Site icon Vistara News

ವಿಸ್ತಾರ ಸಂಪಾದಕೀಯ: ಪ್ರಚಾರದ ಕಣದಲ್ಲಿ ಹಣದ ಹೊಳೆ, ಇದು ಪ್ರಜಾಪ್ರಭುತ್ವದ ಅಣಕ

A stream of money in the campaign arena, it's a mockery of democracy

#image_title

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾದಂದಿನಿಂದ ಇಂದಿನವರೆಗೂ ರಾಜ್ಯದ ಎಲ್ಲ ಕಡೆಯಲ್ಲೂ ಅಕ್ರಮ ಹಣ, ಮತದಾರರಿಗೆ ಗಿಫ್ಟ್‌ ನೀಡಲು ಒಯ್ಯಲಾಗುತ್ತಿದ್ದ ವಸ್ತುಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಹಣದ ಹೊಳೆಯೇ ಪ್ರಚಾರದ ಕಣದಲ್ಲಿ ಹರಿಯುತ್ತಿದೆ ಎಂಬುದನ್ನು ಇದರಿಂದ ಊಹಿಸಬಹುದು. ಚುನಾವಣೆ ಪ್ರಚಾರಕ್ಕಾಗಿ ಕಾನೂನಿನ ಕುಣಿಕೆಗೆ ಸಿಗದಂತೆ ಅಭ್ಯರ್ಥಿಗಳು ಬೇನಾಮಿಯಾಗಿ ಕೋಟಿ ಕೋಟಿ ರೂಪಾಯಿಯನ್ನು ಸಾಗಣೆ ಮಾಡುತ್ತಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ ಇದುವರೆಗೂ ರಾಜ್ಯದಲ್ಲಿ 150 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಕಡೆ ಹಾಕಲಾದ ಚೆಕ್‌ಪೋಸ್ಟ್‌ಗಳು, ಮಾಹಿತಿದಾರರು ಹಾಗೂ ಅಧಿಕಾರಿಗಳ ಹದ್ದಿನ ಕಣ್ಣಿನಿಂದಾಗಿ ಹಲವು ಪ್ರಕರಣಗಳು ಸಿಕ್ಕಿಬಿದ್ದಿವೆ. ಆದರೂ ಸಿಗದೇ ತಪ್ಪಿಸಿಕೊಳ್ಳುತ್ತಿರುವುದು ಇದರ ಹತ್ತು ಪಟ್ಟು, ನೂರು ಪಟ್ಟು ಇರಬಹುದು.

ಚುನಾವಣೆಗೆ ನಿಲ್ಲುವ ಒಬ್ಬ ಅಭ್ಯರ್ಥಿ ಪ್ರಚಾರಕ್ಕೆ ಎಷ್ಟು ಹಣ ವೆಚ್ಚ ಮಾಡಬಹುದು? ಇದಕ್ಕೆ ಮಿತಿಯನ್ನೂ ಚುನಾವಣಾ ಆಯೋಗವೇ ವಿಧಿಸಿದೆ. ಕಳೆದ ವರ್ಷ ಈ ಮಿತಿಯನ್ನು ಏರಿಸಲಾಗಿದೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ 95 ಲಕ್ಷ ರೂ., ವಿಧಾನಸಭೆ ಚುನಾವಣೆ ಅಭ್ಯರ್ಥಿ 40 ಲಕ್ಷ ರೂ. ವೆಚ್ಚ ಮಾಡಬಹುದು. ಇದು ಚುನಾವಣಾ ಅಭ್ಯರ್ಥಿ ಸಾರ್ವಜನಿಕ ಸಭೆಗಳು, ರ‍್ಯಾಲಿಗಳು, ಜಾಹೀರಾತುಗಳು, ಪೋಸ್ಟರ್‌, ಬ್ಯಾನರ್‌, ವಾಹನಗಳು ಮತ್ತು ಜಾಹೀರಾತುಗಳ ಮೇಲಿನ ವೆಚ್ಚಗಳನ್ನೆಲ್ಲ ಒಳಗೊಂಡು ಮಾಡಬಹುದಾದ ಖರ್ಚು. ಪ್ರಜಾಪ್ರತಿನಿಧಿ ಕಾಯ್ದೆ (RPA)- 1951ರ ಸೆಕ್ಷನ್ 77ರ ಅಡಿಯಲ್ಲಿ, ಪ್ರತಿಯೊಬ್ಬ ಅಭ್ಯರ್ಥಿಯೂ ತಾವು ನಾಮನಿರ್ದೇಶನಗೊಂಡ ದಿನಾಂಕ ಮತ್ತು ಫಲಿತಾಂಶದ ಘೋಷಣೆಯ ದಿನಾಂಕದ ನಡುವೆ ಮಾಡಿದ ಎಲ್ಲ ವೆಚ್ಚಗಳ ಸರಿಯಾದ ಲೆಕ್ಕ ಇಟ್ಟುಕೊಂಡು, ಚುನಾವಣೆ ಮುಗಿದ 30 ದಿನಗಳ ಒಳಗೆ ಇದರ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕು. ತಪ್ಪಾಗಿ ವಿವರ ನೀಡಿದರೆ ಅಥವಾ ಮಿತಿ ಮೀರಿ ಖರ್ಚು ಮಾಡಿದರೆ RPA 1951ರ ಸೆಕ್ಷನ್ 10A ಅಡಿಯಲ್ಲಿ ಮೂರು ವರ್ಷಗಳವರೆಗೆ ಅಭ್ಯರ್ಥಿಯನ್ನು ಆಯೋಗ ಅನರ್ಹಗೊಳಿಸಬಹುದಾಗಿದೆ.

