ಬೆಂಗಳೂರು: ಇಂದು ಮುಂಜಾನೆ ನಿಧನರಾದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (Actor Dwarakish death) ಕನ್ನಡ ಚಿತ್ರರಂಗದಲ್ಲಿ (Kannada Film industry) ಹಲವು ಹೊಸತುಗಳನ್ನು ತಂದವರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವರ ನಿಧನದ ಸುಳ್ಳು ಸುದ್ದಿಯೂ (Fake news) ಈ ಹಿಂದೊಮ್ಮೆ ಹರಡಿತ್ತು. ಆಗ ಅವರು “ನಾನಿನ್ನೂ ಬದುಕಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದ್ದರು. ಇಂದಿನ ಸುದ್ದಿ ಮಾತ್ರ ವಿಷಾದಕರವಾಗಿ ನಿಜವೇ ಆಗಿದೆ.
ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ರಾಜನಂತೆ ಮೆರೆದವರು. ಹಲವು ನಾಯಕ ನಟರು ನಿರ್ಮಾಣ- ನಿರ್ದೇಶನಕ್ಕೆ ಇವರಿಗೆ ಕಾಲ್‌ಶೀಟ್ ನೀಡಿ ಕಾಯುತ್ತಿದ್ದರು. ಇಂಥ ʼಪ್ರಚಂಡ ಕುಳ್ಳʼನ ಬಗ್ಗೆ ನೀವರಿಯದ ಹಲವು ಸಂಗತಿಗಳು ಇಲ್ಲಿವೆ.
1) ನಿರ್ಮಾಪಕರಾಗಿ ಹಲವು ಕಲಾವಿದರನ್ನು ಚಿತ್ರರಂಗ ಪರಿಚಯಸಿದ್ದಾರೆ. ಶ್ರುತಿ ಎಂಬ ಅದ್ಭುತ ನಟಿಯನ್ನು ಚಿತ್ರರಂಗಕ್ಕೆ ಕರೆತಂದವರೇ ದ್ವಾರಕೀಶ್. 1990ರಲ್ಲಿ ದ್ವಾರಕೀಶ್ ʼಪುದುವಸಂತಂʼ ತಮಿಳು ಚಿತ್ರವನ್ನು ʼಶ್ರುತಿʼ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ರಿಮೇಕ್ ಮಾಡಿದರು. ಇದರಲ್ಲಿ ಶ್ರುತಿ ಎಂಬ ಹೊಸ ನಟಿಯನ್ನು ಕನ್ನಡಕ್ಕೆ ಪರಿಚಯಿಸಿದರು. ಅಲ್ಲಿಂದ ಮುಂದೆ ಶ್ರುತಿ ಕನ್ನಡ ಚಿತ್ರರಂಗದ ಇತಿಹಾಸವಾದರು.
2) 1964ರಲ್ಲಿ ʼವೀರ ಸಂಕಲ್ಪ’ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಟ್ಟ ದ್ವಾರಕೀಶ್ ಮೊದಲು ಹಾಸ್ಯ ಕಲಾವಿದರಾಗಿ ಮಿಂಚಿದರು. ನಂತರ ನಿರ್ದೇಶನ ಹಾಗೂ ನಿರ್ಮಾಣಕ್ಕಿಳಿದರು. 1966ರಲ್ಲಿ ʼಮಮತೆಯ ಬಂಧನʼ ಸಿನಿಮಾವನ್ನು ಇನ್ನಿಬ್ಬರು ನಿರ್ಮಾಪಕರ ಜೊತೆ ಸೇರಿ ನಿರ್ಮಿಸಿದರು. 1985ರಲ್ಲಿ ʼನೀ ಬರೆದ ಕಾದಂಬರಿʼ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ದ್ವಾರಕೀಶ್ ಅವರು 19 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
3) 1973ರಲ್ಲಿ ʼಕೌಬಾಯ್ ಕುಳ್ಳʼ ಎಂಬ ಚಿತ್ರವನ್ನು ನಿರ್ಮಿಸಿ ನಟಿಸಿದರು. ಇದು ಕನ್ನಡದಲ್ಲಿ ಮೊದಮೊದಲ ಕೌಬಾಯ್ ಮಾದರಿಯ ಚಿತ್ರಗಳಲ್ಲಿ ಒಂದು. ದ್ವಾರಕೀಶ್ ಸ್ವತಃ ಇದರಲ್ಲಿ ಹೀರೋ ಆಗಿ ನಟಿಸಿದರು.
4) 1996ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಯಿತು. ವರನಟ ರಾಜ್ ಜೊತೆಗೆ ನಾಲ್ಕಾರು ಸಿನಿಮಾಗಳನ್ನು ಮಾಡಿ, ನಂತರ ಅವರು ರಾಜ್ ಕ್ಯಾಂಪ್‌ನಿಂದ ಬೇರೆಯಾದರು. ವಿಷ್ಣುವರ್ಧನ್ ಅವರಲ್ಲಿ ತಮ್ಮ ಜೊತೆಗಾರನನ್ನು ಕಂಡುಕೊಂಡರು.
5) ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ- ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ ವಿಷ್ಣು ಅಭಿನಯದ ಬಹುತೇಕ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು. ಮಧ್ಯೆ ಒಮ್ಮೆ ಇಬ್ಬರೂ ವಿರಸದಿಂದ ಬೇರ್ಪಟ್ಟು, ಮತ್ತೆ 2004ರಲ್ಲಿ ʼಆಪ್ತಮಿತ್ರʼ ಚಿತ್ರದಲ್ಲಿ ಒಂದಾದರು.
6) ʼಆಪ್ತಮಿತ್ರʼಕ್ಕೂ ಮೊದಲು ಹಲವು ಫಿಲಂಗಳನ್ನು ಮಾಡಿ ಕೈ ಸುಟ್ಟುಕೊಂಡಿದ್ದ ದ್ವಾರಕೀಶ್ ಅವರ ವಿನಂತಿಯ ಮೇರೆಗೆ, ಅವರಿಂದ ಒಂದು ರೂಪಾಯಿಯನ್ನೂ ಪಡೆಯದೆ ವಿಷ್ಣುವರ್ಧನ್ ಆಪ್ತಮಿತ್ರದಲ್ಲಿ ನಟಿಸಿದರು. ಅದರ ಯಶಸ್ಸಿನಿಂದ ದ್ವಾರಕೀಶ್ ಹಳೆಯ ಸಾಲಗಳನ್ನು ತೀರಿಸಿಕೊಂಡರು.
7) 1992ರಲ್ಲಿ ಶಶಿಕುಮಾರ್ ಅವರ ಜೊತೆಯಾಗಿ ʼಹೊಸ ಕಳ್ಳ ಹಳೆ ಕುಳ್ಳʼ ಎಂಬ ಸಿನಿಮಾ ಮಾಡಿ, ವಿಷ್ಣುವರ್ಧನ್ ಜೊತೆಗೆ ತಾವು ಮಾಡಿದ ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ಯತ್ನಿಸಿದರು. ಅದು ಮಿಶ್ರಫಲ ನೀಡಿತು. ಶಶಿಕುಮಾರ್ ಬೇಡಿಕೆಯ ಹೀರೋ ಆದರು.
8) ಕನ್ನಡದಲ್ಲಿ ತನಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂದು ಕೋಪಿಸಿಕೊಂಡು ಚೆನ್ನೈಗೆ ತೆರಳಿ ಸ್ವಲ್ಪ ಕಾಲ ಅಲ್ಲಿದ್ದರು. ಆ ಸಂದರ್ಭದಲ್ಲಿ 1983ರಲ್ಲಿ ತಮಿಳಿನಲ್ಲಿ ʼಅಡುತ ವಯಸುʼ ಎಂಬ ಭಾರಿ ಚಿತ್ರವನ್ನು ನಿರ್ಮಾಣ ಮಾಡಿದರು. ಇದರಲ್ಲಿ ರಜನಿಕಾಂತ್ ಹೀರೋ ಆಗಿದ್ದರೆ, ಶ್ರೀದೇವಿ ಹೀರೋಯಿನ್ ಆಗಿದ್ದರು. ಸಿಲ್ಕ್ ಸ್ಮಿತಾ ಕೂಡ ಇದರಲ್ಲಿದ್ದರು.
9) 1983ರಲ್ಲಿ ಗಿರೀಶ್ ಕಾರ್ನಾಡ್ ಅವರನ್ನು ಲೀಡ್ ರೋಲ್‌ನಲ್ಲಿ ಹಾಕಿಕೊಂಡು ಸಂಗೀತ ಪ್ರಧಾನವಾದ “ಆನಂದ ಭೈರವಿ” ಎಂಬ ಸಿನಿಮಾ ಮಾಡಿದರು. ಕಾಂಚನ, ಮಾಳವಿಕ, ರಾಜೇಶ್, ಮಹಾಲಕ್ಷ್ಮಿ ತಾರಾಗಣದಲ್ಲಿದ್ದರು. ಇದೊಂದು ಸದಭಿರುಚಿಯ, ಸಾಹಿತ್ಯ- ಸಂಗೀತಪ್ರಧಾನ ಸಿನಿಮಾ ಆಗಿ ಹೆಸರು ಮಾಡಿತು.
10) 1987ರಲ್ಲಿ ವಿನೋದ್ ರಾಜ್ ಅವರನ್ನು ಹೀರೋ ಆಗಿ ಮಡಲು ಪಣತೊಟ್ಟು, ಅವರಿಗಾಗಿ ʼಡ್ಯಾನ್ಸ್ ರಾಜಾ ಡ್ಯಾನ್ಸ್ʼ ಎಂಬ ಸಿನಿಮಾ ಮಾಡಿದರು. ಈ ಫಿಲಂ ಇಂಡಸ್ಟ್ರಿ ಹಾಗೂ ಚಿತ್ರರಸಿಕರ ಗಮನ ಸೆಳೆಯಿತಾದರೂ, ವಿನೋದ್ ರಾಜ್ ಅದೃಷ್ಟ ಇದರಿಂದ ಏನೂ ಬದಲಾಗಲಿಲ್ಲ.
11) 1986ರಲ್ಲಿ ʼಆಫ್ರಿಕಾದಲ್ಲಿ ಶೀಲಾʼ ಎಂಬ ಹಾಲಿವುಡ್ ಮಾದರಿಯ ಸಾಹಸ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿದರು. ಇದು ಆಫ್ರಿಕಾದಲ್ಲಿ ಶೂಟಿಂಗ್ ಆದ ಕನ್ನಡದ ಮೊದಲ ಚಿತ್ರ ಎನಿಸಿಕೊಂಡಿತು. ಬಪ್ಪಿ ಲಾಹರಿ ಇದಕ್ಕೆ ಸಂಗೀತ ನೀಡಿದ್ದರು. ಇದನ್ನೇ ನಾನಾ ಪಾಟೇಕರ್ ಅವರನ್ನು ಹಾಕಿಕೊಂಡು ಹಿಂದಿಯಲ್ಲಿ ರಿಮೇಕ್ ಮಾಡಿದರು.
12) ಸದಾ ಹೊಸಬಗೆಯ ಫಿಲಂಗಳನ್ನು ಮಾಡುವ ಕಡೆಗೆ ಅವರ ಮನಸ್ಸು ಇತ್ತು. ʼದ್ವಾರಕೀಶ್ ಚಿತ್ರ’ ನಿರ್ಮಾಣ ಸಂಸ್ಥೆ ಕಟ್ಟಿಕೊಂಡು ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ರವಿಚಮದ್ರನ್‌ರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದಾರೆ.
ಇದನ್ನೂ ಓದಿ: Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