Site icon Vistara News

ವಿಸ್ತಾರ Explainer | 5G ತಂತ್ರಜ್ಞಾನದಿಂದ ಅನುಕೂಲ ಅಪಾರ, ಅನನುಕೂಲ ಅತ್ಯಲ್ಪ

5G Technology

ದೇಶದ ಟೆಲಿಕಾಂ ವಲಯದಲ್ಲಿ ೫ಜಿ ಕ್ರಾಂತಿಯ ಹವಾ ಶೀಘ್ರದಲ್ಲಿಯೇ ಶುರುವಾಗಲಿದೆ. ಈ ತಂತ್ರಜ್ಞಾನದಲ್ಲಿ ಯಾವುದೇ ಹೊಸ ಬಗೆಯ ರಿಸ್ಕ್‌ ಇಲ್ಲ. ಜತೆಗೆ ಅನನುಕೂಲಕ್ಕಿಂತ ಅನುಕೂಲವೇ ಹೆಚ್ಚು ಎನ್ನುತ್ತಾರೆ ಸೈಬರ್ ತಜ್ಞ ಫಣೀಂದರ್ ಬಿ. ಎನ್. ಅವರು ಮುಂಬರುವ ೫ಜಿ ಕ್ರಾಂತಿಯ ಬಗ್ಗೆ ವಿಸ್ತಾರ ನ್ಯೂಸ್‌ ಜತೆ ಸಮಗ್ರವಾಗಿ ವಿವರಿಸಿದ್ದಾರೆ.

ಸಂದರ್ಶನ: ಅಭಿಷೇಕ್‌ ಬಿ. ವಿ, ಬೆಂಗಳೂರು

ಪ್ರಶ್ನೆ: 5 ಜಿ ರೆವೆಲ್ಯೂಷನ್‌ ಎಂದರೇನು?

ಫಣೀಂದರ್‌ ಬಿ.ಎನ್‌, ಸೈಬರ್‌ ತಜ್ಞ

ಪದಕೋಶದ ಭಾಷೆಯಲ್ಲಿ ಹೇಳಬೇಕು ಅಂದ್ರೆ 5ಜಿ ಅನ್ನೋದು 5ನೇ ಜನರೇಶನ್ ಮೊಬೈಲ್ ನೆಟ್‌ವರ್ಕಿಂಗ್. ಈಗಿನ ಕಾಲದಲ್ಲಿ ಮನೆಯಲ್ಲಿರೋ ಪ್ರತಿಯೊಬ್ಬರೂ ಮೊಬೈಲ್ ಫೋನ್‌ಗಳನ್ನು ಉಪಯೋಗಿಸುತ್ತಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ನಾನಾ ಮಾದರಿಯ ಮೊಬೈಲ್‌ಗಳನ್ನು ಹಾಗು ನೆಟ್‌ವರ್ಕ್‌ಗಳನ್ನು ಗಮನಿಸಿದ್ದೇವೆ, ಉಪಯೋಗಿಸುತ್ತಿದ್ದೇವೆ. ಮೊದಲಿನ ಮೊಬೈಲ್‌ಗಳಲ್ಲಿ ನೆಟ್‌ವರ್ಕ್ ಸಿಗ್ನಲ್ ನೋಡುತ್ತಿದ್ದಾಗ, 2ಜಿ – 3ಜಿ – 4ಜಿ ಅಂತ ತೋರಿಸಲಾಗ್ತಿತ್ತು. ಈಗ ಕಣ್ಣಿಗೆ ಕಾಣುವ ಬದಲಾವಣೆ ಏನೆಂದರೆ ಮೊಬೈಲ್‌ಗಳಲ್ಲಿ 4ಜಿ ಬದಲಾಗಿ 5ಜಿ ಅಂತ ತೋರಿಸಲಾಗುತ್ತದೆ. ಪ್ರತಿ 10 ವರ್ಷಗಳಿಗೊಮ್ಮೆ ಜನರೇಶನ್ ಬದಲಾಗುತ್ತದೆ. ಅದೇ ರೀತಿ ಈಗ 5ಜಿ ಬಂದಿದ್ದು, ಮುಂದಿನ 10 ವರ್ಷದಲ್ಲಿ 6ಜಿ ಕೂಡ ಬರಲಿದೆ. 1980ರಲ್ಲಿ ಪ್ರಪ್ರಥಮ ಬಾರಿಗೆ ಇಂಟರ್‌ನೆಟ್ ಸೇವೆ ಬಂದಾಗ ಅದು 1ನೇ ಜನರೇಶನ್ ಆಗಿತ್ತು. 1990ರಲ್ಲಿ 2ಜಿ ಚಾಲ್ತಿಗೆ ಬಂದಿತ್ತು. ಈಗ 5ಜಿ ಚಾಲ್ತಿಗೆ ಬರುವ ಮುನ್ನವೇ 6ಜಿ ಬಗ್ಗೆ ಸಂಶೋಧನೆ ಹಾಗೂ ಅಧ್ಯಯನ ನಡೆಯುತ್ತಿದೆ ಅನ್ನೋದು ಸತ್ಯ.

ಪ್ರಶ್ನೆ : 5 ಜಿ ಕ್ರಾಂತಿ ಎಂದರೇನು?

ಮಾರುಕಟ್ಟೆಗೆ ಯಾವುದೇ ಹೊಸ ಪದಾರ್ಥ, ವಸ್ತು, ಸಾಫ್ಟ್‌ವೇರ್, ಹಾರ್ಡ್‌ವೇರ್ ಏನೇ ಬಂದ್ರೂ ಜನರು ಅದನ್ನು ಉಪಯೋಗಿಸಲು ಕಾತರರಾಗಿರುತ್ತಾರೆ. ದೈನಂದಿನ ಕೆಲಸಗಳು ಹಾಗು ವ್ಯವಹಾರಗಳ ಮೇಲೆ ಹೊಸ ಬಳಕೆಯ ವಸ್ತು ಯಾವ ರೀತಿಯ ಪರಿಣಾಮ ಬೀರುತ್ತೆ ಅಂತ ಕಾದು ನೋಡ್ತಾರೆ. ಅದೇ ರೀತಿ ಜನರು 5ಜಿ ತಂತ್ರಜ್ಞಾನವನ್ನು ಈಗ ಎದುರು ನೋಡ್ತಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ಎಲ್ಲವೂ ಫಾಸ್ಟ್ ಆಗಿದ್ದು, ಈ ಫಾಸ್ಟ್ ಜಮಾನಕ್ಕೆ ಬೇಕಿರೋ ಹೆಚ್ಚಿನ ವೇಗವನ್ನು 5ಜಿ ನೀಡಲಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಪೋಷಕರು ತಮ್ಮ ಕೆಲಸಕ್ಕೆ, ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕೆ ಆನ್‌ಲೈನ್ ಮೊರೆಹೋಗಿದ್ದೆವು. ಎಲ್ಲರ ಮನೆಯಲ್ಲೂ ವೈಫೈ, ರೌಟರ್ ಇರದ ಕಾರಣ ಮೊಬೈಲ್‌ನಲ್ಲಿದ್ದ 4ಜಿ ಇಂಟರ್ನೆಟ್ ಸೌಲಭ್ಯ ಬಳಸುತ್ತಿದ್ದೆವು. 4ಜಿ ಸದ್ಯದ ಮಟ್ಟಿಗೆ ನಮ್ಮೆಲ್ಲರ ಅಗತ್ಯಕ್ಕೆ ಸಾಥ್ ನೀಡಿತ್ತು ಅನ್ನೋದು ಎಷ್ಟು ಸತ್ಯವೋ, ಮುಂದಿನ ದಿನಗಳಲ್ಲಿ ನಮಗೆ ಮತ್ತಷ್ಟು ವೇಗವಾಗಿರೋ ಸೌಲಭ್ಯಗಳು ಬೇಕು ಅನ್ನೋದು ಕೂಡ ಅಷ್ಟೇ ಸತ್ಯ. ಹಿಂದಿನವರಿಗಿಂತ ನಾವು ಹೆಚ್ಚಿನ ತಂತ್ರಜ್ಞಾನ ಬಳಸುತ್ತಿದ್ದೇವೆ. ನಮಗಿಂದ ನಮ್ಮ ಮುಂದಿನ ತಲೆಮಾರು ಹೆಚ್ಚಿನ ತಂತ್ರಜ್ಞಾನ ಬಳಸಲಿದೆ. ಇದೇ ರೀತಿ ಮುಂದುವರಿಯುದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಹೆಚ್ಚು ವೇಗವಾಗಿರೋ ಇಂಟರ್‌ನೆಟ್ ಮುಂದಿನ ದಿನಗಳಲ್ಲಿ ಸಾಮಾನ್ಯವಾಗಲಿದೆ.

