Site icon Vistara News

Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!

Zomato Pure Veg swiggy

ಹೊಸದಿಲ್ಲಿ: ಜನಪ್ರಿಯ ಆಹಾರ ವಿತರಣಾ ಸಂಸ್ಥೆಯಾದ ಜೊಮ್ಯಾಟೋದ ʼಜೊಮ್ಯಾಟೋ ಪ್ಯೂರ್‌ ವೆಜ್‌ ಫುಡ್‌ ಫ್ಲೀಟ್‌ʼ (Zomato Pure Veg Fleet) ಅನ್ನು ಪರಿಚಯಿಸುವ ನಿರ್ಧಾರವನ್ನು ಅಪಹಾಸ್ಯ ಮಾಡುವ ಜಾಹೀರಾತಿನ ಪೋಸ್ಟರ್‌ ಒಂದು (Advertisement poster) ನಿನ್ನೆಯಿಂದ ಸೋಶಿಯಲ್‌ ಮೀಡಿಯಾಗಳಲ್ಲಿ (Social media) ಹರಿದಾಡುತ್ತಿದೆ. ಜೊಮ್ಯಾಟೋದ ಪ್ರತಿಸ್ಪರ್ಧಿ ಸಂಸ್ಥೆ ಸ್ವಿಗ್ಗಿ (Swiggy) ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು “ಆ ಜಾಹೀರಾತು ಮಾಲೀಕ ನಾನಲ್ಲ” ಎಂದಿದೆ.

ʼಸಸ್ಯಾಹಾರಿ ಮಾತ್ರʼ ಫ್ಲೀಟ್ ಅನ್ನು ಪರಿಚಯಿಸುವ Zomato ನಿರ್ಧಾರವನ್ನು ಅಪಹಾಸ್ಯ ಮಾಡುವ ವೈರಲ್ ಪೋಸ್ಟರ್ ಕುರಿತ ಗೊಂದಲವನ್ನು ಪರಿಹರಿಸಲು ಸ್ವಿಗ್ಗಿ ಪ್ರಕಟಣೆ ನೀಡಿದೆ. ಯಾಕೆಂದರೆ, ಇದರಲ್ಲಿ ಸ್ವಿಗ್ಗಿಯ ಹೆಸರು- ಲೋಗೋವನ್ನೂ ಸೇರಿಸಲಾಗಿದ್ದು, ಸ್ವಿಗ್ಗಯದೇ ಎಂಬರ್ಥ ಬರುವಂತಿದೆ.

“ಸ್ವಿಗ್ಗಿ ಹೆಸರಿನಲ್ಲಿ ಓಡಾಡುತ್ತಿರುವ ಪೋಸ್ಟ್ ಅನ್ನು ನಾವು ಅಥವಾ ಸ್ವಿಗ್ಗಿಯೊಂದಿಗೆ ಸಂಬಂಧ ಹೊಂದಿರುವ ಯಾರೂ ರಚಿಸಿಲ್ಲ. ದಯವಿಟ್ಟು ಅದನ್ನು ಚಲಾವಣೆ ಮಾಡುವುದನ್ನು ಅಥವಾ ಸ್ವಿಗ್ಗಿಗೆ ಆರೋಪ ಮಾಡುವುದನ್ನು ತಡೆಯಿರಿ” ಎಂದು ಸ್ವಿಗ್ಗಿ ಕಂಪನಿಯ ಪ್ರಕಟಣೆ ತಿಳಿಸಿದೆ.

ಇದೀಗ ವೈರಲ್‌ ಆಗಿರುವ ಈ ʼನಕಲಿ ಜಾಹೀರಾತʼನ್ನು ಟೆಕ್ ಕಂಪನಿ ಸ್ನೋ ಮೌಂಟೇನ್ AIನ ಸಹ-ಸಂಸ್ಥಾಪಕ ಮತ್ತು CTO ನಿಲೇಶ್ ತ್ರಿವೇದಿ ಮಾಡಿದ್ದಾರೆ. ತ್ರಿವೇದಿ ಇದನ್ನು Xನಲ್ಲಿ ಮಾರ್ಚ್ 20ರಂದು ಹಂಚಿಕೊಂಡಿದ್ದರು. ಅದಕ್ಕೆ “ಹೊಸ ಸ್ವಿಗ್ಗಿ ಜಾಹೀರಾತು ತುಂಬಾ ಹಿಟ್ ಆಗಿದೆ. /s” ಎಂದು ಶೀರ್ಷಿಕೆ ನೀಡಿದ್ದರು. ಸಾಮಾನ್ಯವಾಗಿ ‘/s’ ಪೋಸ್ಟ್ ವಿಡಂಬನೆ, ವ್ಯಂಗ್ಯ ಎಂಬುದನ್ನು ಸೂಚಿಸುತ್ತದೆ. ಆದರೆ ತುಂಬಾ ಜನ ಅದನ್ನು Swiggyಯ ನಿಜವಾದ ಪೋಸ್ಟ್ ಎಂದು ಭಾವಿಸಿದ್ದಾರೆ.

