ಬೆಂಗಳೂರು: ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ (Actor Darshan) ದಾಖಲಾಗಿವೆ. ಜೈಲು ಸೂಪರಿಂಟೆಂಡೆಂಟ್ ಕೊಟ್ಟ ದೂರಿನ ಮೇರೆಗೆ ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳು ಸೀನ ಹಾಗೂ ಮ್ಯಾನೇಜರ್ ನಾಗರಾಜ್ ಮೇಲೆ ಕೇಸ್ ದಾಖಲಾಗಿದೆ.
ಜೈಲಿನಲ್ಲಿ ಸಿಗರೇಟ್ ಕೊಟ್ಟಿದ್ದಕ್ಕೆ ಹಾಗೂ ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದಕ್ಕೆ, ಅಲ್ಲದೇ ಸಿಸಿಬಿ ಪೊಲೀಸರ ದಾಳಿ ವೇಳೆ ಕೆಲವು ವಸ್ತುಗಳನ್ನು ಮರೆಮಾಚಿದ್ದಕ್ಕೆ ಸಂಬಂಧಿಸಿ ಒಟ್ಟು ಒಟ್ಟು ಮೂರು ಪ್ರತ್ಯೇಕ ಕೇಸ್‌ಗಳು ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿವೆ. ಮೂರು ಕೇಸ್‌ಗಳಲ್ಲೂ ದರ್ಶನ್‌ನ ಆರೋಪಿಯನ್ನಾಗಿ ಉಲ್ಲೇಖಿಸಿ ಪ್ರಕರಣ ದಾಖಲಿಸಲಾಗಿದೆ.
ಜೈಲಿಗೆ ಗೃಹ ಸಚಿವರ ಭೇಟಿ
ಬೆಂಗಳೂರು: ನಟ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಡಿಜಿಪಿ ಅಲೋಕ್ ಮೋಹನ್, ಬಂದೀಖಾನೆ ಇಲಾಖೆ ಡಿಜಿಪಿ ಮಾಲೀನಿ ಕೃಷ್ಣಮೂರ್ತಿ, ಐಜಿಪಿ ಆನಂದ್ ರೆಡ್ಡಿ ಡಿಐಜಿ ಸೋಮಶೇಖರ್ ಮತ್ತಿತರರು ಇದ್ದರು.
ಜೈಲಿನಿಂದ ಹೊರಬಂದ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆದಿರುವುದು ನಿಮಗೆಲ್ಲಾ ತಿಳಿದಿದೆ, ಇದರ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ. ತನಿಖೆಯನ್ನು ಮಾಡಿ ಈಗಾಗಲೇ ಏಳು ಜನರನ್ನ ಅಮಾನತು ಮಾಡಲಾಗಿದೆ. ಜೈಲಿಗೆ ವಿಸಿಟ್ ಮಾಡಿ ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಂಡಿದ್ದೇನೆ. ಜೈಲು ಸೂಪರಿಂಟೆಂಡೆಂಟ್‌ಗಳಾದ ಮಲ್ಲಿಕಾರ್ಜುನ ಸ್ವಾಮಿ, ಕೇಶವ್ ಮೂರ್ತಿ ಅವರಿಂದ ಕೂಡ ಲೋಪವಾಗಿದೆ. ಅವರನ್ನ ಕೂಡ ಸಸ್ಪೆಂಡ್ ಮಾಡಲಾಗಿದೆ. ಕಿರಿಯ ಅಧಿಕಾರಿ, ಸಿಬ್ಬಂದಿ ಮಾತ್ರ ಅಲ್ಲ ಮೇಲಧಿಕಾರಿಗಳನ್ನೂ ಸಂಸ್ಪೆಂಡ್ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ | Ladakh New districts: ಲಡಾಕ್‌ನಲ್ಲಿ 5 ಹೊಸ ಜಿಲ್ಲೆಗಳ ರಚನೆ; ಅಮಿತ್ ಶಾ ಮಹತ್ವದ ಘೋಷಣೆ
ಕೈದಿಗಳಿಗೆ ಯಾರು ಸಿಗರೇಟ್, ಟೀ, ಕುರ್ಚಿ ತಂದು ಕೊಟ್ಟರೋ ಅದರ ಬಗ್ಗೆ ತನಿಖೆಯಾಗುತ್ತಿದೆ. ಅವರ ವಿರುದ್ಧವೂ ಕಾನೂನು ಕ್ರಮವಾಗುತ್ತೆ. ಇದರ ಬಗ್ಗೆ ಈಗಾಗಲೇ ಮೂರು ಎಫ್ಐಆರ್ ಮಾಡಲಾಗಿದೆ. ವಾರ್ಡನ್ ಸೇರಿ ಹಲವರ ಮೇಲೆ ಎಫ್ಐಆರ್ ಆಗಿದೆ. ಎಲ್ಲಾ ಕಡೆಗಳಲ್ಲೊ ಸಿಸಿಟಿವಿ ಹಾಕಲಾಗಿದೆ. ಇನ್ನೂ ಕೆಲವೆಡೆ ಸಿಸಿಟಿವಿ ಹಾಕಲಾಗುವುದು ಎಂದು ತಿಳಿಸಿದರು.
ಪ್ರಕರಣದ ಬಗ್ಗೆ ಐಪಿಎಸ್ ಅಧಿಕಾರಿಗಳ ತಂಡ ರಚನೆ ಮಾಡಿ ತನಿಖೆ ಮಾಡಲಾಗುತ್ತಿದೆ. ಜೈಲುಗೆ ಸಿಸಿಬಿಯವರು ಬರುವ ಮಾಹಿತಿ ಪಡೆದು ಎಲ್ಲಾ ವಸ್ತುಗಳನ್ನ ಹೊರಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಈ ಎಲ್ಲದರ ಬಗ್ಗೆ ತನಿಖೆಯಿಂದ ಹೊರ ಬರುತ್ತೆ ಎಂದು ತಿಳಿಸಿದರು.
ಬಂದೀಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಮಾತನಾಡಿ, ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಮೊಬೈಲ್ ಫೋನ್ ಬಳಕೆ, ಸಿಗರೇಟ್, ಕಾಫಿ ಕೊಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಎಫ್ಐಆರ್‌ನಲ್ಲಿ ದರ್ಶನ್ ಹೆಸರು ಕೂಡ ಇದೆ. ಈ ಒಂದು ಘಟನೆ ಕಳೆದ 22ರಂದು ನಡೆದಿದೆ ಎಂದು ಹೇಳಿದರು.