Site icon Vistara News

ವಿಸ್ತಾರ ಸಂಪಾದಕೀಯ | ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಸರಿಯಲ್ಲ

Muslim Girls

ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರಕಾರ ನೀಡುವ ಅನುದಾನದಲ್ಲಿ ವಕ್ಫ್‌ ಬೋರ್ಡ್‌ ಪ್ರತಿ ಕಾಲೇಜಿಗೆ 2.5 ಕೋಟಿ ರೂ. ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ವಕ್ಫ್‌ ಬೋರ್ಡ್‌ ಮತ್ತು ಸರಕಾರದ ನಡುವಿನ ಚರ್ಚೆಯ ವೇಳೆ ಈ ತೀರ್ಮಾನಕ್ಕೆ ಬರಲಾಗಿದ್ದು, ಸದ್ಯವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಲೇಜಿಗೆ ಶಿಲಾನ್ಯಾಸ ನೆರವೇರಿಸುವ ನಿರೀಕ್ಷೆ ಇದೆ. ಇದು ಕೆಲವು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರತಿಭಟನೆಗೆ ಮುಂದಾಗಿವೆ.

ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ ಕಾಲೇಜು ಆರಂಭಿಸುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಇರುವ ಯೋಚನೆಯನ್ನು ಅರ್ಥ ಮಾಡಿಕೊಳ್ಳಬಹುದು. ಉಡುಪಿಯಲ್ಲಿ ಹಿಜಾಬ್‌ ವಿವಾದ ಉದ್ಭವಿಸಿದ ಬಳಿಕ ತರಗತಿಯಲ್ಲಿ ಹಿಜಾಬ್‌ ಧರಿಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿಷಯವಾಗಿ ಬಹುತೇಕ ಮುಸ್ಲಿಂ ಸಂಘ ಸಂಸ್ಥೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಹಿಜಾಬ್‌ ವಿವಾದದ ಬಳಿಕ ರಾಜ್ಯಾದ್ಯಂತ ಸುಮಾರು ಏಳೆಂಟು ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರು ಒಂದೋ ಶಿಕ್ಷಣದಿಂದಲೇ ವಿಮುಖರಾಗಿದ್ದಾರೆ, ಇಲ್ಲವೇ ಮುಸ್ಲಿಂ ಆಡಳಿತದ ಕಾಲೇಜುಗಳಿಗೆ ಹಾಗೂ ಹಿಜಾಬ್‌ಗೆ ಅವಕಾಶವಿರುವ ಖಾಸಗಿ ಕಾಲೇಜುಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹಿನ್ನಡೆಯನ್ನು ಸರಿದೂಗಿಸುವ ಪ್ರಯತ್ನದಲ್ಲಿ ಸರ್ಕಾರವಿದೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಇವು ತಲೆ ಎತ್ತಲಿವೆ. ವಕ್ಫ್‌ ಆಸ್ತಿಯಲ್ಲಿ ಇವು ನಿರ್ಮಾಣವಾಗಲಿದ್ದು, 2024-25ನೇ ಸಾಲಿನಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ.

ಮೇಲ್ನೋಟಕ್ಕೆ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಕಾಳಜಿ ಇದರ ಹಿಂದಿರುವಂತೆ ಕಾಣಿಸುತ್ತದೆ. ಆದರೆ ಚುನಾವಣೆಯ ಪರ್ವ ಕಾಲದಲ್ಲಿ ಈ ತೀರ್ಮಾನ ಆಗುತ್ತಿರುವುದರ ಹಿಂದೆ ಇತರ ಲೆಕ್ಕಾಚಾರಗಳೂ ಇರುತ್ತವೆ ಎಂಬುದನ್ನು ವಿವರಿಸಬೇಕಿಲ್ಲ. ಆದರೆ ಇದು ಯಾವ ರೀತಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಎಂಬುದನ್ನು ಸರ್ಕಾರವೇ ಹೇಳಬೇಕು. ಹಿಜಾಬ್‌ ತಗಾದೆ ಉಂಟಾದಾಗ ಸರ್ಕಾರವೇ ಹೊರಡಿಸಿದ್ದ ನಿರ್ದೇಶನದಲ್ಲಿ ʼʼಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ಮಾತ್ರ ಧರಿಸಬೇಕು, ಹಾಗೂ ಅದರ ಜತೆಗೆ ಯಾವುದೇ ಧಾರ್ಮಿಕ ಗುರುತುಗಳನ್ನು ಧರಿಸುವಂತಿಲ್ಲʼʼ ಎಂದಿದೆ. ಇದು ಜಾತಿ- ಧರ್ಮವನ್ನು ಮೀರಿದ ಸಮಾನ ನೆಲೆಯ ಶಿಕ್ಷಣಕ್ಕಾಗಿ ಹೊರಡಿಸಿದ ಆದೇಶವಾಗಿತ್ತು. ಇದನ್ನು ಹೈಕೋರ್ಟ್‌ ಕೂಡ ಎತ್ತಿ ಹಿಡಿದಿದೆ. ಶಾಲೆಗಳು ಸೆಕ್ಯುಲರ್‌ ಆಗಿರಬೇಕು ಎಂಬ ಕಾರಣಕ್ಕಾಗಿ, ಅಲ್ಲಿ ಈ ಹಿಂದೆ ನಡೆಯುತ್ತಿದ್ದ ಸರಸ್ವತಿ ಪೂಜೆಗಳಂಥ ಆಚರಣೆಗಳನ್ನು ಕೂಡ ತಡೆಹಿಡಿಯಲಾಗಿತ್ತು. ಇದೀಗ ಭಗವದ್ಗೀತೆ ಸೇರಿದಂತೆ ಸರ್ವ ಧರ್ಮದ ಆಶಯಗಳನ್ನು ನೈತಿಕ ಶಿಕ್ಷಣವಾಗಿ ಪ್ರಾಯೋಗಿಕ ನೆಲೆಯಲ್ಲಿ ಅಳವಡಿಸಲೂ ಸರ್ಕಾರ ಮುಂದಾಗಿದೆ. ಹೀಗೆ ಸರ್ವಧರ್ಮಗಳ ಸಹಬಾಳ್ವೆ, ಒಗ್ಗೂಡಿ ಕಲಿಕೆಯ ಹಾದಿಯಲ್ಲಿ ಎರಡು ಹೆಜ್ಜೆ ಮುಂದಿಡಲಾಗಿದೆ. ಈಗ ಇದ್ದಕ್ಕಿದ್ದಂತೆ ಒಂದು ಹೆಜ್ಜೆ ಹಿಂದಿಡುವ ತರಾತುರಿ ಸಕಾರಾತ್ಮಕ ನಡೆ ಅಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಹೀಗೆ ಮಾಡುವುದು ಬೇರೆ, ಸರ್ಕಾರವೇ ಮಾಡುವುದು ಬೇರೆ.

ಈಗಾಗಲೇ ಮುಸ್ಲಿಮರು ಮುಖ್ಯ ವಾಹಿನಿಗೆ ಬರುತ್ತಿಲ್ಲ ಎಂಬ ಆತಂಕವಿದೆ. ಶಿಕ್ಷಣವೇ ಮುಖ್ಯ ಎಂದು ತಿಳಿದವರು ಹಿಜಾಬ್‌ ಕಳಚಿಟ್ಟು ತರಗತಿಯಲ್ಲಿ ಕುಳಿತುಕೊಳ್ಳಲು ಹಿಂಜರಿದಿಲ್ಲ. ಹಿಜಾಬ್‌ ಮುಂದೆ ಶಿಕ್ಷಣವೂ ಬೇಡ ಎಂದು ವಾದಿಸುವವರಿಗೆ ಶಿಕ್ಷಣ ಮುಖ್ಯವಾಗಿಲ್ಲ ಎಂಬುದು ಗೊತ್ತಾಗುತ್ತಿದೆ. ಇಂಥವರಿಗೆ ಪ್ರತ್ಯೇಕ ಕಾಲೇಜು ನಿರ್ಮಿಸಿದರೆ ಅದು ಸರ್ಕಾರದ ಆಶಯವನ್ನು ಪೂರೈಸಬಹುದೇ? ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಿರುವವರನ್ನು ಪ್ರತ್ಯೇಕ ಕಾಲೇಜಿಗೆ ಸೀಮಿತಗೊಳಿಸಿ, ಇನ್ನಷ್ಟು ಪ್ರತ್ಯೇಕಿಸಿದಂತೆಯೇ ಆಗುವುದಿಲ್ಲವೇ? ಕಾಲೇಜಿನಲ್ಲಿ ಹಿಜಾಬ್‌ ಧರಿಸಲು ಅವಕಾಶವಿಲ್ಲ ಎಂದು ರೋಷಾವೇಷದಿಂದ ಗರ್ಜಿಸಿ, ಈಗ ವಕ್ಫ್ ಬೋರ್ಡ್ ಮೂಲಕ ಪ್ರತ್ಯೇಕ ಕಾಲೇಜು ಸ್ಥಾಪಿಸುವುದು, ಅದಕ್ಕೆ ಸರ್ಕಾರ ಅನುದಾನದ ಬೆಂಬಲ ಘೋಷಿಸುವುದು ನಾಲಿಗೆ ಕಚ್ಚಿಕೊಂಡಂತೆಯೇ ಅಲ್ಲವೇ? ನಿರ್ದಿಷ್ಟ ಧರ್ಮ, ನಿರ್ದಿಷ್ಟ ಜಾತಿಗಳಿಗೆ ಸೀಮಿತವಾದ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಮಿತಿ ಹಾಕುವುದು ಸರಿಯಲ್ಲ. ಹೀಗೆ ಮಾಡುತ್ತ ಹೋದರೆ ನಾಳೆ ಇತರ ಅಲ್ಪಸಂಖ್ಯಾತರೂ ತಮಗಿಷ್ಟು ಕಾಲೇಜು ಇರಲಿ ಎಂಬ ಬೇಡಿಕೆ ಮಂಡಿಸಿದರೆ ಸರ್ಕಾರ ಇಲ್ಲ ಅನ್ನಲು ಸಾಧ್ಯವಿದೆಯೇ? ಇಂಥ ಬೇಡಿಕೆಗಳಿಗೆ ಕೊನೆ ಇರಲಾದರೂ ಸಾಧ್ಯವೇ? ಹೀಗೆ ಪ್ರತ್ಯೇಕಿಸುತ್ತ ಹೋದರೆ ಅದು ಎಲ್ಲಿಗೆ ಮುಟ್ಟಲಿದೆಯೋ ಗೊತ್ತಿಲ್ಲ.

ಅತ್ತ ಮುಸ್ಲಿಂ ರಾಷ್ಟ್ರವಾಗಿರುವ ಇರಾನ್‌ನಲ್ಲೇ ಹಿಜಾಬ್ ವಿರುದ್ಧ ಬೃಹತ್ ಹೋರಾಟ ನಡೆಯುತ್ತಿದೆ. ಮಹಿಳೆಯರೇ ಹಿಜಾಬ್‌ ತಮಗೆ ಬೇಡವೆಂದು ಕಿತ್ತೆಸೆಯುತ್ತಿದ್ದಾರೆ. ಹೀಗಿರುವಾಗ ನಮ್ಮಲ್ಲಿ ಹಿಜಾಬ್ ಧರಿಸಲು ಅನುವು ಮಾಡಿ ಕೊಡುವುದಕ್ಕಾಗಿಯೇ ಪ್ರತ್ಯೇಕ ಕಾಲೇಜು ಸ್ಥಾಪಿಸಲು ಹೊರಟಿರುವುದು ಆಕ್ಷೇಪಾರ್ಹ. ಎಲ್ಲ ಧರ್ಮ, ಎಲ್ಲ ಜಾತಿಯ ಮಕ್ಕಳು ಜತೆಯಾಗಿ ಬೆರೆಯುತ್ತ ಓದುವಂಥ ವಾತಾವರಣ ನಿರ್ಮಿಸಬೇಕು. ಅಲ್ಲಿ ಮಾತ್ರ ಸಂವಿಧಾನ ಹೇಳಿದಂಥ ಸರಿಯಾದ ಸಾಮಾಜಿಕ ಸಹಬಾಳ್ವೆಯ ಕಲಿಕೆಯೂ ಸಾಧ್ಯ. ಎಲ್ಲರನ್ನೂ ಬೇರೆ ಮಾಡುತ್ತ ಹೋದರೆ ಒಂದಾಗುವುದು ಯಾವಾಗ?

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಕೋವಿಡ್ ಲಸಿಕೆ ಅಡ್ಡಪರಿಣಾಮ, ಸರ್ಕಾರ ಹೊಣೆಗಾರಿಕೆ ಹೊರಲಿ

Exit mobile version