ಇಸ್ಲಾಮಾಬಾದ್: ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ಆತ್ಮಾಹುತಿ ಬಾಂಬರ್ (Pakistan Terrorist) ನಡೆಸಿದ ದಾಳಿಯಲ್ಲಿ ಐವರು ಚೀನೀ ಪ್ರಜೆಗಳು (Chinese Citizen ) ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಂದ ಹಾಗೆ ಚೀನಾವು ಪಾಕಿಸ್ತಾನಕ್ಕೆ ನೇರವಾಗಿ ಹಾಗೂ ಭಾರತ ವಿರುದ್ಧ ಸಂಚು ಮಾಡಲು ಪರೋಕ್ಷವಾಗಿ ನೆರವು ನೀಡುತ್ತದೆ. ಆದರೆ, ಪಾಕಿಸ್ತಾನದ ಉಗ್ರರು ತಮ್ಮ ಕೃತ್ಯಗಳಿಗೆ ನೆರವು ನೀಡುವ ಚೀನಿ ಪ್ರಜೆಗಳನ್ನೇ ಕೊಂದಿದ್ದಾರೆ.
ಇಸ್ಲಾಮಾಬಾದ್ನಲ್ಲಿ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ದಾಸು ಶಿಬಿರಕ್ಕೆ ಪ್ರಯಾಣಿಸುತ್ತಿದ್ದ ಚೀನಾದ ಎಂಜಿನಿಯರ್ಗಳ ಬೆಂಗಾವಲು ವಾಹನಕ್ಕೆ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದಾನೆ ಎಂದು ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಅಲಿ ಗಂಡಾಪುರ್ ಹೇಳಿದ್ದಾರೆ.
ಈ ದಾಳಿಯಲ್ಲಿ ಐವರು ಚೀನೀ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕ ಮೃತಪಟ್ಟಿದ್ದಾನೆ ಎಂದು ಗಂಡಾಪುರ್ ಹೇಳಿದ್ದಾರೆ. ಮಂಗಳವಾರದ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಈ ಘಟನೆಯು ಆತ್ಮಾಹುತಿ ಸ್ಫೋಟವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಬಿಶಮ್ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಬಖ್ತ್ ಜಹೀರ್ ಹೇಳಿದ್ದಾರೆ ಎಂದು ಅಲ್ಲಿನ ಪತ್ರಿಕೆ ಡಾನ್ ವರದಿ ಮಾಡಿದೆ.
ಒಂದು ವಾರದಲ್ಲಿ ಪಾಕಿಸ್ತಾನದಲ್ಲಿ ಚೀನಾದ ಹಿತಾಸಕ್ತಿಗಳ ಮೇಲೆ ನಡೆದ ಮೂರನೇ ಪ್ರಮುಖ ದಾಳಿ ಇದಾಗಿದೆ. ಮೊದಲ ಎರಡು ದಾಳಿಗಳು ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದ ವಾಯುನೆಲೆ ಮತ್ತು ಆಯಕಟ್ಟಿನ ಬಂದರಿನಲ್ಲಿ ನಡೆದಿದ್ದವು. ಅಲ್ಲಿ ಚೀನಾ ಮೂಲಸೌಕರ್ಯ ಯೋಜನೆಗಳಲ್ಲಿ ಶತಕೋಟಿ ಹೂಡಿಕೆ ಮಾಡುತ್ತಿದೆ.
ಪಶ್ಚಿಮ ಪ್ರಾಂತ್ಯದ ಖೈಬರ್-ಪಖ್ತುಂಕ್ವಾದಲ್ಲಿ ರಸ್ತೆ ನಿರ್ಮಾಣ ಯೋಜನೆಯ ಭಾಗವಾಗಿ ಚೀನಾದ ಎಂಜಿನಿಯರ್ಗಳು ಮತ್ತು ಪಾಕಿಸ್ತಾನಿ ನಿರ್ಮಾಣ ಕಾರ್ಮಿಕರು ಹಲವಾರು ವರ್ಷಗಳಿಂದ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹತ್ವದ ಅಣೆಕಟ್ಟು ಯೋಜನೆಗೆ ನೆಲೆಯಾಗಿರುವ ದಾಸು ಈ ಹಿಂದೆಯೂ ದಾಳಿಗೆ ಗುರಿಯಾಗಿದ್ದವು.
ಇದನ್ನೂ ಓದಿ: Balochistan blast: ಬಲೂಚಿಸ್ತಾನದ ಮಸೀದಿ ಬಳಿ ಆತ್ಮಹತ್ಯಾ ಸ್ಫೋಟ, ಕನಿಷ್ಠ 52 ಸಾವು
2021 ರಲ್ಲಿ, ದಾಸುವಿನಲ್ಲಿ ನಡೆದ ದಾಳಿಯಲ್ಲಿ ಒಂಬತ್ತು ಚೀನೀ ಪ್ರಜೆಗಳು ಮತ್ತು ಇಬ್ಬರು ಪಾಕಿಸ್ತಾನಿ ಮಕ್ಕಳು ಸಾವನ್ನಪ್ಪಿದ್ದರು. ದಾಸು ಜಲವಿದ್ಯುತ್ ಯೋಜನೆಯ ಸ್ಥಳಕ್ಕೆ ಚೀನಾದ ಎಂಜಿನಿಯರ್ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಈ ಘಟನೆ ನಡೆದಿತ್ತು.
ಆರಂಭದಲ್ಲಿ, ದಾಳಿಯ ಸ್ವರೂಪದ ಬಗ್ಗೆ ಗೊಂದಲವಿತ್ತು. ಕೆಲವು ವರದಿಗಳು ಇದು ಬಸ್ ಅಪಘಾತ ಎಂದು ಹೇಳಿದ್ದವು ನಂತರದ ತನಿಖೆಯು ಇದು ನಿಜವಾಗಿಯೂ ಭಯೋತ್ಪಾದಕ ದಾಳಿ ಎಂಬುದನ್ನು ಬಹಿರಂಗಪಡಿಸಿತು. ಸ್ಫೋಟದಿಂದ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ.