ಕರ್ನಾಟಕ ವಿಧಾನಸಭೆಗೆ ಈ ಬಾರಿ ಆಯ್ಕೆಯಾಗಿರುವ 224 ಶಾಸಕರಲ್ಲಿ 217 ಮಂದಿ ಕೋಟ್ಯಧೀಶರು ಎಂಬುದು ಗಮನಾರ್ಹ. ಇವರಲ್ಲಿ 132 ಮಂದಿ ಕಾಂಗ್ರೆಸ್ ಪಕ್ಷದವರಾಗಿದ್ದರೆ, 63 ಮಂದಿ ಬಿಜೆಪಿಗೆ ಸೇರಿದವರಾಗಿದ್ದಾರೆ. ಗೆದ್ದವರ ಪೈಕಿ ಡಿ.ಕೆ ಶಿವಕುಮಾರ್ ಅತಿ ಶ್ರೀಮಂತ ಶಾಸಕರಾಗಿದ್ದಾರೆ. ಇವರ ಆಸ್ತಿ 1,413 ಕೋಟಿ ರೂ! ಈ ಬಾರಿ ಆಯ್ಕೆ ಆದ ಶಾಸಕರಲ್ಲಿ ಕೇವಲ 7 ಮಂದಿ ಮಾತ್ರ ಕೋಟ್ಯಧೀಶರಲ್ಲ ಎಂಬ ಮಾಹಿತಿ, ಈಗಿನ ರಾಜಕಾರಣ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ತಾವು ಬಡವರಿಗಾಗಿ ದುಡಿಯುವ ಉದ್ದೇಶದಿಂದ ರಾಜಕಾರಣಕ್ಕೆ ಬಂದಿದ್ದೇವೆ, ದೀನದಲಿತರ ಆಶೋತ್ತರಗಳನ್ನು ಈಡೇರಿಸಲು ತಮಗೆ ಅಧಿಕಾರ ರಾಜಕಾರಣ ಬೇಕಾಗಿದೆ ಎಂದು ಇವರಲ್ಲಿ ಹೆಚ್ಚಿನವರು ಹೇಳಿಕೊಳ್ಳುತ್ತಾರೆ. ತಮ್ಮ ಈ ಮಾತುಗಳ ಬಂಡವಾಳದಿಂದಲೇ ಗೆದ್ದೂ ಬರುತ್ತಾರೆ. ಇವರಿಗೆ ಮತ ಹಾಕಿದವರು ಇದ್ದಲ್ಲೇ ಇರುತ್ತಾರೆ; ಇವರು ಮಾತ್ರ ವರ್ಷದಿಂದ ವರ್ಷಕ್ಕೆ ಶ್ರೀಮಂತರಾಗುತ್ತ ಹೋಗುತ್ತಾರೆ. ಇದಕ್ಕೆ ದಾಖಲೆಗಳೂ ಇವೆ. ಇಂದಿನ ಮತ್ತು ಹಿಂದಿನ ಸರಾಸರಿ ಆಸ್ತಿಯ ಲೆಕ್ಕಾಚಾರ ಗಮನಿಸಿದರೆ ಇದು ಅರ್ಥವಾಗುತ್ತದೆ.
ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸರಾಸರಿ ಆಸ್ತಿ 64.39 ಕೋಟಿ ರೂಪಾಯಿ. 2018ರಲ್ಲಿ ಈ ಸರಾಸರಿ 34.59 ಕೋಟಿ ರೂ. ಆಗಿತ್ತು. ಈ ಬಾರಿಯ ಕಾಂಗ್ರೆಸ್ ಶಾಸಕರ ಸರಾಸರಿ ಆಸ್ತಿ 67.13 ಕೋಟಿ ರೂ. ಆಗಿದ್ದರೆ, ಬಿಜೆಪಿ ಶಾಸಕರ ಸರಾಸರಿ ಆಸ್ತಿ 44.36 ಕೋಟಿ ರೂ. ಜೆಡಿಎಸ್ ಶಾಸಕರ ಸರಾಸರಿ ಆಸ್ತಿ 46.01 ಕೋಟಿ ರೂ. ಆಗಿದೆ. ಅಚ್ಚರಿ ಎಂದರೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಆಸ್ತಿ 600 ಕೋಟಿ ರೂ.ಗೂ ಹೆಚ್ಚಿರುವ ಬಗ್ಗೆ ಘೋಷಿಸಿಕೊಂಡಿದ್ದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಅವರ ಆಸ್ತಿ 246.51 ಕೋಟಿ ರೂ. ಆಗಿದ್ದರೆ, ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರ ಆಸ್ತಿ 1,156 ಕೋಟಿ ರೂ. ಆಗಿರುವುದು ಗಮನಾರ್ಹ.