ಪ್ರಶ್ನೆ: 5 ಜಿ ತಂತ್ರಜ್ಞಾನದಿಂದ ಏನು ಅನುಕೂಲ? ಇದರಿಂದ ಅನನುಕೂಲ ಇಲ್ಲ ಅನ್ನೋದೇ ಮೊದಲನೇ ಅನುಕೂಲ. ಒಂದಿಷ್ಟು ತಂತ್ರಜ್ಞಾನಗಳನ್ನು ಬಳಸೋದ್ರಿಂದ ರಿಸ್ಕ್ ಕೂಡ ಹೆಚ್ಚಿರುತ್ತದೆ. ಅದೇ ರೀತಿ 5ಜಿ ಬಳಸುವುದರಿಂದ ಹೊಸದಾಗಿ ಯಾವುದೇ ರಿಸ್ಕ್ ನಾವು ತೆಗೆದುಕೊಳ್ಳಬೇಕು ಅಂತೇನಿಲ್ಲ. ಜನರು ಹಿಂದೆ ಮುಂದೆ ನೋಡದೇ ಮೊಬೈಲ್‌ನಲ್ಲಿ ಯಾವುದೋ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಮೋಸ ಹೋಗ್ತಿರೋದು ಮೊದಲಿಂದ ಇದೆ. ಇದೇ ರೀತಿಯ ರಿಸ್ಕ್ 5ಜಿಯಲ್ಲೂ ಮುಂದುವರಿಯಲಿದೆಯೇ ಹೊರತು 5ಜಿಯಿಂದ ಹೊಸ ರಿಸ್ಕ್ ಅಂತ ಯಾವುದೂ ಕಾಣುತ್ತಿಲ್ಲ. ನಮ್ಮ ಅನುಕೂಲಗಳಿಗೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದ್ದು, ಇದನ್ನು ಸರಿಯಾಗಿ ಬಳಕೆ ಮಾಡೋದು ಜನರಿಗೆ ಬಿಟ್ಟಿದ್ದು. 2ಜಿ – 3ಜಿ – 4ಜಿ ಉಪಯೋಗಿಸುತ್ತಿದ್ದಾಗ ಏನು ರಿಸ್ಕ್ ಇತ್ತೋ, ಅದೇ ರಿಸ್ಕ್ 5ಜಿ ಬಳಕೆಯಲ್ಲೂ ಮುಂದುವರಿಯುತ್ತದೆ.

ಪ್ರಶ್ನೆ : 5 ಜಿ ತಂತ್ರಜ್ಞಾನ ಯಾಕೆ ಏಕಾಏಕಿ ಸದ್ದು ಮಾಡಲು ಆರಂಭಿಸಿದೆ? ಕೇಂದ್ರ ಸರ್ಕಾರ 5ಜಿ ಸ್ಪೆಕ್ಟ್ರಂ ಹರಾಜಿಗೆ ಹಾಕುತ್ತಿದೆ. ಆ ಹರಾಜಿನಲ್ಲಿ ಯಾರು ಸ್ಪೆಕ್ಟ್ರಂ ಖರೀದಿ ಮಾಡ್ತಾರೆ ಅನ್ನೋದೇ ಎಲ್ಲರಿಗೂ ಕುತೂಹಲಕಾರಿಯಾಗಿದೆ. ಖರೀದಿ ಮಾಡಿದವರ ಕೈಯಲ್ಲಿ ಇಡೀ ದೇಶದ 5ಜಿ ಸ್ಪೆಕ್ಟ್ರಂ ಇರುತ್ತೆ. ಅವರು ಅದಕ್ಕೆ ಹೇಗೆ ದರ ನಿಗದಿ ಮಾಡ್ತಾರೆ? ಎಲ್ಲೆಲ್ಲಿ ಉಚಿತವಾಗಿ ಅಥವಾ ಕಡಿಮೆ ದರಕ್ಕೆ ನೀಡ್ತಾರೆ? ಅದರ ಬಳಕೆಯನ್ನು ಹೇಗೆ ನಿಭಾಯಿಸಲಿದ್ದಾರೆ ಅನ್ನೋ ಕುತೂಹಲದಿಂದ ಇದರ ಬಗ್ಗೆ ತುಂಬಾ ಸೆನ್ಸೇಶನ್ ಕ್ರಿಯೇಟ್ ಆಗಿದೆ. ಹೊಸ ತಂತ್ರಜ್ಞಾನ ಬರ್ತಿದೆ ಅನ್ನೋ ಕುತೂಹಲದ ಜೊತೆಗೆ ಇದರಿಂದ ದುಷ್ಪರಿಣಾಮ ಇರಬಹುದು ಅಂತ ಮಾತುಕತೆಗಳಿಂದ ಈ ವಿಚಾರ ಮುನ್ನೆಲೆಗೆ ಬಂದಿದೆ.

ಪ್ರಶ್ನೆ : ಸದ್ಯಕ್ಕೆ 5 ಜಿ ಉಪಯೋಗಿಸಲಾಗ್ತಿದ್ಯಲ್ಲಾ? ಇದರಲ್ಲಿ ಹೊಸತನ ಏನಿದೆ? ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿ ಈಗ ಯಾರೇ 5ಜಿ ಉಪಯೋಗಿಸುತ್ತಿದ್ದರೂ ಅದು ಟ್ರಯಲ್ ಬೇಸಿಸ್‌ನಲ್ಲಿ ನೀಡುತ್ತಿರುವ ಸೌಲಭ್ಯವೇ ಹೊರತು ಅದು ಪೂರ್ಣಪ್ರಮಾಣದ ಸೇವೆಯಲ್ಲ. 5 ಜಿ ತಂತ್ರಜ್ಞಾನ ಅಳವಡಿಕೆಯಲ್ಲಿ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು? ಅದನ್ನು ಯಾವ ರೀತಿ ಸರಿಪಡಿಸಬೇಕು? ಮುಂದಿರುವ ಸವಾಲುಗಳೇನು? ಇಂತಹ ವಿಚಾರಗಳ ಅಧ್ಯಯನಕ್ಕಾಗಿ ಈಗ ಪ್ರಾಯೋಗಿಕವಾಗಿ ನೀಡಲಾಗಿರಬಹುದು. ಯಾವಾಗ ಸಾಧಾರಣ ವ್ಯಕ್ತಿಗೂ ಈ ಉನ್ನತ ಸೌಲಭ್ಯ ಸಿಗಲಿದೆಯೊ, ಆಗ ಮಾತ್ರ 5ಜಿ ಪೂರ್ಣಪ್ರಮಾಣದಲ್ಲಿ ನೀಡಲಾಗುತ್ತಿದೆ ಎನ್ನಬಹುದು.

