ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahahra) ಜೈಲಿನಲ್ಲಿರುವ ನಟ ದರ್ಶನ್ (Actor Darshan), ಜೈಲಿನೊಳಗೇ ಐಷಾರಾಮಿ ಜೀವನ ನಡೆಸಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ (viral video, viral photo) ಆಗಿರುವ ಬೆನ್ನಲ್ಲೇ, ಜೈಲಿನ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ (Home Minister G Parameshwara) ಈ ಕುರಿತು ಹೇಳಿಕೆ ನೀಡಿದ್ದಾರೆ.
ನಿನ್ನೆ ಸಂಜೆ 4.30ಕ್ಕೆ ಸುದ್ದಿ ಬಂತು. ಈ ಕುರಿತು ರಾತ್ರಿ 1 ಗಂಟೆವರೆಗೂ ಆಂತರಿಕ ತನಿಖೆ ನಡೆಸಲಾಗಿದೆ. ಜೈಲಿನಲ್ಲಿ ದರ್ಶನ್ ಮತ್ತು ಅವರ ಸ್ನೇಹಿತರ ಜೊತೆ ಟೀ ಕುಡಿಯುವ ಫೋಟೋ ವೈರಲ್ ಆಗಿದೆ. ಈ ಕುರಿತು 7 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಶರಣ ಬಸವ ಅಮೀನಗಡ, ಪ್ರಭು, ತಿಪ್ಪೇಸ್ವಾಮಿ, ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್, ಶ್ರೀಕಾಂತ್ ತಲವಾರ್, ಬಸಪ್ಪ ತೇಲಿ ಇವರನ್ನು ಅಮಾನತು ಮಾಡಿದ್ದೇವೆ ಎಂದು ಗೃಹ ಸಚಿವರು ತಿಳಿಸಿದರು.
ಇದು ಹೇಗೆ ಸಾಧ್ಯವಾಯಿತು ಎಂದು ವರದಿ ಕೇಳಿದ್ದೇನೆ. ಈ 7 ಜನ ಭಾಗಿಯಾಗಿದ್ದಾರೆ ಅಂತ ವರದಿ ಬಂದ ಬಳಿಕ ಅವರ ಮೇಲೆ ಕ್ರಮ ಆಗಿದೆ. ಜೈಲ್ ಸೂಪರಿಂಟೆಂಡೆಂಟ್ ಅವರನ್ನು ಶಿಫ್ಟ್ ಮಾಡುತ್ತೇವೆ. ಇಂತಹ ಘಟನೆ ನಡೆಯಬಾರದು. ಪದೇ ಪದೆ ಈ ರೀತಿ ಆಗಬಾರದು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ತಪ್ಪು ಮಾಡಿದ್ದರೂ ಅವರ ವಿರುದ್ಧ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ನುಡಿದರು.
ಎಲ್ಲಾ ಜೈಲುಗಳಲ್ಲಿ ಜಾಮರ್, ಕ್ಯಾಮರಾ ಹಾಕಿದರೂ ಹೀಗೆ ಆಗೋದು ಸರಿಯಲ್ಲ. ತನಿಖೆ ಬಳಿಕ ಫೋನ್ ಎಲ್ಲಿಂದ ಬಂತು, ಸಿಗರೇಟ್ ಹೇಗೆ ಬಂತು ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಜೈಲಿನಲ್ಲಿ 24 ಗಂಟೆ ಮಾನಿಟರ್ ನಡೆಯುತ್ತಿರುತ್ತದೆ. ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರ ಆಗಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ನಾಮಕಾವಸ್ಥೆಗಷ್ಟೇ ಜೈಲು!
ಆರೋಪಿ ದರ್ಶನ್ ನಾಮಕಾವಸ್ಥೆಗಷ್ಟೇ ಜೈಲಿನಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲೇ ಆತನಿಗೆ ಎಲ್ಲಾ ಸೌಲಭ್ಯ ಸಿಗುತ್ತಿದೆ ಎಂದು ಗೊತ್ತಾಗಿದೆ. ಜೈಲಿನ ಅಧಿಕಾರಿಗಳು, ರೌಡಿಗಳಿಂದಲೇ ದರ್ಶನ್‌ಗೆ ಎಲ್ಲಾ ರೀತಿ ವ್ಯವಸ್ಥೆ ಆಗುತ್ತಿದೆ. ಸಿಗರೇಟ್ ಮಾತ್ರವಲ್ಲ ಬೇಕಾದ ಎಲ್ಲಾ ವಸ್ತುಗಳೂ ದರ್ಶನ್‌ಗೆ ಸಿಗುತ್ತಿದೆ. ಯಾವ ಊಟ ಎಲ್ಲಿಂದ ಬೇಕು ಅನ್ನುತ್ತಾನೋ ಅಲ್ಲಿಂದಲೇ ಸಪ್ಲೈ ಆಗುತ್ತಿದೆಯಂತೆ.
ಮನೆ ಊಟ ಮಾತ್ರವಲ್ಲ, ಫೇಮಸ್ ಮಿಲ್ಟ್ರಿ ಹೋಟೆಲ್‌ನಿಂದಲೇ ಬಿರಿಯಾನಿ ಒದಗಿಸಲಾಗುತ್ತಿದೆ. ಬನಶಂಕರಿಯ ಶಿವಾಜಿ ಮಿಲ್ಟ್ರಿ ಹೋಟೆಲ್‌ನಿಂದಲೇ ದರ್ಶನ್‌ಗೆ ಬಿರಿಯಾನಿ ಹೋಗುತ್ತಿದೆ. ಜೈಲಿನಲ್ಲಿರೋ ನಟೋರಿಯಸ್ ಕೈದಿಗಳ ಜೊತೆ ದರ್ಶನ್ ಎಣ್ಣೆ ಪಾರ್ಟಿ ಮಾಡುತ್ತಿದ್ದಾನೆ. ಪ್ರತಿದಿನ ದರ್ಶನ್ ಇರುವ ಹೈ ಸೆಕ್ಯೂರಿಟಿ ಬ್ಯಾರಕ್‌ನಲ್ಲಿಯೇ ಪಾರ್ಟಿ ನಡೆಯುತ್ತಿದೆ. ಈ ಪಾರ್ಟಿಯಲ್ಲಿ ರೌಡಿಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ, ಬೇಕರಿ ರಘು, ಆಪ್ತ ನಾಗರಾಜ್, ಪವನ್ ಭಾಗಿಯಾಗುತ್ತಿದ್ದಾರೆ ಎಂದು ಗೊತ್ತಾಗಿದೆ. ಇದೆಲ್ಲವನ್ನೂ ಈಗ ವೈರಲ್ ಆಗಿರುವ ಫೋಟೋ ಹಾಗೂ ವಿಡಿಯೋ ಪುಷ್ಟೀಕರಿಸಿವೆ.
ಇದನ್ನೂ ಓದಿ: Actor Darshan: ರೌಡಿಶೀಟರ್ ಮಗನ ಜೊತೆ ಜೈಲಿನಿಂದ ವಿಡಿಯೋ ಕಾಲ್; ತನಿಖೆಗೆ ಗೃಹ ಸಚಿವರ ಸೂಚನೆ