ಆದರೆ ಎಂದಾದರೂ ಈ ಮಿತಿ ಪಾಲನೆಯಾದದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾದದ್ದು ಇದೆಯೇ? ಇಲ್ಲವೇ ಇಲ್ಲ ಎನ್ನಬಹುದು. ಅಭ್ಯರ್ಥಿಗಳೇನೋ ಖರ್ಚುವೆಚ್ಚದ ವಿವರಗಳನ್ನು ಕೊಡುತ್ತಾರೆ. ಪ್ರಾಮಾಣಿಕವಾಗಿ ನೀಡುವವರು ಬೆರಳೆಣಿಕೆಯಷ್ಟು ಇರಬಹುದು. ಲೆಕ್ಕ ನೀಡದ ವೆಚ್ಚವೇ ಬಹಳ. ಶಿಕ್ಷೆ ನೀಡಬಹುದಾದ ಆಯೋಗ ಆ ಬಗ್ಗೆ ಕ್ರಮ ತೆಗೆದುಕೊಂಡ ದಾಖಲೆಯಿಲ್ಲ. ಇಲ್ಲಿ ಇನ್ನೂ ಒಂದು ದೋಷವಿದೆ. ರಾಜಕೀಯ ಪಕ್ಷಗಳು ಮಾಡಬಹುದಾದ ಖರ್ಚಿಗೆ ಯಾವುದೇ ಮಿತಿಯಿಲ್ಲ. ಇದನ್ನು ಪಕ್ಷದ ಅಭ್ಯರ್ಥಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಮುಗಿದ 90 ದಿನಗಳ ಒಳಗೆ ಚುನಾವಣಾ ವೆಚ್ಚದ ಹೇಳಿಕೆಯನ್ನು ಆಯೋಗಕ್ಕೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಬಹುದಾದ ಯಾವುದೇ ವಿಧಾನವಿಲ್ಲ. ಹೀಗಾಗಿ ವೆಚ್ಚಗಳು ಕಾನೂನು ಕ್ರಮದಡಿ ಬಾರದೆ ತೂರಿಹೋಗುತ್ತಿವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭಾರತೀಯ ಕುಸ್ತಿಪಟುಗಳ ಮಾನ ಹರಾಜಾಗದಿರಲಿ

ಇದು ಹೀಗೇ ಮುಂದುವರಿದರೆ ಚುನಾವಣೆ ವ್ಯವಸ್ಥೆಯೇ ನೆಲಕಚ್ಚಲಿದೆ. ಚುನಾವಣೆ ಎಂದರೇ ಹಣ ಹಂಚಿಕೆ, ಅಕ್ರಮ ಎಂಬ ಚಿತ್ರಣ ಕಾಯಂ ಆಗಲಿದೆ. ಚುನಾವಣೆ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು. ಮತದಾರರು ಕೂಡ ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮವಾಗದು. ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರ ಲಾಭ ಜನರಿಗೇ ಆಗುತ್ತದೆ

Exit mobile version