ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Chitradurga Renukaswamy murder case) ಸಂಬಂಧಿಸಿ ಸೆಪ್ಟೆಂಬರ್ 9 ರವರೆಗೆ ನಟ ದರ್ಶನ್ (Actor Darshan) ಮತ್ತು ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ (Judicial custody) ಅವಧಿ ವಿಸ್ತರಣೆ ಮಾಡಿ 24 ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ದರ್ಶನ್ ಮತ್ತು ಗ್ಯಾಂಗ್ ನ ನ್ಯಾಯಾಂಗ ಬಂಧನ ಅವಧಿ ಬುಧವಾರ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಜೈಲು ಅಧಿಕಾರಿಗಳು ಹಾಜರು ಪಡಿಸಿದರು.
ತುಮಕೂರು ಹಾಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ರೇಣುಕಾಸ್ವಾಮಿ ಕೊಲೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾದರು.
ಪವಿತ್ರ ಗೌಡ, ದರ್ಶನ್, ಪುಟ್ಟಸ್ವಾಮಿ ಅಲಿಯಾಸ್ ಪವನ್, ನಂದಿಶ್ ,ರಾಘವೇಂದ್ರ, ಲಕ್ಷ್ಮಣ, ದೀಪಕ್, ಪ್ರದೂಷ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಹೆಸರು ಕರೆದು ಹಾಜರಾತಿ ತೆಗೆದುಕೊಂಡ ನ್ಯಾಯಾಧೀಶರು ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶಿಸಿದರು.
ರಿಮ್ಯಾಂಡ್ ಅರ್ಜಿ ಸಲ್ಲಿಕೆ
ತಂದೆಗೆ ಕ್ಯಾನ್ಸರ್ ಇದೆ. ನನ್ನನ್ನು ಬೆಂಗಳೂರು ಜೈಲಿನಿಂದ ಶಿಪ್ಟ್ ಮಾಡಬೇಡಿ ಎಂದು ಪ್ರದೂಷ್ ಈ ಸಂದರ್ಭದಲ್ಲಿ ನ್ಯಾಯಾಧೀಶರ ಬಳಿ ಮನವಿ ಮಾಡಿದ್ದಾರೆ. ಆರೋಪಿ ಕುಟುಂಬಸ್ಥರಿಗೆ ಭೇಟಿಗೆ ಅವಕಾಶ ನೀಡುತ್ತಿದ್ದೀರಾ ಎಂದು ಜೈಲು ಸಿಬ್ಬಂದಿಗೆ ಜಡ್ಜ್ ಪ್ರಶ್ನಿಸಿದ್ದಾರೆ.
ಹೊಸ ಎಫ್ ಐಆರ್ ಗಳ ಸಂಬಂಧ ತನಿಖೆ ಹಂತದಲ್ಲಿ ಇರುವುದರಿಂದ ಯಾರಿಗೂ ಅವಕಾಶ ಕೊಡುತ್ತಿಲ್ಲ ಎಂದು ಜೈಲಾಧಿಕಾರಿಗಳು ಈ ಸಂದರ್ಭದಲ್ಲಿ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.
ದಯವಿಟ್ಟು ನನ್ನ ಶಿಫ್ಟ್ ಮಾಡಬೇಡಿ ಸ್ವಾಮಿ.. ಎಂದು ಪರಿಪರಿಯಾಗಿ ಪ್ರದೂಷ್ ಈ ಸಂದರ್ಭದಲ್ಲಿ ಬೇಡಿಕೊಂಡರು. ನಾಗರಾಜ್ ಮತ್ತು ಲಕ್ಷ್ಮಣ್ ಕೂಡ ನಮ್ಮನ್ನು ಶಿಫ್ಟ್ ಮಾಡಬೇಡಿ ಎಂದು ಮನವಿ ಮಾಡಿದರು.
ಆಗ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ ನ್ಯಾಯಾಧೀಶರು, ನಿಯಮಗಳು ಏನಿವೆಯೋ ಅದನ್ನು ಮಾಡಲಾಗುತ್ತದೆ ಎಂದು ಅವರಿಗೆ ಉತ್ತರಿಸಿದರು.
ಜೈಲು ಅಧಿಕಾರಿಗಳು ಅವರ ಪ್ರಕ್ರಿಯೆ ಅವರು ಮಾಡುತ್ತಾರೆ ಎಂದು ಹೇಳಿ ಆರೋಪಿಗಳ ಮನವಿಯನ್ನು ತಿರಸ್ಕರಿಸಿದರು.
