Site icon Vistara News

PM Narendra Modi: ಅಬುಧಾಬಿಯಲ್ಲಿ ಇಂದು ಪ್ರಧಾನಿ ʼಅಹ್ಲಾನ್ ಮೋದಿ’ ಕಾರ್ಯಕ್ರಮ; 65,000 ಜನ ನೋಂದಣಿ!

pm narendra modi abu dhabi

ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಅಬುಧಾಬಿಯಲ್ಲಿ (Abu Dhabi) ಭಾಗವಹಿಸಲಿರುವ ʼಅಹ್ಲಾನ್ ಮೋದಿ’ (Ahlan Modi) ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 65,000ಕ್ಕೂ ಹೆಚ್ಚು ನೋಂದಣಿಗಳನ್ನು ಸ್ವೀಕರಿಸಲಾಗಿದೆ.

ಅಬುಧಾಬಿಯ ಝಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 65,000 ಜನರು ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ. ಆದರೆ ನೇರವಾಗಿ ಭಾಗವಹಿಸುವವರ ಸಂಖ್ಯೆಯನ್ನು ಹವಾಮಾನದ ಕಾರಣದಿಂದ ಮಿತಗೊಳಿಸಲು ನಿರ್ಧರಿಸಲಾಗಿದೆ. ʼಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದೇಶದ ವಿವಿಧ ಭಾಗಗಳಿಂದ 150 ಭಾರತೀಯ ಸಮುದಾಯ ಗುಂಪುಗಳು ಇಲ್ಲಿಗೆ ಬರಲಿವೆ. ಸುಮಾರು 700 ಕಲಾವಿದರು ಪ್ರೇಕ್ಷಕರಿಗೆ “ಸಾಂಸ್ಕೃತಿಕ ಸಂಭ್ರಮ” ಪ್ರಸ್ತುತಪಡಿಸಲಿದ್ದಾರೆ ಎಂದು ಅಹ್ಲಾನ್ ಮೋದಿ ತಂಡದ ಸಂವಹನ ನಿರ್ದೇಶಕರಾದ ನಿಶಿ ಸಿಂಗ್ ತಿಳಿಸಿದ್ದಾರೆ. ಈ ಕಾರ್ಯಕ್ರಮ “ವಸುಧೈವ ಕುಟುಂಬಕಂ” ಎಂಬ ಉದಾರ ಆಶಯವನ್ನು ಹೊಂದಿದೆ.

ಇಂಡಿಯನ್ ಪೀಪಲ್ ಫೋರಂನ ಅಧ್ಯಕ್ಷ ಮತ್ತು ʼಅಹ್ಲಾನ್ ಮೋದಿ’ ಉಪಕ್ರಮದ ನಾಯಕ ಜಿತೇಂದ್ರ ವೈದ್ಯ ಅವರು ಕಾರ್ಯಕ್ರಮದ ವಿಶಿಷ್ಟ ಸ್ವರೂಪದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. “ಇದು ಅತ್ಯಂತ ವಿಶಿಷ್ಟ ರೀತಿಯ ಕಾರ್ಯಕ್ರಮ. ಏಕೆಂದರೆ ಈ ಕಾರ್ಯಕ್ರಮವನ್ನು ಯಾವುದೇ ಒಂದು ಸಂಸ್ಥೆ ನಡೆಸುತ್ತಿಲ್ಲ. ಇಡೀ ಸಮುದಾಯ ಇದನ್ನು ಆಯೋಜಿಸುತ್ತಿದೆ. ಪ್ರಧಾನಿ ಮೋದಿಯವರ ಹೆಸರು ಬಂದಾಗ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದು ಪ್ರಧಾನಿ ಮೋದಿಯವರ ಮೇಲಿನ ಪ್ರೀತಿ” ಎಂದು ಜಿತೇಂದ್ರ ವೈದ್ಯ ಹೇಳಿದ್ದಾರೆ.

ಅಬುಧಾಬಿಯಲ್ಲಿ ಭಾರತೀಯ ಸಮುದಾಯ ಆಯೋಜಿಸಿರುವ ಈ ಇವೆಂಟ್ ಗಮನ ಸೆಳೆಯುವಂತಿದ್ದು, ಪ್ರಧಾನಿ ಮೋದಿಯವರಿಗೆ ವಿದೇಶದಲ್ಲಿ ಹಾಗೂ ಎನ್ನಾರೈ ಸಮುದಾಯದ ವ್ಯಾಪಕ ಮೆಚ್ಚುಗೆ ಮತ್ತು ಬೆಂಬಲವನ್ನು ಪ್ರದರ್ಶಿಸಲಿದೆ. “ಇವೆಂಟ್‌ನ ನೋಂದಣಿ 65,000 ದಾಟಿದೆ ಮತ್ತು ಅದನ್ನು ಫೆಬ್ರವರಿ 2ರಂದು ಕೊನೆಗೊಳಿಸಲಾಯಿತು” ಎಂದು ಜಿತೇಂದ್ರ ವೈದ್ಯ ಹೇಳಿದ್ದಾರೆ.

