ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder case) ಬಂಧನವಾಗಿರುವ ನಟ ದರ್ಶನ್ (Actor Darshan), ಪವಿತ್ರಾ ಗೌಡ ಸೇರಿ 13 ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಮಂಗಳವಾರ ಸಂಜೆ ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಕಸ್ಟಡಿಗೆ ಕೇಳಲು ರಿಮ್ಯಾಂಡ್ ಅರ್ಜಿಯನ್ನು ಪೊಲೀಸರು ಸಲ್ಲಿಸಿದ್ದರು. ಪೊಲೀಸರ ಪರ ಸರ್ಕಾರಿ ಅಭಿಯೋಜಕ ವಾದ ಮಂಡಿಸಿ, ಸಾಕ್ಷ್ಯಗಳ ನಾಶ ಆಗಿರುವುದರಿಂದ ಎ2 ದರ್ಶನ್ ಅವರನ್ನು 14 ದಿನ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ, ದರ್ಶನ್ ಪರ ವಕೀಲ 14 ದಿನ ಯಾಕೆ ಎಂದು ಪ್ರಶ್ನಿಸಿದರು. ಈಗಾಗಲೇ ದರ್ಶನ್ ಮೊಬೈಲ್ ಸೀಜ್ ಆಗಿದೆ, ದರ್ಶನ್ ಅವರ ತೇಜೋವಧೆ ಮಾಡಲು ಈ ರೀತಿ ಮಾಡಲಾಗುತ್ತಿದೆ ಹೇಳಿದರು.
ಆರೋಪಿಗಳನ್ನು ಕಸ್ಟಡಿಗೆ ನೀಡಲು ಸರ್ಕಾರಿ ಅಭಿಯೋಜಕ ಕೋರಿದರೆ, ದರ್ಶನ್ ಪರ ವಕೀಲ ಅವರಿಗೆ ಕಿರುಕುಳ ನೀಡಬಾರದು, ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ನೀಡಲು ಸೂಚಿಸಿದರು. ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ಎಂದು ಹೇಳಿದ ಕೂಡಲೇ ನಟ ದರ್ಶನ್ ಕಣ್ಣೀರಿಟ್ಟಿದ್ದು ಕಂಡುಬಂತು.
ಹೀಗಾಗಿ ದರ್ಶನ್ ಅವರನ್ನು ಕಸ್ಟಡಿಗೆ ನೀಡಲಾಗಿದೆ. ಇದಕ್ಕೂ ಮುನ್ನಾ ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಸಿಜಿ, ಬಿ.ಪಿ., ಶುಗರ್ ಇನ್ನಿತರ ಟೆಸ್ಟ್ ಮಾಡಲಾಗಿದ್ದು, ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳಕ್ಕೆ ಪೊಲೀಸರು, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಈ ವೇಳೆ ಕೆಲ ವಸ್ತುಗಳನ್ನು ಎಫ್ಎಸ್ಎಲ್ ತಂಡ ಸಂಗ್ರಹಿಸಿದೆ. ವಸ್ತುಗಳನ್ನು ಸೀಜ್ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೊಲೆ ಪ್ರಕರಣದಲ್ಲಿ ಬಂಧನವಾದ ಆರೋಪಿಗಳು
1.ನಟ ದರ್ಶನ್
2.ಪವಿತ್ರಾ ಗೌಡ
3.ಕೆ. ಪವನ್-ದರ್ಶನ್ ಮನೆಯಲ್ಲಿ ಇರುವ ದರ್ಶನ್ ಅಪ್ತ, ಕಿಡ್ನ್ಯಾಪ್ ಮಾಡಲು ಹೇಳಿದ್ದವನು, ಪವಿತ್ರಗೂ ಆಪ್ತ
4.ಪ್ರದೋಶ್- ಹೋಟೆಲ್ ಉದ್ಯಮಿ
5.ನಂದೀಶ್- ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ, ಕಿಡ್ನ್ಯಾಪ್ ಮಾಡಿಕೊಂಡು ಕರೆತಂದವನು
6.ಕೇಶವಮೂರ್ತಿ, ಪ್ರದೂಶ್ ಗೆಳೆಯ ಹಾಗೂ ಉದ್ಯಮಿ
7.ರಾಘವೇಂದ್ರ- ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ
8.ಎಂ.ಲಕ್ಷ್ಮಣ್
9. ದೀಪಕ್ ಕುಮಾರ್
10.ಕಾರ್ತಿಕ್
11.ಆರ್.ನಾಗರಾಜ್, ದರ್ಶನ್ ಆಪ್ತ
12.ವಿ.ವಿನಯ್
13. ನಿಖಿಲ್ ನಾಯಕ್
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಚಿತ್ರದುರ್ಗದಲ್ಲಿ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ | Actor Darshan: ಕಳೆದ ವರ್ಷ ಮದುವೆಯಾಗಿದ್ದ ರೇಣುಕಾಸ್ವಾಮಿ ಪತ್ನಿ ಗರ್ಭಿಣಿ; ಸಾವಿನ ವಿಚಾರ ಆಕೆಗೆ ಗೊತ್ತೇ ಇಲ್ಲ!
ಏನಿದು ಪ್ರಕರಣ?
ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ ಹಿನ್ನೆಲೆಯಲ್ಲಿ ದರ್ಶನ್ ಆಪ್ತರು ಜೂನ್ 8ರಂದು ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ನಂತರ ಜೂನ್ 9ರಂದು ಸುಮನಹಳ್ಳಿಯ ರಾಜಕಾಲುವೆ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಬೀದಿ ನಾಯಿಗಳು ಕಸ ಎಳೆದಾಡುವಾಗ ಶವ ಪತ್ತೆಯಾಗಿತ್ತು. ಇದಾದ ಬಳಿಕ ಅದೇ ದಿನ ರಾಮ್ ದೋರ್ ಎಂಬ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು.
ಅಪರಿಚಿತ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ ಆರಂಭಿಸಿದ್ದರು. ಇದರ ಮಧ್ಯೆಯೇ, ಗಿರಿನಗರದ ಮೂವರು ಆರೋಪಿಗಳು ತಾವೇ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣಾಗಿದ್ದರು. ಹಣಕಾಸು ವಿಚಾರವಾಗಿ ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದರು. ಅನುಮಾನಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ, ನಟ ದರ್ಶನ್ ಕೈವಾಡ ಇರುವುದು ಬಯಲಾಗಿದೆ. ಆರೋಪಿಗಳೇ ದರ್ಶನ್ ಹೆಸರು ಹೇಳಿದ ಕಾರಣ ನಟ ದರ್ಶನ್ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ದರ್ಶನ್ ಎ2 ಆಗಿದ್ದಾರೆ.
ಇದನ್ನೂ ಓದಿ | Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನ; ನಟಿ ಸಂಜನಾಗೆ ಶಾಕ್, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!
ರೇಣುಕಾಸ್ವಾಮಿ ಯಾರು?
ಚಿತ್ರದುರ್ಗ ಮೂಲದವನಾದ ರೇಣುಕಾಸ್ವಾಮಿ ಎಂಬ 33 ವರ್ಷದ ಯುವಕ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತನು ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದರ್ಶನ್ ಹಾಗೂ ಅವರ ಆಪ್ತರು ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿಗೆ ಕಳೆದ ವರ್ಷವೇ ಸಹನಾ ಎಂಬ ಯುವತಿ ಜತೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ.