಿಂಗ್ ಸ್ಟೋರಿ.. ಮುಂದೆ ಓದಿ!
ಅವಳ 109 ಗ್ರಾಂ ಚಿನ್ನ ಬ್ಯಾಂಕ್‌ನಲ್ಲಿ ಅಡವು ಇಡಲಾಗಿತ್ತು. ಬಹುಶ: ಅವಳ ಗಂಡ ಅಡವು ಇಟ್ಟಿರಬೇಕು. ಆಕೆ ಅದನ್ನು ಆಕೆ ಅಡವಿನಿಂದ ಬಿಡಿಸಿಕೊಂಡು ಬಂದಿದ್ದಳು. ಬಿಡಿಸಿಕೊಳ್ಳಲು ಹಣ ಕೊಟ್ಟಿದ್ದು ಯಾರು ಅನ್ನುವುದೂ ಸದ್ಯಕ್ಕೆ ಗೊತ್ತಿಲ್ಲ.
ಆದರೆ, ಹೀಗೆ ಬಿಡಿಸಿಕೊಂಡು ಬಂದಿರುವ ಚಿನ್ನ ಮತ್ತೆ ಗಂಡನ ಕೈಗೆ ಸಿಗಬಾರದು ಎನ್ನುವುದು ಆಕೆಯ ಇರಾದೆಯಾಗಿತ್ತು. ಚಿನ್ನ ಇದೆ ಎಂದು ಗೊತ್ತಾದರೆ ಮತ್ತೆ ಅದನ್ನು ತೆಗೆದುಕೊಂಡು ಹೋಗಿ ಅಡವಿಡುತ್ತಾನೆ ಎನ್ನುವ ಲೆಕ್ಕಾಚಾರ.
ಹೀಗಾಗಿ ಆಕೆ ಗಂಡನಿಗೆ ಬುದ್ಧಿ ಕಲಿಸಲೋ, ಯಾಮಾರಿಸಲೋ ಒಂದು ಪ್ಲ್ಯಾನ್ ಮಾಡಿದ್ದಾಳೆ. ಅದೇನೆಂದರೆ ಚಿನ್ನ ಬಿಡಿಸಿಕೊಂಡು ಬರುವಾಗ ಕಳವಾಯಿತು ಎಂದು ಹೇಳುವುದು ಎಂದು. ಆದರೆ, ಆ ಗಂಡ ಅಷ್ಟು ಸುಲಭದಲ್ಲಿ ಆಕೆ ಹೇಳಿದ್ದನ್ನು ನಂಬೋನಲ್ಲ ಅನಿಸುತ್ತದೆ, ಅದಕ್ಕಾಗಿ ಆಕೆ ಕಳವಿನ ಒಂದು ನಾಟಕವನ್ನೇ ಕ್ರಿಯೇಟ್ ಮಾಡಿದ್ದಾಳೆ.
ಆವತ್ತು ಬ್ಯಾಂಕ್‌ನಿಂದ ಚಿನ್ನ ಬಿಡಿಸಿಕೊಂಡು ಆಕೆ ಸ್ಕೂಟಿಯಲ್ಲಿ ಹೋಗಿದ್ದಳು. ಆಕೆ ಚಿನ್ನ ಬಿಡಿಸಿದ್ದೂ ಆಯಿತು. ಮರಳಿ ಹೊರಟಿದ್ದೂ ಆಯಿತು. ಆದರೆ, ದಾರಿಯಲ್ಲಿ ಆಕೆಯ ಸ್ಕೂಟಿಯೇ ಕಾಣೆಯಾಗಿ ಹೋಯಿತು!
ಗಂಡನ ಮುಂದೆ ಬಂದು ಅಯ್ಯೋ ನನ್ನ ಸ್ಕೂಟಿ ಕಳವಾಗಿದೆ. ಅಲ್ಲೇಲ್ಲೋ ಇಟ್ಟಿದ್ದೆ, ಮರಳಿ ಬರುವಾ ಸ್ಕೂಟರ್ ಇಲ್ಲ. ಅದರಲ್ಲಿದ್ದ ಚಿನ್ನವೂ ಇಲ್ಲ ಎಂದು ಆಕೆ ಗಂಡನ ಮುಂದೆ ಅಲವತ್ತುಕೊಂಡಳು. ಜತೆಗೆ ಪೊಲೀಸ್ ಠಾಣೆಗೆ ದೂರು ನೀಡಿದರು.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಲು ಶುರು ಮಾಡಿದರು. ಮಹಿಳೆ ಸ್ಕೂಟಿ ಇಟ್ಟಿದ್ದೆಲ್ಲ, ಯಾವಾಗ ಕಳವಾಗಿದ್ದು ಎಂಬೆಲ್ಲ ಮಾಹಿತಿ ಪಡೆದು ಸಿಸಿ ಟಿವಿ ಫೂಟೇಜ್ ನೋಡಿದರು. ಅದರಲ್ಲಿ ಕಳವು ಮಾಡಿದ್ದು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಸುಲಭವಾಯಿತು.
ಧನರಾಜ್ ಮತ್ತು ರಾಕೇಶ್ ಎಂಬಿಬ್ಬರನ್ನು ಬಂಧಿಸಿ ಕರೆದು ತಂದರು. ಅವರ ಕೈಲಿದ್ದ ಮೊಬೈಲ್ ಚೆಕ್ ಮಾಡಿದರು. ಆಗ ಅವರಿಗೆ ಕಳ್ಳರು ಮತ್ತು ಮಹಿಳೆ ಮೊದಲೇ ಕನೆಕ್ಷನ್‌ನಲ್ಲಿದ್ದರು ಎನ್ನುವುದು. ವಿಚಾರಣೆ ನಡೆಸಿದಾಗ ಕಳವಿನ ನಾಟಕದ ಕಥೆ ಬಯಲಾಯಿತು.
ಚಿನ್ನ ಬಿಡಿಸಿಕೊಂಡು ಮನೆಗೆ ಹೊರಟಿದ್ದ ಮಹಿಳೆ ಸ್ಕೂಟಿಯನ್ನು ಒಂದು ಕಡೆಯಲ್ಲಿ ನಿಲ್ಲಿಸಿ ಧನರಾಜ್ ಮತ್ತು ರಾಕೇಶ್‌ಗೆ ಕರೆ ಮಾಡಿದ್ದಳು. ಚಿನ್ನ ಸ್ಕೂಟಿಯ ಡಿಕ್ಕಿಯಲ್ಲಿತ್ತು. ಸ್ನೇಹಿತರಾದ ಧನರಾಜ್ ಮತ್ತು ರಾಕೇಶ್ ಪೈಕಿ ಧನರಾಜ್ ಬಂದು ಸ್ಕೂಟಿ ತೆಗೆದುಕೊಂಡು ಹೋಗಿದ್ದ!
ಬಳಿಕ ಮಹಿಳೆಯನ್ನು ಕರೆದು ವಿಚಾರಣೆ ನಡೆಸಲಾಯಿತು. ಆಕೆ ಗಂಡನಿಗೆ ಬುದ್ಧಿ ಕಲಿಸಲು ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ : Fraud Case : ನಕಲಿ RAW ಅಧಿಕಾರಿ ಅರೆಸ್ಟ್; ಆ ವಿದ್ಯಾರ್ಥಿಯಲ್ಲಿತ್ತು ಹಲವು ಐಡಿ ಕಾರ್ಡ್, ಪೊಲೀಸ್ ಯುನಿಫಾರ್ಮ್!
ಪೊಲೀಸರಿಗೆ ಈಗ ಧರ್ಮ ಸಂಕಟ!
ಪೊಲೀಸರಿಗೆ ಈಗ ಒಂದು ರೀತಿಯ ಧರ್ಮ ಸಂಕಟ. ಮಹಿಳೆಯೇ ತನ್ನ ಗೆಳೆಯರಿಗೆ ಹೇಳಿ ಸ್ಕೂಟರ್ ಕಳವು ಮಾಡಿಸಿದ್ದಾಳೆ. ಆಕೆಯೇ ದೂರು ನೀಡಿದ್ದಾಳೆ. ಕ್ರಮ ಕೈಗೊಳ್ಳುವುದು ಹೇಗೆ? ಸಾಲದ್ದಕ್ಕೆ ಗಂಡನಿಗೆ ಬುದ್ಧಿ ಕಲಿಸಲು ಹೀಗೆ ಮಾಡಿದ್ದಾಗಿ ಹೇಳುತ್ತಿದ್ದಾಳೆ. ಅಷ್ಟು ಮಾತ್ರವಲ್ಲ ಅವಳದ್ದೇ ಚಿನ್ನವಾಗಿರೋದರಿಂದ ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ ಪೊಲೀಸರು. ಮಲ್ಲೆಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಇದು.