Site icon Vistara News

Biodiversity: ದಿನಾ ಇಡ್ಲಿ ತಿಂತೀರಾ? ಹಾಗಾದ್ರೆ ಜೀವವೈವಿಧ್ಯ ಹಾನಿಗೆ ನಿಮ್ಮದೇ ಹೆಚ್ಚಿನ ಕೊಡುಗೆ!

Idli

ಹೊಸದಿಲ್ಲಿ: ನೀವು ಪ್ರತಿದಿನ ಇಡ್ಲಿ (Idli) ಸೇವಿಸುವವರಾಗಿದ್ದರೆ, ಅಥವಾ ರಾಜ್ಮಾ (Rajma) ಸವಿಯುವವರಾಗಿದ್ದರೆ, ನೀವು ಜೀವವೈವಿಧ್ಯತೆಗೆ (biodiversity) ಸ್ವಲ್ಪ ಹೆಚ್ಚಿನ ಹಾನಿಯನ್ನೇ ಉಂಟುಮಾಡುತ್ತಿದ್ದೀರಿ ಅಂತ ಅರ್ಥ ಮಾಡಿಕೊಳ್ಳಬೇಕು. ಇದನ್ನು ಹೇಳಿದ್ದು ನಾವಲ್ಲ, ಕೆಲವು ಜೀವವಿಜ್ಞಾನಿಗಳು.

ಹೌದು, ವಿಜ್ಞಾನಿಗಳು ಪ್ರಪಂಚದಾದ್ಯಂತದ 151 ಜನಪ್ರಿಯ ಭಕ್ಷ್ಯಗಳ ʼಜೀವವೈವಿಧ್ಯತೆಯ ಹೆಜ್ಜೆಗುರುತುʼ (biodiversity footprints) ನಿರ್ಣಯಿಸಿದ್ದಾರೆ. ಈ ಪಟ್ಟಿಯನ್ನು ನೋಡಿದರೆ ನಿಮಗೆ ಆಶ್ಚರ್ಯ ಆಗಬಹುದು. ಭಾರತದ ಪ್ರೀತಿಯ ಇಡ್ಲಿ, ಚನ್ನಾ ಮಸಾಲಾ, ರಾಜ್ಮಾ ಮತ್ತು ಚಿಕನ್ ಜಲ್ಫ್ರೇಜಿ (chicken jalfrezi) ಪರಿಸರದ ಮೇಲಿನ ದುಷ್ಪ್ರಪ್ರಭಾವದ ಪಟ್ಟಿಯಲ್ಲಿ ಟಾಪ್ 25ರಲ್ಲಿ ಇವೆಯಂತೆ.

ಸ್ಪ್ಯಾನಿಷ್ ಹುರಿದ ಭಕ್ಷ್ಯ ʼಲೆಚಾಜೊʼ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಕುರಿ ಮಾಂಸದ ಭಕ್ಷ್ಯ. ಇದರ ನಂತರ ನಾಲ್ಕು ಭಕ್ಷ್ಯಗಳು ಬ್ರೆಜಿಲಿಯನ್ ಮಾಂಸಕೇಂದ್ರಿತ ಅಡುಗೆಗಳು. ಸಂಶೋಧಕರು ಆರನೇ ಸ್ಥಾನದಲ್ಲಿ ಇಡ್ಲಿ ಮತ್ತು ಏಳನೇ ಸ್ಥಾನದಲ್ಲಿ ರಾಜ್ಮಾ ಕರಿಯನ್ನು ಇರಿಸಿದ್ದಾರೆ.

ವೈಜ್ಞಾನಿಕ ಜರ್ನಲ್ PLOS Oneನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಸಿಂಗಾಪುರ (Singapore) ವಿಶ್ವವಿದ್ಯಾನಿಲಯ ಪ್ರೊಫೆಸರ್‌ ಎಲಿಸ್ಸಾ ಚೆಂಗ್ ಮತ್ತು ಸಹೋದ್ಯೋಗಿಗಳು ಇದನ್ನು ಮಾಡಿದ್ದಾರೆ. ಇದು 151 ಭಕ್ಷ್ಯಗಳ ಪ್ರಭಾವವನ್ನು ವಿಶ್ಲೇಷಿಸಿದೆ. ಆಯಾಯ ದೇಶದ ಒಟ್ಟು ಉತ್ಪನ್ನದ ಆಧಾರದ ಮೇಲೆ ಅಗ್ರ 25ರ ಪಟ್ಟಿ ಮಾಡಲಾಗಿದೆ.

ಸಾಮಾನ್ಯವಾಗಿ ಸಸ್ಯಾಹಾರಿ ಅಡುಗೆಗಳು (Vegetarian dish) ಮಾಂಸದ ಅಡುಗೆಗಳಿಗಿಂತ ಕಡಿಮೆ ಜೀವವೈವಿಧ್ಯದ ಹೆಜ್ಜೆಗುರುತುಗಳನ್ನು ಹೊಂದಿವೆ. ಆದರೆ ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಕೆಲವು ಭಕ್ಷ್ಯಗಳು ಈ ಪಟ್ಟಿಯಲ್ಲಿ ಮೇಲಿರುವುದನ್ನು ಕಂಡು ಸ್ವತಃ ಸಂಶೋಧಕರು ಆಶ್ಚರ್ಯಚಕಿತರಾಗಿದ್ದಾರೆ.

ʼಜೀವವೈವಿಧ್ಯದ ಹೆಜ್ಜೆಗುರುತುʼ ಇದು ಜೀವವೈವಿಧ್ಯದ ಮೇಲೆ ನಮ್ಮ ಚಟುವಟಿಕೆಗಳ ಪ್ರಭಾವವನ್ನು ಅಳೆಯುವ ಮಾನದಂಡ. ಇಂಗಾಲದ ಹೆಜ್ಜೆಗುರುತನ್ನೂ (carbon footprints) ಹೀಗೇ ಅಳೆಯಲಾಗುತ್ತದೆ. ಇದು ಜೀವರಾಶಿಯ ಮೇಲೆ ನಮ್ಮ ಕ್ರಿಯೆಗಳ ವಿಶಾಲವಾದ ಪರಿಸರ ಪರಿಣಾಮಗಳನ್ನು ಪರಿಗಣಿಸುತ್ತದೆ.

ಇಡ್ಲಿ ಹೇಗೆ ಹಾನಿಕರ?

ಕೃಷಿಯಿಂದ ಪರಿಸರದ ಮೇಲಿನ ದುಷ್ಪರಿಣಾಮವು ಇದರ ಹಿನ್ನೆಲೆಯಲ್ಲಿದೆ. ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಬಳಸಲಾಗುವ ಭೂಮಿ ಸಾಮಾನ್ಯವಾಗಿ ಐತಿಹಾಸಿಕವಾಗಿ ಜೀವವೈವಿಧ್ಯ ಪ್ರದೇಶಗಳನ್ನುಅತಿಕ್ರಮಿಸಿದೆ. ಇದಕ್ಕಾಗಿ ಮಾಡಲಾದ ಭೂ ಪರಿವರ್ತನೆಗಳು ಹೆಚ್ಚಿನ ಹೆಜ್ಜೆ ಗುರುತನ್ನು ಮೂಡಿಸಿವೆ. ಭಾರತವು ಕಡಲೆ ಮತ್ತು ಕಿಡ್ನಿ ಬೀನ್ಸ್‌ನಂತಹ ದ್ವಿದಳ ಧಾನ್ಯಗಳ ಪ್ರಮುಖ ಉತ್ಪಾದಕ. ಜೈವಿಕ ವೈವಿಧ್ಯತೆಯ ಸಮಾವೇಶದ ಪ್ರಕಾರ, ಪ್ರಪಂಚದ ಒಟ್ಟಾರೆ ದ್ವಿದಳ ಧಾನ್ಯದ ಅಂದಾಜು 7-8%ರಷ್ಟನ್ನು ಬೆಳೆಯುತ್ತದೆ.

ಆಶ್ಚರ್ಯಕರ ಸಂಗತಿ ಎಂದರೆ, ಈ ಅಧ್ಯಯನದಲ್ಲಿ ʼಫ್ರೆಂಚ್ ಫ್ರೈʼ ಕಡಿಮೆ ಜೀವವೈವಿಧ್ಯದ ಹೆಜ್ಜೆಗುರುತನ್ನು ಹೊಂದಿದೆಯಂತೆ! ಇದರ ನಂತರ ಬ್ಯಾಗೆಟ್‌ಗಳು, ಟೊಮೆಟೊ ಸಾಸ್ ಮತ್ತು ಪಾಪ್‌ಕಾರ್ನ್ ಇವೆ. ಭಾರತೀಯ ಸನ್ನಿವೇಶದಲ್ಲಿ ಆಲೂ ಪರೋಟಾ 96ನೇ, ದೋಸೆ 103ನೇ ಮತ್ತು ಬೋಂಡಾಗಳು 109ನೇ ಸ್ಥಾನದಲ್ಲಿವೆ.

ಇದನ್ನೂ ಓದಿ: Trekking Restriction: ಚಾರಣಪ್ರಿಯರಿಗೆ ಶಾಕ್‌; ಆನ್‌ಲೈನ್‌ ಬುಕಿಂಗ್‌ ಇಲ್ಲದ ಜಾಗಗಳಿಗೆ ಪ್ರವೇಶವಿಲ್ಲ

Exit mobile version