ಪೊಲೀಸರ ಮನವಿ
ದರ್ಶನ್ ಗ್ಯಾಂಗ್ ನ್ಯಾಯಾಂಗ ಬಂಧನ ಮುಂದುವರಿಕೆಗೆ ಮನವಿ ಮಾಡಿದ ಪೊಲೀಸರು ನ್ಯಾಯಾಲಯದ ಮುಂದೆ ಹತ್ತು ಅಂಶಗಳನ್ನು ಪ್ರಸ್ತಾವಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳ ಪಾತ್ರ ಎಲ್ಲ ರೀತಿಯಲ್ಲಿ ಧೃಡವಾಗಿದೆ, ಕೇಸ್ ನಲ್ಲಿ ಇನ್ನೂ ಕೆಲ ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ, ಅಗತ್ಯವಿದ್ದರೆ 164 ಅಡಿ ಹೇಳಿಕೆ ದಾಖಲಿಸಬೇಕಿದೆ. ಸದ್ಯ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷಿಗೆ ಬೆದರಿಕೆ ಸಾಧ್ಯತೆ, ವ್ಯವಸ್ಥಿತ ರೀತಿಯಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ, ಪ್ರಭಾವಿ ಆರೋಪಿ ಮೃತನ ಕುಟುಂಬಕ್ಕೆ ಬೆದರಿಕೆ, ಆಮಿಷ ಸಾಧ್ಯತೆ, ಎಫ್ ಎಸ್ ಎಲ್ ವರದಿಯಲ್ಲಿ ಆರೋಪಿಗಳ ಪಾತ್ರ ಸಾಬೀತು, ಟೆಕ್ನಿಕಲ್ ಎವಿಡೆನ್ಸ್ ಬಗ್ಗೆ ಕೆಲ ವರದಿ ಬಾಕಿ ಇದೆ. ಇನ್ನೂ ಕೆಲವು ವಸ್ತುಗಳ ಎಫ್ ಎಸ್ ಎಲ್ ಗೆ ಕಳುಹಿಸಿ ವರದಿ ಪಡೆಯಬೇಕು, ಈ ವೇಳೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದ್ದಾರೆ.
ಜೈಲು ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ
ನಟ ದರ್ಶನ ಜೈಲಿನಲ್ಲಿ ಕಾಫಿ ಕುಡಿದ ಪೋಟೋ ವೈರಲ್ ವಿಷಯಕ್ಕೆ ಸಂಬಂಧಿಸಿ ದರ್ಶನ ಪರ ವಕೀಲ ಅನೀಲ್ ಬಾಬು ಪ್ರತಿಕ್ರಿಯಿಸಿದ್ದು, ಇದು ಜೈಲಿನಲ್ಲಿ ಇರುವ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಎಂದು ಹೇಳಿದ್ದಾರೆ.
ಪೋಟೋ ಹಾಗೂ ವಿಡಿಯೋ ಲೀಕ್ ಅಗಿರೋದಕ್ಕೆ ಜೈಲ್ ಅಧಿಕಾರಿಗಳೇ ನೇರ ಕಾರಣ. ಜೈಲಿನ ಸಿಬ್ಬಂದಿ ಎಲ್ಲಾ ರೀತಿಯ ಚೆಕ್ ಮಾಡಬೇಕು. ಯಾರೋ ಒಬ್ಬರು ವಿಡಿಯೋ ಕಾಲ್ ಮಾಡಿ ಹಾಯ್ ಅನ್ನು ಅಂತ ಹೇಳಿದರೆ ಅದಕ್ಕೆ ದರ್ಶನ ಹಾಯ್ ಅಂತ ಹೇಳಿದ್ದಾರೆ. ಇದು ದರ್ಶನ ತಪ್ಪಲ್ಲ. ಅವರಿಗೂ ತಿಳಿಯದೇ ಆಗಿರೋ ಘಟನೆ ಎಂದಿದ್ದಾರೆ.
ಇನ್ನೂ ಜೈಲಿನಲ್ಲಿ ಕುರ್ಚಿ, ಕಾಫಿ ಕಪ್ ಹೇಗೆ ಬಂತು ಅಂತ ಅಧಿಕಾರಿಗಳು ವಿಚಾರಣೆ ಮಾಡಬೇಕು. ಇದಕ್ಕೆ ದರ್ಶನ ಕಾರಣ ಅಂದ್ರೆ ತಪ್ಪು. ಇನ್ನೂ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುತ್ತಿದ್ದಾರೆ ಇದು ಕೋರ್ಟ್ ಅದೇಶ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಅಧಿಕಾರಿಗಳ ತಪ್ಪಿಗೆ ಈ ರೀತಿಯ ಶಿಕ್ಷೆ ಅಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Actor Darshan: ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ: ಪೊಲೀಸ್ ತನಿಖೆ ಶುರು
ಇನ್ನೂ ಜೈಲಿನಲ್ಲಿ ರೌಡಿಗಳ ಜೊತೆ ಸ್ನೇಹ ಸಂಬಂಧ ಇದೆ ಅಂತಾರೆ. ಆದರೆ ದರ್ಶನ ಗೆ ಇವರು ಯಾರು ಮೊದಲಿನಿಂದ ಪರಿಚಯ ಇಲ್ಲ. ಜೈಲಿನಲ್ಲಿ ಪರಿಚಯ ಅಗಿದೆ ಅಷ್ಟೆ. ಚಾರ್ಜ್ ಶೀಟ್ ಸಲ್ಲಿಕೆ ಮಾಡ್ಲಿ. ವಾದ ಮಾಡಿ ದರ್ಶನ ನಿರಪರಾಧಿ ಅಂತ ಹೊರಗೆ ತರುತ್ತೇವೆ ಎಂದರು.