ಪ್ರಶ್ನೆ : 5 ಜಿ ತಂತ್ರಜ್ಞಾನದಿಂದ ಯಾವ ಕ್ಷೇತ್ರಕ್ಕೆ ತುಂಬಾ ಉಪಯೋಗ ಸಿಗಲಿದೆ?

5ಜಿ ತಂತ್ರಜ್ಞಾನ ಚಾಲ್ತಿಗೆ ಬರುವುದರಿಂದ ಮೆಡಿಕಲ್ ಕ್ಷೇತ್ರಕ್ಕೆ ಅತ್ಯಂತ ಹೆಚ್ಚಿನ ಸೌಲಭ್ಯ ಸಿಗಲಿದೆ. ಆರೋಗ್ಯ ಕ್ಷೇತ್ರಕ್ಕೆ ಇದರ ಅವಶ್ಯಕತೆ ತುಂಬಾ ಇದೆ ಅನ್ನೋದು ನನ್ನ ಅನಿಸಿಕೆ. ಮೊಬೈಲ್ ಫೋನ್ ಉಪಯೋಗಿಸಿಕೊಂಡು 30 ಮೈಲು ದೂರದಿಂದ ವಿಡಿಯೋ ಕಾಲ್ ಮುಖಾಂತರ ಆಪರೇಶನ್‌ ಮಾಡಿರುವ ಉದಾಹರಣೆಯನ್ನು ನಾವು ಚೀನಾದಲ್ಲಿ ನೋಡಿದ್ದೇವೆ. ಅದೇ ರೀತಿ 5ಜಿ ಟೆಕ್ನಾಲಿಜಿ ಪೂರ್ಣಪ್ರಮಾಣದಲ್ಲಿ ಚಾಲ್ತಿಗೆ ಬಂದ್ರೆ, ಅದರಿಂದ ವೈದ್ಯರು ಮತ್ತೊಂದು ಆಯಾಮವನ್ನು ಮೆಡಿಕಲ್ ಇಂಡಸ್ಟ್ರಿಯಲ್ಲಿ ಕಾಣಬಹುದು ಎಂಬುದು ನನ್ನ ಅಭಿಪ್ರಾಯ. ಇದರ ಜೊತೆಜೊತೆಗೆ ಮೊಬೈಲ್ ಗೇಮಿಂಗ್ ಇಂಡಸ್ಟ್ರಿಗೆ ತುಂಬಾ ಅನುಕೂಲವಾಗಲಿದೆ. ಇದರ ಜೊತೆ ಕ್ಲೌಡ್ ಸ್ಟೋರೇಜ್ ಬಳಕೆಗೆ ಪರಿಣಾಮಕಾರಿಯಾಗಿರಲಿದೆ. ದೊಡ್ಡ ಫೈಲ್‌ಗಳನ್ನು ಕ್ಲೌಡ್‌ಗೆ ಅಪ್‌ಲೋಡ್ ಹಾಗು ಡೌನ್‌ಲೋಡ್ ಮಾಡೋದು ಇನ್ಮುಂದೆ ಮತ್ತಷ್ಟು ಶೀಘ್ರಗತಿಯಲ್ಲಿ ಆಗಲಿದೆ. ಕ್ಲೌಡ್ ಅನ್ನು ದೊಡ್ಡ ದೊಡ್ಡ ಕಂಪನಿಗಳು ಉಪಯೋಗಿಸುತ್ತಿದ್ದು, ಅವರಿಗೆ ಅತಿ ಹೆಚ್ಚು ಸಹಾಯವಾಗಲಿದೆ.