ಈ ಪ್ರಮಾಣದ ಆಸ್ತಿ ಹೆಚ್ಚಳವಾಗಿರುವುದಕ್ಕೆ ಅವರಲ್ಲಿ
ಸಕಾರಣಗಳು ಇರಬಹುದು; ಲೆಕ್ಕವನ್ನೂ ತೋರಿಸಬಹುದು. ಆದರೆ ವಿಧಾನಸಭೆಯಲ್ಲಾಗಲೀ, ವಿಧಾನ ಪರಿಷತ್ತಿನಲ್ಲಾಗಲೀ ಕೋಟ್ಯಧೀಶರಲ್ಲದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದಾರಲ್ಲ ಎಂಬ ಸಾಮಾಜಿಕ ನ್ಯಾಯದ ಪ್ರಶ್ನೆಗೆ ಸರಿಯಾದ ಉತ್ತರ ಇರಲಾರದು. ಸಮಾಜದ ಕಟ್ಟ ಕಡೆಯ ಮನುಷ್ಯನೂ ಪ್ರಾತಿನಿಧ್ಯ ಪಡೆಯಬೇಕು ಎಂಬುದು ಪ್ರಜಾಪ್ರಭುತ್ವದ, ಸಂವಿಧಾನದ ಆಶಯ. ಆದರೆ ಅದು ಈಡೇರುತ್ತಿಲ್ಲ ಎಂಬುದಕ್ಕೆ ಮೇಲಿನ ಅಂಕಿಅಂಶಗಳೇ ಸಾಕ್ಷಿ. ಸರಳತೆಗೇ ಹೆಸರಾದ ಹಲವು ಅಭ್ಯರ್ಥಿಗಳು ಸ್ವತಂತ್ರವಾಗಿಯೂ ಚುನಾವಣೆಗೆ ನಿಂತಿದ್ದಾರೆ, ಇಲ್ಲವೆಂದಲ್ಲ. ಆದರೆ ಅಂಥವರನ್ನು ಮತದಾರ ಯಾಕೆ ಆರಿಸಿಲ್ಲ ಎಂಬುದಕ್ಕೆ ಮತದಾರನ ಬಳಿಯೂ ಉತ್ತರ ಇರಲಾರದು.
ಈ ಬಾರಿಯ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು 20ರಿಂದ 100 ಕೋಟಿ ರೂಪಾಯಿಯವರೆಗೂ ಖರ್ಚು ಮಾಡಿದ್ದಾರೆ. ವಿಧಾನಸಭೆ ಅಭ್ಯರ್ಥಿ ಮಾಡಬಹುದಾದ ಖರ್ಚುವೆಚ್ಚ 70 ಲಕ್ಷವನ್ನು ಮೀರಬಾರದು ಎಂದು ಚುನಾವಣಾ ಆಯೋಗ ನಿಯಮ ಮಾಡಿದೆ. ಆದರೆ ಅದು ಲೆಕ್ಕಕ್ಕೇ ಇಲ್ಲದಂತಾಗಿದೆ. ಹಣ ಖರ್ಚು ಮಾಡಿ ಗೆಲ್ಲಲು ಬಯಸುವವರು ಹಣ ಮಾಡಲೆಂದೇ ಬರುವವರು; ಮತ್ತು ಇದರ ವಿಲೋಮ ಸಂಗತಿ, ಅಂದರೆ ಕುಬೇರರು ಚುನಾವಣೆಯಲ್ಲಿ ಹಣ ಚೆಲ್ಲಿ ಮತದಾರರ ದಿಕ್ಕೆಡಿಸುತ್ತಾರೆ ಎಂಬುದು ಕೂಡ ಸತ್ಯ. ಇವೆರಡೂ ಪ್ರಜಾಪ್ರಭುತ್ವದ ಚೈತನ್ಯಕ್ಕೆ ಮಾರಕ.
ಇದನ್ನೂ ಓದಿ: Crorepati Chief Ministers: ದೇಶದ 30 ಸಿಎಂಗಳಲ್ಲಿ ದೀದಿ ಬಿಟ್ಟು 29 ಜನ ಕೋಟ್ಯಧೀಶರು, ಶ್ರೀಮಂತ ಸಿಎಂ ಯಾರು?
18ನೇ ಶತಮಾನದ ಅಂತ್ಯದ ವೇಳೆಗೆ ಫ್ರಾನ್ಸ್‌ನಲ್ಲಿ ಒಂದು ಕ್ರಾಂತಿ ನಡೆಯಿತು. ಶ್ರೀಮಂತರಿಂದ ತುಂಬಿಹೋಗಿದ್ದ, ಬಡವರಿಗೆ ಯಾವ ಪ್ರಾತಿನಿಧ್ಯವೂ ಇಲ್ಲದೆ ಹೋದ ಆಳುವ ವರ್ಗದ ವಿರುದ್ಧ ಈ ಕ್ರಾಂತಿ ನಡೆದಿತ್ತು. ವಿಲಾಸಿ ಶಾಸನಸಭೆಗಳ ಶ್ರೀಸಾಮಾನ್ಯನ ಆಶೋತ್ತರಗಳನ್ನು ಪ್ರತಿನಿಧಿಸಲಾರವು. ಮತ್ತು ಅದಕ್ಕೆ ಪ್ರತಿರೋಧವೂ ಅನಾಹುತಕಾರಿಯಾಗಿರುತ್ತದೆ. ಹೀಗೆ ಹಣದ ಬಲ ಇದ್ದವರು ಮಾತ್ರ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬಹುದು ಎಂಬ ವಾತಾವರಣ ನಿರ್ಮಾಣ ಆಗಿರುವುದು ಬೇಸರದ ಸಂಗತಿ. ಮತದಾರರು ಜಾಗೃತರಾದರೆ ಮಾತ್ರ ಈ ವಾತಾವರಣ ಬದಲಾಗಲು ಸಾಧ್ಯ, ಜನಸಾಮಾನ್ಯರೂ ಚುನಾವಣೆಗೆ ನಿಂತು ಗೆಲ್ಲಲು ಸಾಧ್ಯ. ಪಕ್ಷಗಳು ಕೂಡ ಈ ವಿಚಾರದಲ್ಲಿ ದಿಟ್ಟತೆ, ತಾತ್ವಿಕ ಬದ್ಧತೆ ಪ್ರದರ್ಶಿಸಬೇಕು.