ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ (Parappa Agrahara) ನಟ ದರ್ಶನ್ ಗೆ (Actor Darshan) ರಾಜಾತಿಥ್ಯ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ತನಿಖೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಬೇಗೂರು ಇನ್ಸಪೆಕ್ಟರ್ ಕೃಷ್ಣ ಕುಮಾರ್ (Begur Inspector Krishna Kumar) ಆಗಮಿಸಿದ್ದು, ಲಾನ್ ನಲ್ಲಿ ಕುಳಿತಿದ್ದ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ಪ್ರಾಥಮಿಕ ಹಂತದ ತನಿಖೆ ನಡೆಸಲಾಗಿತ್ತು.
ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Chitradurga Renukaswamy murder case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿರುವುದರಿಂದ ಬುಧವಾರ ಮಧ್ಯಾಹ್ನ ಬಳಿಕ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ದರ್ಶನ್ ನ್ಯಾಯಾಂಗ ಬಂಧನ ಅವಧಿ ಬುಧವಾರ ಮುಕ್ತಾಯವಾಗಲಿದ್ದು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಬಳಿಕ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.
ಜೈಲು ಸಿಬ್ಬಂದಿ ಜೊತೆ ಅಳಲು ತೋಡಿಕೊಂಡ ದರ್ಶನ್
ಈಗಾಗಲೇ ಸೆರೆಮನೆ ವಾಸದ ಕಷ್ಟ ಅನುಭವಿಸಿರುವ ನಟ ದರ್ಶನ್ ಈ ಕುರಿತು ಜೈಲು ಸಿಬ್ಬಂದಿ ಜೊತೆ ದುಃಖ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬೇಕಿತ್ತಾ ನಂಗೆ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅಭಿನಯದ ಚೌಕ ಚಿತ್ರವನ್ನು ಈ ಹಿಂದೆ ಬಳ್ಳಾರಿ ಜೈಲಿನಲ್ಲಿಯೇ ಚಿತ್ರೀಕರಣ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಖೈದಿಗಳ ಜೊತೆ ನಟ ಸಹಜ ಮಾತುಕತೆ ನಡೆಸಿದ್ದರು. ಬಳ್ಳಾರಿ ಜೈಲಿನ ಕಷ್ಟಗಳು, ಅಲ್ಲಿನ ವಾತಾವರಣದ ಬಗ್ಗೆ ಅಲ್ಲಿನ ಖೈದಿಗಳಿಂದ ತಿಳಿದುಕೊಂಡಿರುವ ದರ್ಶನ್ ಗೆ ಈಗ ತಾನೇ ಆ ಜೈಲಿಗೆ ಖೈದಿಯಾಗಿ ವರ್ಗಾವಣೆಯಾಗುತ್ತಿರುವುದು ಆತಂಕ ಹೆಚ್ಚಿಸಿದೆ ಎನ್ನಲಾಗಿದೆ.
ರಾಜಾತಿಥ್ಯ ವಿಚಾರಣೆ
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ರಾಜಾತಿಥ್ಯ ವಿಚಾರಣೆ ಪ್ರಾರಂಬವಾಡಿದೆ. ವಿಡಿಯೋ ಕಾಲ್ ಬಗ್ಗೆಯೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಹುಳಿಮಾವು ಇನ್ಸ್ ಪೆಕ್ಟರ್ ಕುಮಾರಸ್ವಾಮಿ ವಿಚಾರಣೆ ನಡೆಸಿದ್ದು, ಈ ವೇಳೆ ಮೊಬೈಲ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ದರ್ಶನ್ ತಿಳಿಸಿದ್ದಾರೆ.
ನನ್ನ ಪಾಡಿಗೆ ನಾನು ನನ್ನ ಕೊಠಡಿಯಲ್ಲಿ ಕುಳಿತಿದ್ದೆ. ಏಕಾಏಕಿ ನನ್ನ ಕೊಠಡಿಗೆ ಒರ್ವ ವ್ಯಕ್ತಿ ಬರುತ್ತಾನೆ. ಬಾಸ್ ನಿಮ್ಮ ಅಭಿಮಾನಿ ಬಾಸ್ ಪ್ಲೀಸ್ ಒಮ್ಮೆ ಮಾತಾಡಿ ಅಂದ್ರು. ಅಭಿಮಾನಿ ಅಲ್ವಾ ಅಂತ ನಾನು ಊಟ ಆಯ್ತಾ ಅಂದೆ. ಹೇಗಿದ್ದೀರಾ ಬಾಸ್ ಅಂದ ನಾನು ಆರಾಮಾಗಿ ಇದ್ದೀನಿ ಅಂದೆ. ಅದು ಬಿಟ್ಟರೇ ನನಗೂ ಆ ವಿಡಿಯೋ ಕಾಲ್ ಗೂ ಸಂಬಂಧ ಇಲ್ಲ. ಮೊಬೈಲ್ ತಗೊಂಡು ಬಂದ ವ್ಯಕ್ತಿ ರೌಡಿಶೀಟರ್ ಅನ್ನೋದು ನನಗೆ ಗೊತ್ತಿಲ್ಲ. ನಾನು ಜೈಲಿನಲ್ಲಿ ಯಾವುದೇ ಮೊಬೈಲ್ ಬಳಕೆ ಮಾಡ್ತಾ ಇಲ್ಲ. ಫೋನ್ ನಲ್ಲಿ ಮಾತನಾಡಿದ ವ್ಯಕ್ತಿಯೂ ಯಾರು ಅನ್ನೋದು ಗೊತ್ತಿಲ್ಲ. ಬಹುಶ ಯಾವ ದಿನ ಮಾತನಾಡಿದ್ದು ಅಂತ ಸರಿಯಾಗಿ ಗೊತ್ತಿಲ್ಲ. ಸುಮಾರು 10- 15 ದಿನಗಳ ಹಿಂದೆ ಇರಬಹುದು ಎಂದು ವಿಚಾರಣೆ ವೇಳೆ ದರ್ಶನ್ ತಿಳಿಸಿದ್ದಾರೆ.
ದರ್ಶನ್ ಹೇಳಿಕೆ ದಾಖಲಿಸಿರುವ ಇನ್ಸ್ ಪೆಕ್ಟರ್ ಬುಧವಾರ ಮತ್ತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣೆ ನಡೆಸಲಿದ್ದಾರೆ. ಅವಶ್ಯಕತೆ ಇದ್ದರೆ ತನಿಖೆ ಭಾಗವಾಗಿ ಮತ್ತೆ ಬುಧವಾರ ಕೂಡ ದರ್ಶನ್ ವಿಚಾರಣೆ ನಡೆಯಲಿದೆ.
ಸಿಗರೇಟ್ ಸೇದಿದ ಪ್ರಕರಣ
ಲಾನ್ ನಲ್ಲಿ ಸಿಗರೇಟ್ ಸೇದಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ ದರ್ಶನ್, ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಅದನ್ನು ನಾನು ನಿತ್ಯ ನೋಡುತ್ತಿದ್ದೆ. ಅಂದು ಕೂಡ ನನ್ನ ಪಾಡಿಗೆ ಸಿಗರೇಟ್ ಸೇದುತ್ತಾ ಕ್ರಿಕೆಟ್ ಆಡೋದನ್ನು ನೋಡುತ್ತಿದ್ದೆ. ಈ ವೇಳೆ ನಾಗ ಮತ್ತೆ ಆತನ ಸ್ನೇಹಿತ ಬಂದ. ನಾನು ಸಿಗರೇಟ್ ಸೇದುತ್ತಾ ಅವರ ಬಳಿ ಬಂದು ಕುಳಿತಿದ್ದೇನೆ ಅಷ್ಟೆ. ಇದರ ಹಿಂದೆ ಯಾವ ಉದ್ದೇಶ ಕೂಡ ಇರಲಿಲ್ಲ. ಅವರ ಜೊತೆ ಮಾತುಕತೆ ಮಾಡುವ ಉದ್ದೇಶ ಕೂಡ ಇರಲಿಲ್ಲ ಎಂದು ಠಾಣಾಧಿಕಾರಿ ಮುಂದೆ ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದಾರೆ.