ಪ್ರಶ್ನೆ: 4 ಜಿ ಹಾಗು 5 ಜಿ ವೇಗದಲ್ಲಿ ಏನು ಬದಲಾವಣೆಯನ್ನು ಕಾಣಬಹುದು? 5 ಜಿ ತಂತ್ರಜ್ಞಾನದಲ್ಲಿ 20 ಜಿಬಿಪಿಎಸ್ ವೇಗವನ್ನು ಡೌನ್‌ಲೋಡ್ ಮಾಡಲು ಹಾಗು 100 ಎಂಬಿಪಿಎಸ್ ಮೊಬೈಲ್ ಬಳಕೆಯ ಸ್ಪೀಡ್ ಕಾಣಬಹುದು. 4ಜಿ ಡೇಟಾ ಬಳಸೋವಾಗ ಒಂದು ಚದರ ಮೀಟರ್‌ನಲ್ಲಿ ಸುಮಾರು 1000 ಮೊಬೈಲ್‌ಗಳಿಗೆ ನೆಟ್‌ವರ್ಕ್ ನೀಡುತ್ತದೆ. ಆದರೆ 5 ಜಿ ತಂತ್ರಜ್ಞಾನ 1 ಚದರ ಮೀಟರ್‌ಗೆ 50 ಲಕ್ಷ ಯಂತ್ರಗಳಿಗೆ ನೆಟ್‌ವರ್ಕ್‌ ನೀಡುವ ಸಾಮರ್ಥ್ಯ ಹೊಂದಿದೆ. 5ಜಿಯಲ್ಲಿನ ಒಂದು ಸಣ್ಣ ಸಮಸ್ಯೆ ಏನಂದ್ರೆ ಒಳಾಂಗಣದಲ್ಲಿ 5ಜಿ ಬಳಸೋವಾಗ ಸಣ್ಣ ಪ್ರಮಾಣದಲ್ಲಿ ಮಳೆ ಬಂದ್ರೂ ಕೂಡ 5ಜಿ ಸ್ಪೀಡ್‌ನಲ್ಲಿ ವ್ಯತ್ಯಯ ಉಂಟಾಗಲಿದೆ.

ಪ್ರಶ್ನೆ: ಮನುಷ್ಯ, ಪ್ರಾಣಿ, ಪಕ್ಷಿಗಳ ಮೇಲೆ ಇದರ ಪ್ರಭಾವ? ಪ್ರಪಂಚದ ಹಲವೆಡೆ ಈ 5ಜಿ ಈಗಾಗಲೇ ಬಳಕೆಯಲ್ಲಿದೆ. ಇದು ಬಳಸಲು ಯೋಗ್ಯವೇ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಅಧ್ಯಯನ ಹಾಗೂ ಸಂಶೋಧನೆ ನಡೆಸಿದೆ. ಮಾತ್ರವಲ್ಲದೆ 5 ಜಿಯಿಂದ ಮನುಷ್ಯ, ಪ್ರಾಣಿ ಹಾಗೂ ಪಕ್ಷಿಗಳ ಆರೋಗ್ಯದ ಮೇಲೆ ಆಗಬಹುದಾದ ಪರಿಣಾಮವನ್ನು ಸೂಕ್ಷವಾಗಿ ಪರಿಶೀಲಿಸಿದೆ. ಈ ಅಧ್ಯಯನದಲ್ಲಿ 5ಜಿಯಿಂದ ಸಮಸ್ಯೆ ಉಂಟಾಗುತ್ತದೆ ಎಂದು ಎಲ್ಲಿಯೂ ಪ್ರಕಟಿಸಿಲ್ಲ. ಈ ಕಾರಣದಿಂದ ಆರೋಗ್ಯ ಸಂಸ್ಥೆಯ ಮಾಹಿತಿಯನ್ನು ನಂಬಿದ್ದು, ಅದೇ ಸತ್ಯ ಎಂದು ಭಾವಿಸಿದ್ದೇವೆ.

Exit mobile version