Site icon Vistara News

KS Eshwarappa: ದೆಹಲಿಯಲ್ಲಿ ಭೇಟಿಗೆ ಸಿಗದ ಅಮಿತ್‌ ಶಾ; ಸ್ಪರ್ಧೆ ನಿಶ್ಚಿತ ಎಂದ ಈಶ್ವರಪ್ಪ

KS Eshwarappa

Amit Shah Won't Meet KS Eshwarappa In Delhi; Will Contest As Independent, Says BJP Rebel Leader

ನವದೆಹಲಿ/ಬೆಂಗಳೂರು: “ನರೇಂದ್ರ ಮೋದಿ, ಅಮಿತ್‌ ಶಾ ಅಲ್ಲ, ಬ್ರಹ್ಮ ಬಂದು ಹೇಳಿದರೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ” ಎಂದು ಬಂಡಾಯದ ಬಾವುಟ ಹಾರಿಸಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ದೆಹಲಿಗೆ ಹೋದರೂ ಬಿಕ್ಕಟ್ಟು ಶಮಗೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಅಮಿತ್‌ ಶಾ (Amit Shah) ಕರೆಯ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ದೆಹಲಿಗೆ ತೆರಳಿದ್ದು, ಬುಧವಾರ (ಮಾರ್ಚ್‌ 3) ಅಮಿತ್‌ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಇದಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಅವರು, “ಕೇಂದ್ರ ಗೃಹಸಚಿವರು ಭೇಟಿಗೆ ಸಿಕ್ಕಿಲ್ಲ. ನಾನು ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿಲ್ಲ” ಎಂದಿದ್ದಾರೆ.

“ಗೃಹ ಸಚಿವರು ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಬುಧವಾರ ದೆಹಲಿಗೆ ಬನ್ನಿ ಎಂದಿದ್ದರು. ಅದಕ್ಕಾಗಿ ನಾನು ದೆಹಲಿಗೆ ಬಂದೆ. ಆದರೆ, ದೆಹಲಿಗೆ ಬಂದ ಬಳಿಕ ಅಮಿತ್‌ ಶಾ ಅವರ ಕಚೇರಿಯಿಂದ ಫೋನ್‌ ಬಂತು. ಅಮಿತ್‌ ಶಾ ಅವರು ಸದ್ಯಕ್ಕೆ ಸಿಗುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಇದರ ಅರ್ಥ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದಾಗಿದೆ. ಬಿ.ವೈ.ರಾಘವೇಂದ್ರ ಸೋಲಬೇಕು ಎಂಬುದು ಇದರ ಅರ್ಥವಾಗಿದೆ” ಎಂಬುದಾಗಿ ಈಶ್ವರಪ್ಪ ಹೇಳಿದರು.

ಯಾರನ್ನೂ ಭೇಟಿ ಆಗುವುದಿಲ್ಲ

“ಅಮಿತ್‌ ಶಾ ಅವರು ಸಿಗದೆ ಇರಲು ಕಾರಣ ಇದೇ. ಅವರು ನನ್ನನ್ನು ಭೇಟಿಯಾಗಿದ್ದರೂ ನಾನು ಚುನಾವಣೆಯಲ್ಲಿ ನಿಲ್ಲುತ್ತಿದ್ದೆ. ಆದರೆ, ಇವತ್ತು ಅಮಿತ್‌ ಶಾ ಅವರು ಸಿಕ್ಕಿಲ್ಲ ಎನ್ನುವ ಅರ್ಥವೇ, ನಾನು ಚುನಾವಣೆಯಲ್ಲಿ ನಿಲ್ಲಬೇಕು, ರಾಘವೇಂದ್ರ ವಿರುದ್ಧ ಗೆಲ್ಲಬೇಕು ಎಂಬುದಾಗಿದೆ. ಅವರ ಆಶಯವೂ ಅದೇ ಆದ ಕಾರಣ ನನಗೆ ಇವತ್ತು ಸಿಕ್ಕಿಲ್ಲ. ಅದಕ್ಕಾಗಿ ನಾನು ವಾಪಸ್‌ ಹೋಗುತ್ತಿದ್ದೇನೆ. ಯಾರನ್ನೂ ಭೇಟಿಯಾಗುವುದಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಆಶೀರ್ವಾದದಿಂದ ಗೆಲ್ಲುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಈಶ್ವರಪ್ಪ ಸಮಾವೇಶಕ್ಕೆ ಬಂದವರಿಗೆ ಬಿರಿಯಾನಿ ಲಾಸ್; ಚುನಾವಣಾ ಲೆಕ್ಕದ ಭಯ!

ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ?

“ಬಿಜೆಪಿಯ ನಿಯಮಗಳಿಗೆ ಅನುಗುಣವಾಗಿ ನಡೆದುಕೊಂಡು ಬಂದಿದ್ದೇನೆ. ನಾನು ಶಾಸಕನಾಗಿ ನನ್ನ ಮಗನಿಗೆ ಟಿಕೆಟ್‌ ಕೇಳಿಲ್ಲ. ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಒಂದು ನೀತಿ, ನಮಗೆ ಒಂದು ನೀತಿಯೇ? ಅವರ ಮನೆಯಲ್ಲಿ ಒಬ್ಬ ಸಂಸದ, ಮತ್ತೊಬ್ಬ ಶಾಸಕ ಇದ್ದಾರೆ. ಶಾಸಕರಾದವರು ಬಿಜೆಪಿ ರಾಜ್ಯಾಧ್ಯಕ್ಷ ಬೇರೆ ಆಗಿದ್ದಾರೆ. ಇದಕ್ಕೂ ಮೊದಲು ರಾಯಣ್ಣ ಬ್ರಿಗೇಡ್‌ ಮಾಡಿದ್ದೆವು. ಬಿಎಸ್‌ವೈ ಅವರು ಬೆನ್ನುತಟ್ಟುವ ಬದಲು ಅಮಿತ್‌ ಶಾ ಅವರಿಗೆ ದೂರು ನೀಡಿದರು. ಅಮಿತ್‌ ಶಾ ಅವರ ಮಾತು ಕೇಳಿ ಸಂಘಟನೆ ನಿಲ್ಲಿಸಿದೆ. ಆದರೆ, ಈಗ ಹಿಂದಡಿ ಇಡಲ್ಲ. ಎಲ್ಲರ ಸಹಕಾರದಲ್ಲಿ ನಾನು ಚುನಾವಣೆ ಗೆದ್ದು ಮೋದಿ ಅವರ ಕೈ ಬಲಪಡಿಸುತ್ತೇನೆ” ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version