Site icon Vistara News

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

kannada sign boards

ಬೆಂಗಳೂರು: ಅಂಗಡಿ ಮಳಿಗೆಗಳು ಹಾಗೂ ಉದ್ಯಮಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ (60% kannada sign boards) ಅಳವಡಿಸಲು ಇಂದು ಕೊನೆಯ ದಿನವಾಗಿದ್ದು, ಕನ್ನಡ ನಾಮಫಲಕ ಜಾರಿ ಮಾಡಲು ವಿಫಲರಾದ ಮಳಿಗೆಗಳ ಮೇಲೆ ಬಿಬಿಎಂಪಿ (BBMP) ಕಠಿಣ ಕ್ರಮ ಕೈಗೊಳ್ಳಲಿದೆ.

ಇಂದಿನಿಂದ ಕನ್ನಡ ಕಡ್ಡಾಯದ (kannada mandatory) ಅಸ್ತ್ರವನ್ನು ಬಿಬಿಎಂಪಿ ಬಳಸಲಿದ್ದು, ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇಲ್ಲದ ಉದ್ದಿಮೆಗಳಿಗೆ ಬೀಗ ಹಾಕಲಿದೆ. ಅಂಥ ಅಂಗಡಿ, ಉದ್ದಿಮೆಗಳ ಟ್ರೇಡ್ ಲೈಸನ್ಸ್ (trade license) ಕೂಡ ರದ್ದು ಮಾಡಲು ನಿರ್ದೇಶನ ನೀಡಲಾಗಿದ್ದು, ತಪಾಸಣೆಗಾಗಿ ಬಿಬಿಎಂಪಿಯ ಎಲ್ಲಾ ಅಧಿಕಾರಿಗಳಿಗೂ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.

ಅನುಷ್ಠಾನದ ಅಂಕಿ ಅಂಶ

ಕನ್ನಡ ಅನುಷ್ಠಾನ ಮಾಡದ ಸುಮಾರು 3 ಸಾವಿರ ಅಂಗಡಿ ಮಾಲೀಕರಿಗೆ ಈ ಮೂಲಕ ಬಿಬಿಎಂಪಿ ಬಿಸಿ ಮುಟ್ಟಿಸಲಿದೆ. ಕನ್ನಡ ನಾಮಫಲಕ ಅನುಷ್ಠಾನದ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ. ನಗರದಲ್ಲಿ ಒಟ್ಟು ನಾಮಫಲಕ ಉಲ್ಲಂಘನೆಗಳನ್ನು ಮಾಡಿದ ಉದ್ದಿಮೆಗಳ ಸಂಖ್ಯೆ 55,178 ಆಗಿದ್ದು, ಶೇ.60ರಷ್ಟು ಕನ್ನಡ ಅನುಷ್ಠಾನ ಮಾಡಿರುವ ಉದ್ದಿಮೆಗಳ ಸಂಖ್ಯೆ 52,134. ಸ್ವಲ್ಪವೂ ಅನುಷ್ಠಾನ ಮಾಡದೆ ಬಾಕಿ ಇರುವ ಉದ್ದಿಮೆಗಳು 3,044. ಬಿಬಿಎಂಪಿ ಆದೇಶವನ್ನು ಪೂರ್ಣವಾಗಿ ಉಲ್ಲಂಘನೆ ಮಾಡಿದ 3 ಸಾವಿರ ಉದ್ದಿಮೆಗಳ ಲೈಸನ್ಸ್ ರದ್ದು ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಎಲ್ಲೆಲ್ಲಿ ಕನ್ನಡ ?

ಈ ಬಗ್ಗೆ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದಂತೆ ವಿಶೇಷ ಆಯುಕ್ತರು (ಆರೋಗ್ಯ) ಸುತ್ತೋಲೆ ಹೊರಡಿಸಿದ್ದರು. ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ ಮುಂತಾದವುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಫೆ.2 ಮತ್ತು 12ರಂದು ನಡೆದ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಉದ್ದಿಮೆಗಳ ಮೇಲೆ ಫೆ.28ರೊಳಗೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸುವಂತೆ ಎಲ್ಲಾ ವಾಣಿಜ್ಯದಾರರಿಗೆ ಸೂಚಿಸಲಾಗಿತ್ತು. ನಂತರ ಇದನ್ನು ಒಂದು ದಿನ ವಿಸ್ತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.29ರಿಂದ ಅನ್ವಯವಾಗುವಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳಿಗೆ ಇಲಾಖಾ ವತಿಯಿಂದ ನೀಡಿರುವ ಉದ್ದಿಮೆ ಪರವಾನಗಿಯನ್ನು ಅಮಾನತು ಮಾಡಲು ಹಾಗೂ ಅಂತಹ ವಾಣಿಜ್ಯ ಉದ್ದಿಮೆಗಳಿಗೆ ಬೀಗಮುದ್ರೆ (Sealdown) ಮಾಡಲು ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ನೀಡುವಂತೆ ಕೆಲವು ಅಂತಾರಾಷ್ಟ್ರೀಯ ಕಂಪನಿಗಳು, ಎಸ್‌ಬಿಐ, ಕೆನರಾ ಬ್ಯಾಂಕ್ ಮನವಿ ಮಾಡಿವೆ. ಈ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇವೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳಿಗೆ ಬೀಗ, ಲೈಸೆನ್ಸ್‌ ಅಮಾನತು: ಬಿಬಿಎಂಪಿ ಆದೇಶದಲ್ಲಿ ಏನೇನಿದೆ?

Exit mobile version