ಬಳ್ಳಾರಿ ಜೈಲಿಗೆ ಶಿಫ್ಟ್
ದರ್ಶನ್ ಗೆ ರಾಜಾಥಿತ್ಯ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ದರ್ಶನ್ ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದಂತೆ ಬುಧವಾರ ಮಧ್ಯಾಹ್ನದ ಅನಂತರ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ೩ ಗಂಟೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಹೊರತರುವ ಸಾಧ್ಯತೆ ಇದ್ದು, ಈಗಾಗಲೆ ದರ್ಶನ್ ವಿರುದ್ದ ದಾಖಲಾಗಿರುವ ಎಫ್ಐಆರ್ ಗಳ ವಿಚಾರಣೆ ಮಂಗಳವಾರದಿಂದಲೇ ನಡೆಯುತ್ತಿದೆ. ಎರಡು ಎಫ್ ಐ ಆರ್ ನಲ್ಲಿ ದರ್ಶನ್ ಹೆಸರಿದ್ದು, ಸ್ಥಳ ಮಹಜರು ಹಾಗೂ ಆರೋಪಿಗಳ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಬದಲಾಗಲಿದೆ ದರ್ಶನ್ ಖೈದಿ ಸಂಖ್ಯೆ 6106
ಬಾರಿ ಟ್ರೆಂಡ್ ಆಗಿದ್ದ ನಟ ದರ್ಶನ್ ವಿಚಾರಣಾಧಿನ ಖೈದಿ ನಂಬರ್ ಮತ್ತೆ ಬದಲಾಗುವ ಸಾಧ್ಯತೆ ಇದೆ. 6106 ಖೈದಿ ನಂಬರ್ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ನೀಡಲಾಗಿತ್ತು. ಈಗ ಬಳ್ಳಾರಿಗೆ ಶಿಫ್ಟ್ ಆಗುತ್ತಿರುವುದರಿಂದ ನಟ ದರ್ಶನ್ ಖೈದಿ ನಂಬರ್ ಬದಲಾಗಲಿದೆ.
ನಟ ದರ್ಶನ್ ಅಭಿಮಾನಿಗಳು 6106 ನಂಬರ್ ಟ್ರೆಂಡ್ ಮಾಡಿಕೊಂಡಿದ್ದರು. ಕೆಲವು ಅಭಿಮಾನಿಗಳು ತಮ್ಮ ವಾಹನಗಳ ಮೇಲೆ ನಂಬರ್ ಹಾಕಿಸಿಕೊಂಡಿದ್ದರು. ಮಗುವಿನ ಪೋಟೋ ಶೂಟ್ ನಲ್ಲೂ ಕೈದಿ ನಂಬರ್ ಬಳಸಿದ್ದರು.
ಬಳ್ಳಾರಿ ಜೈಲಿಗೆ ಸೇರಿದ ಬಳಿಕ ನಟ ದರ್ಶನ್ ಗೆ ಹೊಸ ಖೈದಿ ನಂಬರ್ ಅನ್ನು ಬಳ್ಳಾರಿ ಜೈಲಿನ ಅಧಿಕಾರಿಗಳು ನೀಡಲಿದ್ದಾರೆ.
ಇದನ್ನೂ ಓದಿ: Actor Darshan: ಇನ್ಮುಂದೆ ಬಳ್ಳಾರಿ ಜೈಲಿನಲ್ಲಿ ಮುದ್ದೆ ಮುರಿಯುವ ನಟ ದರ್ಶನ್
ಬಳ್ಳಾರಿ ಖೈದಿಗಳಂತೆಯೇ ದರ್ಶನ್‌ಗೂ ವಿಚಾರಣಾಧೀನ ಖೈದಿ ಸಂಖ್ಯೆ ( under crime prisoner) ನೀಡಲಾಗುತ್ತದೆ. ಹೀಗಾಗಿ ದರ್ಶನ್ ಖೈದಿ ನಂಬರ್ ಬದಲಾವಣೆ ಯಾಗುವುದು ಖಚಿತ. ಬಳ್ಳಾರಿ ಜೈಲಿನಲ್ಲಿ ಮೂರು ಸಂಖ್ಯೆಯ ಖೈದಿ ನಂಬರ್ ನೀಡಲು ಸಿದ್ದತೆ ನಡೆಸಲಾಗಿದೆ. ಜೈಲ್ ಗೆ ಸೇರಿದ ಬಳಿಕ ದರ್ಶನ್ ಗೆ ಹೊಸ ಖೈದಿ ಸಂಖ್ಯೆ ಸಿಗಲಿದೆ. ಖೈದಿ ಸಂಖ್ಯೆ ನೀಡಿದ ಬಳಿಕ ಜೈಲು ರೂಂ ನೀಡಲಾಗುತ್ತದೆ. ಸಮಾನ್ಯ ಖೈದಿಯಂತೆ ಇಲ್ಲಿ ದರ್ಶನ್ ನನ್ನು ನೋಡಿಕೊಳ್ಳಲಾಗುತ್ತದೆ.