ಅಬುಧಾಬಿಯಲ್ಲಿ ಲಕ್ಷಾಂತರ ಭಾರತೀಯರಿದ್ದಾರೆ. ಸರಿಸುಮಾರು 35 ಲಕ್ಷ ಭಾರತೀಯ ವಲಸಿಗ ಸಮುದಾಯ ಇಲ್ಲಿದ್ದು, ಯುಎಇಯಲ್ಲಿರುವ ಅತಿದೊಡ್ಡ ವಲಸಿಗ ಸಮುದಾಯವಾಗಿದೆ. ಇದು ದೇಶದ ಜನಸಂಖ್ಯೆಯ ಸರಿಸುಮಾರು 35 ಪ್ರತಿಶತವನ್ನು ಹೊಂದಿದೆ.

ಇವೆಂಟ್‌ನ ಪ್ರಮುಖ ಅಂಶ ಎಂದರೆ 700ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾವಿದರಿಂದ ಕಲಾ ಪ್ರದರ್ಶನ. ಇದರಲ್ಲಿ ಭಾರತೀಯ ಕಲೆಗಳ ವಿಶಾಲ ವೈವಿಧ್ಯತೆಯನ್ನು ತೋರಿಸಲಾಗುತ್ತಿದೆ. ಇವೆಂಟ್‌ನಲ್ಲಿ 150ಕ್ಕೂ ಹೆಚ್ಚು ಭಾರತೀಯ ಸಮುದಾಯ ಗುಂಪುಗಳ ಸಕ್ರಿಯ ಭಾಗವಹಿಸುವಿಕೆ ಇದೆ. ಭಾರತದ ಪ್ರಾದೇಶಿಕ ವೈವಿಧ್ಯತೆ, ಭಾರತದಿಂದ ಬಂದು ನೆಲೆಸಿದ ನೀಲಿ ಕಾಲರ್‌ ಉದ್ಯೋಗಿಗಳ ಏಕೀಕರಣವನ್ನು ಪ್ರದರ್ಶಿಸಲಿದೆ.

ಭಾರತೀಯ ಸಮುದಾಯದ ʼನಾರಿ ಶಕ್ತಿ’ ಕೂಡ ಇದಕ್ಕೆ ಅಗಾಧ ಬೆಂಬಲ ಮತ್ತು ಉತ್ಸಾಹವನ್ನು ತೋರಿಸಿದೆ. ಮಹಿಳೆಯರು ಗಮನಾರ್ಹ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಕಾರ್ಯಕ್ರಮಕ್ಕೆ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಮಹಿಳಾ ಸಬಲೀಕರಣ, ಕೋಮು ಸೌಹಾರ್ದತೆ ಮತ್ತು ಭಾಗವಹಿಸುವಿಕೆಯ ಮನೋಭಾವವನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಸಂಘಟನಾ ಸಮಿತಿ ತಿಳಿಸಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಅವರ ‘ವಿಕಸಿತ ಭಾರತ’ ದೃಷ್ಟಿಕೋನವನ್ನು ಜನರು ಕೇಳಲು ಉತ್ಸುಕರಾಗಿದ್ದಾರೆ ಎಂದು ಯುಎಇಯಲ್ಲಿನ ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಹೇಳಿದ್ದಾರೆ.

ಇಂದಿನಿಂದ ಎರಡು ದಿನಗಳ ಅಧಿಕೃತ ಭೇಟಿಗಾಗಿ ಪ್ರಧಾನಿ ಮೋದಿ ಯುಎಇಗೆ ತೆರಳುತ್ತಿದ್ದಾರೆ. ಇದು 2015ರಿಂದ ಯುಎಇಗೆ ಅವರ ಏಳನೇ ಭೇಟಿಯಾಗಿದೆ ಮತ್ತು ಕಳೆದ ಎಂಟು ತಿಂಗಳಲ್ಲಿ ಮೂರನೇ ಭೇಟಿಯಾಗಿದೆ.

ಈ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಉಭಯ ನಾಯಕರು ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಆಳಗೊಳಿಸಲು, ವಿಸ್ತರಿಸಲು, ಬಲಪಡಿಸಲು ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಮಾರ್ಗಗಳನ್ನು ಚರ್ಚಿಸಲಿದ್ದಾರೆ. ದುಬೈನಲ್ಲಿ ನಡೆಯಲಿರುವ ʼವಿಶ್ವ ಸರ್ಕಾರ ಶೃಂಗಸಭೆ 2024ʼರಲ್ಲಿ ಪ್ರಧಾನಮಂತ್ರಿಯವರು ಗೌರವ ಅತಿಥಿಯಾಗಿ ಭಾಗವಹಿಸಿ ವಿಶೇಷ ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ: PM Narendra Modi: ಯುಎಇ ಬಳಿಕ ಕತಾರ್‌ಗೆ ಪ್ರಧಾನಿ ಮೋದಿ ಭೇಟಿ, ದ್ವಿಪಕ್ಷೀಯ ಸಂಬಂಧ ಚರ್ಚೆ

Exit mobile version