ವೈರಲ್‌ ಆಗಿರುವ ಪೋಸ್ಟರ್‌ ಸ್ವಿಗ್ಗಿಯ ಲೋಗೋವನ್ನು ಹೊಂದಿದೆ. ಕೆಳಗಿರುವ ಡಿಜಿಟಲ್‌ ಚಿತ್ರದಲ್ಲಿ, ಕೇಸರಿ ಬಣ್ಣದ ಅಂಗಿ ಡೆಲಿವರಿ ಬಾಯ್‌ ಆಹಾರದ ಪಾರ್ಸೆಲ್‌ ಅನ್ನು ಹಿರಿಯ ವ್ಯಕ್ತಿಯೊಬ್ಬರಿಗೆ ನೀಡುತ್ತಿದ್ದಾನೆ. ಹಿನ್ನೆಲೆಯಲ್ಲಿ ಕೆಲವು ಜನರು ಹಸಿರು ಅಂಗಿ ಧರಿಸಿದ ಬೇರೊಬ್ಬ ಡೆಲಿವರಿ ಬಾಯ್‌ ಅನ್ನು ದೊಣ್ಣೆಗಳಿಂದ ಬಡಿದಟ್ಟುತ್ತಿದ್ದಾರೆ. “ಪ್ರತ್ಯೇಕತೆಯಿಂದ ಮುಕ್ತವಾದ ಆಹಾರ ವಿತರಣೆ. ನಿಮ್ಮ ಆಹಾರದ ಆದ್ಯತೆಗಳನ್ನು ಖಾಸಗಿಯಾಗಿ ಇರಿಸಲಾಗುತ್ತದೆ. ನಮ್ಮ ಡೆಲಿವರಿ ಫ್ಲೀಟ್ ನಿಮ್ಮ ಖಾಸಗಿ ಅಭ್ಯಾಸಗಳನ್ನು ಜಗತ್ತಿಗೆ ಸೋರಿಕೆ ಮಾಡುವುದಿಲ್ಲ. ಸಂಭವನೀಯ ಗುಂಪು ಹಲ್ಲೆಗಳ ವಿರುದ್ಧ ನಮ್ಮ ಡೆಲಿವರಿ ಸಿಬ್ಬಂದಿಯ ಜೀವ ವಿಮೆಗಾಗಿ ನಾವು ಹಣ ಪಾವತಿಸಬೇಕಾಗಿಲ್ಲವಾದುದರಿಂದ ನೀವು ಸ್ವಲ್ಪ ಹಣವನ್ನು ಉಳಿಸುತ್ತೀರಿ” ಎಂದು ಈ ಪೋಸ್ಟರ್‌ನಲ್ಲಿ ಬರೆದಿದೆ.

ಈ ಪೋಸ್ಟ್ 8,000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಇದು ವೈರಲ್‌ ಆದ ನಂತರ ತ್ರಿವೇದಿ ಅವರು ಸ್ಪಷ್ಟನೆ ನೀಡಿದ್ದಾರೆ. “ನಾನು ಹಂಚಿಕೊಂಡದ್ದು ವಿಡಂಬನೆ. ಅದು ಸ್ವಿಗ್ಗಿಯ ಜಾಹೀರಾತಲ್ಲ. ತುಂಬಾ ಮಂದಿ ಅದನ್ನು ತಪ್ಪು ತಿಳಿದಿದ್ದಾರೆ, ಇದು ನನ್ನ ತಪ್ಪು” ಎಂದಿದ್ದಾರೆ.

ಜೊಮ್ಯಾಟೋ ಮೊನ್ನೆ ತಾನು ಶೀಘ್ರದಲ್ಲೇ ಪ್ರಾರಂಭಿಸಲಿರುವ “ಶುದ್ಧ ವೆಜ್ ಫ್ಲೀಟ್”ನೊಂದಿಗೆ ಶುದ್ಧ- ಶಾಕಾಹಾರಿ ರೆಸ್ಟೋರೆಂಟ್‌ಗಳಿಂದ ಆಹಾರ ಬಯಸುವ ಸಸ್ಯಾಹಾರಿಗಳಿಗೆ ವಿಶೇಷವಾಗಿ ಪೂರೈಸುವುದಾಗಿ ಘೋಷಿಸಿದ ನಂತರ ಸೋಶಿಯಲ್‌ ಮೀಡಿಯಾ ಈ ಬಗ್ಗೆ ಸಕ್ರಿಯವಾಗಿದೆ. ಈ ಫ್ಲೀಟ್‌ನಲ್ಲಿ ಕೆಲಸ ಮಾಡುವ ಸವಾರರು ಜೊಮ್ಯಾಟೊದ ಸಾಮಾನ್ಯ ಕೆಂಪು ಬಣ್ಣದ ಸಮವಸ್ತ್ರದ ಬದಲಿಗೆ ಹಸಿರು ಸಮವಸ್ತ್ರವನ್ನು ಧರಿಸುತ್ತಾರೆ ಎಂದಿತ್ತು. ಆದರೆ ಇದು, ಜೊಮ್ಯಾಟೊ ಕೆಲಸಗಾರರ ಹಾಗೂ ಬಳಕೆದಾರರ ವಿರುದ್ಧ ಜನರ ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಹಲವರು ಟೀಕಿಸಿದ್ದರು. ಇದರ ಬಳಿಕ Zomato ಸಿಇಒ ದೀಪಿಂದರ್ ಗೋಯಲ್ ಅವರು ತಮ್ಮ ನಿರ್ಧಾರದಲ್ಲಿ ಕೊಂಚ ಬದಲಾವಣೆ ಮಾಡಿದ್ದು, ಹಸಿರು ಸಮವಸ್ತ್ರದ ಐಡಿಯಾವನ್ನು ಬಿಟ್ಟುಕೊಟ್ಟಿದ್ದರು. ಎಲ್ಲರೂ ಕೆಂಪು ಸಮವಸ್ತ್ರದಲ್ಲೇ ಇರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Zomato Pure Veg: ಜೊಮ್ಯಾಟೋ ಪ್ಯೂರ್‌ ವೆಜ್‌ ಫು‌ಡ್; ಸೋಶಿಯಲ್‌ ಮೀಡಿಯಾದಲ್ಲಿ ಬಿತ್ತು ಬೆಂಕಿ! ಅಳುಕಿದ ಸಂಸ್ಥೆ

Exit mobile version