ಶಿಮ್ಲಾ: ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ಸೋಲು ಕಂಡ ಹಿಮಾಚಲ ಪ್ರದೇಶ (Himachal Pradesh) ಕಾಂಗ್ರೆಸ್ ಸರ್ಕಾರ ಪತನದತ್ತ ಜಾರಿದೆ. ವಿಧಾನಸಭೆಯಲ್ಲಿ (Vidhan Sabha) ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ನೇತೃತ್ವದ ಸರ್ಕಾರದ ಬಲಾಬಲ ಪರೀಕ್ಷೆಗೆ (No-Trust Vote) ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ನಾಯಕ ಹಾಗೂ ಶಾಸಕರು ಇಂದು ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. 26 ಕಾಂಗ್ರೆಸ್ ಶಾಸಕರು ಸಿಎಂ ನಾಯಕತ್ವದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ (Himachal Politics) ಎಂದು ಬಿಜೆಪಿ ಹೇಳಿದೆ.
ರಾಜ್ಯದ ಏಕೈಕ ರಾಜ್ಯಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯವಾದ ಒಂದು ದಿನದ ನಂತರ ಇದು ಘಟಿಸಿದೆ. ಕಾಂಗ್ರೆಸ್ ಶಾಸಕರ ಅಡ್ಡ ಮತದಾನ ಮತ್ತು ಲಾಟರಿ ಡ್ರಾ ಫಲಿತಾಂಶ ಬಿಜೆಪಿಗೆ ಗೆಲುವು ತಂದಿದೆ. “ನಮ್ಮ ಅವಕಾಶಗಳು ತೀರಾ ಕಡಿಮೆ ಎಂದು ತೋರಿದಾಗಲೂ ನಾವು ಗೆಲುವು ಸಾಧಿಸಿದ್ದೇವೆ. ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಪ್ರಸ್ತುತ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಉಳಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ,” ಎಂದು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಭೇಟಿಯಾದ ಬಳಿಕ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಹೇಳಿದರು.
ಒಟ್ಟು 26 ಶಾಸಕರು ಸಿಎಂ ಸುಖು ವಿರುದ್ಧ ಅಸಮಾಧಾನಗೊಂಡಿದ್ದಾರೆ ಮತ್ತು ಸಿಎಂ ಬದಲಾವಣೆಯನ್ನೂ ಬಯಸಿದ್ದಾರೆ. ಅಡ್ಡ ಮತದಾನ ಮಾಡಿದ ಶಾಸಕರೇ ಇದನ್ನು ಬಹಿರಂಗವಾಗಿ ಹೇಳಿದ್ದು, ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದ ಬುಡ ಅಲುಗಾಡುತ್ತಿದೆ. ಸುಖು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಮತ್ತೊಬ್ಬ ಬಲಿಷ್ಠ ನಾಯಕನ್ನು ಸಿಎಂ ಸ್ಥಾನಕ್ಕೆ ಕೂರಿಸುವ ಸಾಧ್ಯತೆಯೂ ಇದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಹರಿಯಾಣ ಸಿಎಂ ಭೂಪಿಂದ್ರ ಹೂಡಾರನ್ನು ಕಳುಹಿಸಿ, ಅಸಮಾಧಾನಿತರ ಜತೆ ಮಾತುಕತೆ ನಡೆಸಲು ಸೂಚಿಸಿದೆ. ಸುಖುವನ್ನು ಬದಲಾಯಿಸದ ಹೊರತು ನಮ್ಮ ಅಸಮಾಧಾನ ತಗ್ಗುವುದಿಲ್ಲ ಎಂದು ಭಿನ್ನಮತೀಯರು ಹೇಳಿದ್ದಾರೆ ಎಂದು ವರದಿಯಾಗಿದೆ.
ಇಂದು ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿದೆ ಎಂಬ ಚರ್ಚೆ ನಡೆದಿದೆ. ಜೈರಾಮ್ ಠಾಕೂರ್ ಅವರು 2022ರವರೆಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ರಾಜ್ಯ ಬಜೆಟ್ ಅನ್ನು ಅಂಗೀಕರಿಸಲು ಧ್ವನಿಮತದ ಬದಲು ಮತಗಳ ವಿಭಜನೆಗೆ ಅವರು ಒತ್ತಾಯಿಸಿದ್ದಾರೆ. ಇದನ್ನು ಅನುಮತಿಸಿದರೆ, ಮತಗಳ ವಿಭಜನೆಯು ಪ್ರತಿ ಪಕ್ಷದ ನಿಜವಾದ ಬೆಂಬಲವನ್ನು ಕಾಣಿಸಲಿದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಬಜೆಟ್ ಅಂಗೀಕಾರಕ್ಕೆ ವಿಫಲವಾದರೆ, ಸದನದಲ್ಲಿ ಬಹುಮತದ ಕೊರತೆಯನ್ನು ಅದು ಸ್ವಯಂಚಾಲಿತವಾಗಿ ಸಾಬೀತುಪಡಿಸುತ್ತದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಶಾಸಕರನ್ನು ಹೊಂದಿದ್ದು, ಅದರ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರು ಆರಾಮವಾಗಿ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಮಂಗಳವಾರ ಚುನಾವಣೆ ನಡೆದ ಸಂದರ್ಭ, ಆರು ಕಾಂಗ್ರೆಸ್ ಶಾಸಕರು ಮತ್ತು ಸರ್ಕಾರವನ್ನು ಬೆಂಬಲಿಸುವ ಮೂವರು ಸ್ವತಂತ್ರ ಶಾಸಕರು ಹರ್ಷ್ ಮಹಾಜನ್ ಪರವಾಗಿ ಮತ ಚಲಾಯಿಸಿದ್ದರು. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 25 ಸದಸ್ಯರನ್ನು ಹೊಂದಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಸದನದಲ್ಲಿ ಬಹುಮತವಿಲ್ಲ ಎಂದು ಮಹಾಜನ್ ಹೇಳಿದ್ದಾರೆ. “ಸುಖು ಸರ್ಕಾರದಿಂದ ಜನ ಅಸಮಾಧಾನಗೊಂಡಿದ್ದಾರೆ. ಒಳ್ಳೆಯ ನಾಯಕರೆಲ್ಲ ಬಿಜೆಪಿ ಸೇರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: Rajya Sabha Election Result 2024: ಬಹುಮತ ಇದ್ದರೂ ಹಿಮಾಚಲದಲ್ಲಿ ಸೋತ ಕಾಂಗ್ರೆಸ್; ಬಿಜೆಪಿ ಅಭ್ಯರ್ಥಿ ಗೆದ್ದಿದ್ದು ಹೇಗೆ?