ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ 12 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ನಟ ದರ್ಶನ್ (Actor Darshan) ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಿಂದ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದಾರೆ. ಇದರಿಂದ ದರ್ಶನ್ ಮುಂದೆ ಏನು ಮಾಡಲಿದ್ದಾರೆ, ಅವರ ಮುಂದಿರುವ ಕಾನೂನು ಹೋರಾಟದ ಆಯ್ಕೆಗಳೇನು ಎಂಬ ಮಾಹಿತಿ ಇಲ್ಲಿದೆ.
ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ 2011ರಲ್ಲಿ ದರ್ಶನ್ 28 ದಿನ ಜೈಲು ಪಾಲಾಗಿದ್ದರು. ಅಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು ನಿರಾಕರಣೆಗೊಂಡ ಬಳಿಕ, ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಇದೀಗ 13 ವರ್ಷಗಳ ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲಿಗೆ ಹೋಗಿದ್ದಾರೆ.
ನಟ ದರ್ಶನ್‌ಗೆ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇರುವುದರಿಂದ ಪಾರದರ್ಶಕವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ಈ ಬಾರಿ ಖಡಕ್ ನಿರ್ಧಾರ ತೆಗೆದುಕೊಂಡಿದೆ. ಪ್ರಕರಣದಲ್ಲಿ ಯಾರೂ ಒತ್ತಡ ಹಾಕಬೇಡಿ ಎಂದು ಕೂಡ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಪೊಲೀಸರು ಅಗತ್ಯ ಸಾಕ್ಷ್ಯ ಸಂಗ್ರಹಣೆ ಮಾಡುತ್ತಿದ್ದು, ಕೋರ್ಟ್‌ನಲ್ಲಿ ವಕೀಲರು ಸಮರ್ಥ ವಾದ ಮಂಡಿಸುತ್ತಿದ್ದಾರೆ. ಹೀಗಾಗಿ ಆರೋಪಿಗಳೆಲ್ಲಾ ಪರಪ್ಪನ ಅಗ್ರಹಾರ ಸೇರಿದ್ದಾರೆ.
ಇದನ್ನೂ ಓದಿ | Actress Ramya: ದರ್ಶನ್, ಪ್ರಜ್ವಲ್, ಸೂರಜ್, ಯಡಿಯೂರಪ್ಪ ಹೆಸರು ಉಲ್ಲೇಖಿಸಿ ಮತ್ತೆ ಕಿಡಿ ಕಾರಿದ ರಮ್ಯಾ; ಪೋಸ್ಟ್‌ನಲ್ಲಿ ಏನಿದೆ?
ಮುಂದೆ ದರ್ಶನ್ ಏನು ಮಾಡಬಹುದು?
- ಎಫ್ಐಆರ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದು, ಅಲ್ಲದೇ ಜಾಮೀನು ಕೋರಿ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಸತ್ರ ನ್ಯಾಯಲಯದಲ್ಲಿ ಜಾಮೀನು ಅರ್ಜಿ ಪುರಸ್ಕಾರ ಮಾಡದಿದ್ದರೆ, ಹೈಕೋರ್ಟ್ ಮೊರೆ ಹೋಗಬಹುದು.
- ಮೃತ ರೇಣುಕಾಸ್ವಾಮಿ ಕುಟುಂಬ ಸಂಪರ್ಕ ಮಾಡಬಹುದು, ಅವರನ್ನು ಮನವೊಲಿಸಿ ಕೇಸ್ ವೀಕ್ ಮಾಡಬಹುದು. ಇದರಲ್ಲಿ ನಾನು ಪ್ರಮುಖ ಆರೋಪಿ ಅಲ್ಲ ಅಂತ ಎಫ್ಐಆರ್ನಿಂದ ಹೆಸರು ಕೈಬಿಡುವ ಕೆಲಸ ಮಾಡಬಹುದು.
- ನಾನು ಕರೆಸಿದ್ದು ನಿಜ, ಆದರೆ ಕೊಲೆ ಮಾಡಿದ್ದು ನನಗೆ ಗೊತ್ತಿಲ್ಲ ಎಂದು ಹೇಳಿ ಚಾರ್ಜ್ ಶೀಟ್ನಲ್ಲಿ ಆರೋಪಿ ನಂಬರ್ ಬದಲಿಸಲು ಪ್ಲ್ಯಾನ್ ಮಾಡಬಹುದು. ಈಗ ಆರೋಪಿ 1 ಮತ್ತು 2 ಇಬ್ಬರು ಸಹ ಬಚಾವಗಲು ಇತರೆ ಆರೋಪಿಗಳನ್ನು ಬುಕ್ ಮಾಡುವ ಪ್ಲ್ಯಾನ್ ಮಾಡಬಹುದು.
- ಚಾರ್ಜ್ ಶೀಟ್ ಮೂರು ತಿಂಗಳ ಒಳಗೆ ಹಾಕಬೇಕು, ಆದರೆ ಕೇಸ್ ತೀವ್ರತೆ ಕಡಿಮೆ ಮಾಡಲು ಚಾರ್ಜ್ ಶೀಟ್ ಹಾಕುವುದನ್ನು ಪೊಲೀಸರಿಗೆ ಒತ್ತಡ ಹಾಕಿ ಮುಂದೂಡಬಹುದು. ಕೇಸ್ ಅನ್ನು ಒಂದು ವರ್ಷ ಕಾಲ ಎಳೆದಾಡಿಸಿ ಕೇಸ್ನಿಂದ ಪಾರಾಗುವ ಪ್ಲ್ಯಾನ್ ಮಾಡಬಹುದು.
ದರ್ಶನ್ ಸೇರಿ ನಾಲ್ವರು ಸ್ಟೇಷನ್‌ನಿಂದ ಪರಪ್ಪನ ಅಗ್ರಹಾರ ಜೈಲಿಗೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಸೇರಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹನ್ನೆರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್, ಪ್ರದೋಶ್ ಮತ್ತು ಧನರಾಜ್‌ನನ್ನು 24ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ಇದರಿಂದ 13 ವರ್ಷಗಳ ನಂತರ ನಟ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ.
ರಾಜ್ಯ ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ವಿಚಾರಣೆ ವೇಳೆ ನಿಮಗೆ ಕಸ್ಟಡಿಯಲ್ಲಿ ಏನಾದರೂ ತೊಂದರೆ ಆಯ್ತಾ ಎಂದು ಆರೋಪಿಗಳನ್ನು ಜಡ್ಜ್ ಪ್ರಶ್ನಿಸಿದರು. ಇಲ್ಲ ಸ್ವಾಮಿ, ಯಾವುದೇ ತೊಂದರೆ ಆಗಿಲ್ಲ ಎಂದು ಆರೋಪಿಗಳು ಉತ್ತರಿಸಿದರು. ನಂತರ ರಿಮ್ಯಾಂಡ್ ಅರ್ಜಿಯನ್ನು ಎಸ್‌ಪಿಪಿ ಪ್ರಸನ್ನ ಕುಮಾರ್ ನೀಡಿದರು. ಈ ಹಿಂದೆ ರಂಗನಾಥ್ ರೆಡ್ಡಿ ದರ್ಶನ್ ಪರ ವಕೀಲರಾಗಿದ್ದರು, ಈಗ ಪ್ರವೀಣ್ ತಿಮ್ಮಯ್ಯ ಹೊಸದಾಗಿ ವಕಾಲತ್ತು ವಹಿಸಿದ್ದರು.
ಇದನ್ನೂ ಓದಿ | Actor Darshan: ಬದುಕು ನಾಯಿ ಪಾಡು ಆಗ್ಬಿಟ್ಟಿದೆ ಎಂದಿದ್ದ ದರ್ಶನ್; ʻದಚ್ಚುʼ ಏಳು ಬೀಳು ಕುರಿತು ಗಣೇಶ್ ಕಾಸರಗೋಡು ಹೇಳಿದ್ದು ಹೀಗೆ!
ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರೋದಕ್ಕೆ ಸೂಕ್ತ ಸಾಕ್ಷ್ಯಗಳಿವೆ. ಈ ನಾಲ್ಕು ಮಂದಿ ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ನೆಲದ ಕಾನೂನಿನ ಮೇಲೆ ಕಿಂಚಿತ್ತು ಗೌರವ ಇಲ್ಲ. ಎ1 ಪ್ರಚೋದನೆಗೆ ದರ್ಶನ್ ಮತ್ತು ಟೀಂ ಒಳಗಾಗಿ ಕೃತ್ಯ ಮಾಡಿದೆ. ಎಲ್ಲರಿಗೂ ಕೊಲ್ಲುವ ಸಮಾನ ಉದ್ದೇಶವೂ ಕಂಡು ಬಂದಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿನ್ನು ಬಳಕೆ ಮಾಡಿದ್ದಾರೆ ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ಆರೋಪಿಗಳನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಜಡ್ಜ್ ಆದೇಶ ನೀಡಿದರು.