ನ್ಯೂಯಾರ್ಕ್: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಬಂಧನ ಕುರಿತ ಮಾಡಿದ ಟೀಕೆಗಾಗಿ ಭಾರತವು (MEA) ನಿನ್ನೆ ಅಮೆರಿಕದ ಹಿರಿಯ ರಾಜತಾಂತ್ರಿಕರನ್ನು (US Diplomat) ಕರೆಸಿ ಪ್ರತಿಭಟಿಸಿದ್ದು, ಇಂದು ಮತ್ತೆ ಅಮೆರಿಕ ಈ ಬಗ್ಗೆ ಪ್ರತಿಹೇಳಿಕೆ ನೀಡಿದೆ. ಈ ಬಾರಿ ಕೇಜ್ರಿವಾಲ್ ಬಂಧನದ ಜೊತೆಗೆ, ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ನಿರ್ಬಂಧದ (Congress bank account seizure) ಬಗ್ಗೆಯೂ ಅಡ್ಡಮಾತು ಆಡಿದೆ.
“ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧನ ಸೇರಿದಂತೆ ನಡೆದಿರುವ ಕ್ರಮಗಳನ್ನು ನಾವು ನಿಕಟವಾಗಿ ಅನುಸರಿಸುತ್ತಿದ್ದೇವೆ” ಎಂದು ಯುಎಸ್ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. “ಅಮೆರಿಕ ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಉತ್ತೇಜಿಸುತ್ತದೆ. ಮತ್ತು ಯಾರೂ ಈ ಕ್ರಮಗಳನ್ನು ಆಕ್ಷೇಪಿಸಬಾರದು ಎಂದು ನಾವು ಭಾವಿಸುವುದಿಲ್ಲ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿರುವ ಬಗ್ಗೆ ಮತ್ತು ದೆಹಲಿಯಲ್ಲಿ ಅಮೆರಿಕದ ಹಂಗಾಮಿ ಡೆಪ್ಯುಟಿ ಚೀಫ್ ಆಫ್ ಮಿಷನ್ ಗ್ಲೋರಿಯಾ ಬರ್ಬೆನಾ ಅವರನ್ನು ಕರೆಸಿ ವಿದೇಶಾಂಗ ಇಲಾಖೆ ಮಾತನಾಡಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಮಿಲ್ಲರ್ ಅವರು ಪ್ರತಿಕ್ರಿಯಿಸಿದರು.
“ಮುಂಬರುವ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸವಾಲಾಗುವ ರೀತಿಯಲ್ಲಿ ತೆರಿಗೆ ಅಧಿಕಾರಿಗಳು ಅವರ ಕೆಲವು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಗಳ ಬಗ್ಗೆ ನಮಗೆ ಮಾಹಿತಿ ಇದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ನಾವು ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಪ್ರೋತ್ಸಾಹಿಸುತ್ತೇವೆ” ಎಂದಿದ್ದಾರೆ.
“ರಾಯಭಾರಿಯನ್ನು ಕರೆಸಿರುವ ಬಗ್ಗೆ, ನಾನು ಯಾವುದೇ ಖಾಸಗಿ ರಾಜತಾಂತ್ರಿಕ ಸಂಭಾಷಣೆಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಆದರೆ ನಾವು ಸಾರ್ವಜನಿಕವಾಗಿ ಹೇಳಬಹುದಾದದ್ದು ನಾನು ಇಲ್ಲಿಂದ ಹೇಳಿದ್ದೇನೆ. ನಾವು ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಪ್ರೋತ್ಸಾಹಿಸುತ್ತೇವೆ. ಯಾರೂ ಅದನ್ನು ಆಕ್ಷೇಪಿಸಬಾರದು ಎಂದು ಭಾವಿಸಬೇಡಿ. ನಾವು ಅದೇ ವಿಷಯವನ್ನು ಖಾಸಗಿಯಾಗಿಯೂ ಸ್ಪಷ್ಟಪಡಿಸುತ್ತೇವೆ,” ಎಂದು ಮಿಲ್ಲರ್ ಹೇಳಿದರು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಅಮೆರಿಕದ ಹಂಗಾಮಿ ಡೆಪ್ಯುಟಿ ಚೀಫ್ ಆಫ್ ಮಿಷನ್ ಗ್ಲೋರಿಯಾ ಬರ್ಬೆನಾ ಅವರನ್ನು ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ಕಚೇರಿಗೆ ನಿನ್ನೆ ಕರೆಸಿದ್ದರು. ಕೇಜ್ರಿವಾಲ್ ಅವರ ಬಂಧನದ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕಾರಿಯ ಹೇಳಿಕೆಗಳ ವಿರುದ್ಧ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದ್ದರು. ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಭೆ ನಡೆದಿತ್ತು.
ದಿಲ್ಲಿಯ ಅಬಕಾರಿ ನೀತಿ ಜಾರಿ ಸಂದರ್ಭದಲ್ಲಿ ನಡೆದಿರುವ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆಗೆ ಇತ್ಯಾದಿಗಳಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಕೇಜ್ರಿವಾಲ್ ಒಂಬತ್ತು ಬಾರಿ ಇಡಿ ಸಮನ್ಸ್‌ಗಳನ್ನು ತಿರಸ್ಕರಿಸಿದ್ದರು. ಆದ್ದರಿಂದ, ಕೇಜ್ರಿವಾಲ್ ಅವರಿಗೆ ಯಾವುದೇ ಜಾಮೀನು ರಕ್ಷಣೆ ನೀಡಲು ದಿಲ್ಲಿ ಹೈಕೋರ್ಟ್ ನಿರಾಕರಿಸಿತ್ತು.
ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ನೀತಿಯನ್ನು ನಂತರ ರದ್ದುಗೊಳಿಸಲಾಯಿತು.
ನಿನ್ನೆ ಅಮೆರಿಕದ ಟೀಕೆಗೆ ಉತ್ತರಿಸಿದ್ದ ಭಾರತ ವಿದೇಶಾಂಗ ಇಲಾಖೆ, “ನಮ್ಮಲ್ಲಿನ ಕೆಲವು ಕಾನೂನು ಪ್ರಕ್ರಿಯೆಗಳ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್‌ನ ವಕ್ತಾರರ ಹೇಳಿಕೆಗಳಿಗೆ ದೆಹಲಿ ತೀವ್ರ ಆಕ್ಷೇಪಣೆಯನ್ನು ಹೊಂದಿದೆ” ಎಂದು ಹೇಳಿದೆ.
“ರಾಜತಾಂತ್ರಿಕತೆಯಲ್ಲಿ, ರಾಜ್ಯಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸಬೇಕು ಎಂದು ನಿರೀಕ್ಷಿಸಲಾಗಿದೆ. ಈ ಜವಾಬ್ದಾರಿಯು ಪ್ರಜಾಪ್ರಭುತ್ವಗಳ ವಿಷಯದಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಇಲ್ಲದಿದ್ದರೆ ಅನಾರೋಗ್ಯಕರ ಪೂರ್ವನಿದರ್ಶನಗಳು ಸೃಷ್ಟಿಯಾಗಬಹುದು” ಎಂದು ಸಚಿವಾಲಯ ಹೇಳಿದೆ.
“ಭಾರತದ ಕಾನೂನು ಪ್ರಕ್ರಿಯೆಗಳು ಸ್ವತಂತ್ರ ನ್ಯಾಯಾಂಗವನ್ನು ಆಧರಿಸಿವೆ. ವಸ್ತುನಿಷ್ಠ ಮತ್ತು ಸಮಯೋಚಿತ ಫಲಿತಾಂಶಗಳಿಗೆ ಬದ್ಧವಾಗಿದೆ. ಅದರ ಮೇಲೆ ನಮ್ಮ ನಿರೀಕ್ಷೆಗಳನ್ನು ಹೇರುವುದು ಅನಗತ್ಯ” ಎಂದು MEA ಹೇಳಿದೆ.
ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗಿಲ್ಲ ಮಧ್ಯಂತರ ರಿಲೀಫ್; ಇನ್ನೂ 7 ದಿನ ಜೈಲೇ ಗತಿ