ಕಾರವಾರ: ಉತ್ತರ ಕನ್ನಡದಿಂದ (Uttara Kannada) ಸ್ಪರ್ಧೆಗೆ ಬಿಜೆಪಿ ಟಿಕೆಟ್ (BJP Ticket) ಕೈತಪ್ಪಿದ ಬೆನ್ನಲ್ಲೇ ಅನಂತಕುಮಾರ ಹೆಗಡೆ (BJP MP Anantkumar Hegde) ಅವರು ಭಾವನಾತ್ಮಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, 3 ದಶಕಗಳಿಂದ ಸೇವೆ ಸಲ್ಲಿಸಲು ಅವಕಾಶ ನೀಡಿದ ʼಜನತಾ ಜನಾರ್ದನʼರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಕುರಿತು ಹೆಗಡೆ (Anantkumar Hegde) ಅವರು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಭಾಷಣದ ಶೈಲಿಯ ಪದಪ್ರಯೋಗದಲ್ಲೇ ಸಾರ್ವಜನಿಕರಿಗೆ ಪತ್ರ ಬರೆದಿದ್ದಾರೆ.
“ಈ ಭೂಮಿಯಲ್ಲಿ ನನ್ನ ಲೌಕಿಕ ಬದುಕಿನಿಂದಾಚೆಗೂ ಒಂದು ಭವ್ಯವಾದ ಬದುಕಿದೆ ಎನಿಸಿತ್ತು. ಅಂತಹ ಬದುಕನ್ನು ನೋಡುವ ತಹತಹ ಇತ್ತು. ತಳಮಳವೂ ಇತ್ತು. ಸೋಲು ಗೆಲುವಿನ ಆತಂಕದಿಂದಾಚೆ ಜೀವನವನ್ನು ನಿತ್ಯ ಸತ್ಯವನ್ನಾಗಿಸುವ ಹಾಗೂ ಎಂದೂ ನಿಲ್ಲದ ಪ್ರವಾಹವನ್ನಾಗಿಸುವ, ಚೈತನ್ಯದ ಪೂಜೆಯನ್ನಾಗಿಸುವ ಹಂಬಲ ಕಾಡುತ್ತಿತ್ತು. ಆದರೆ, ಆರಂಭ ಎಲ್ಲಿಂದ ಎಂದು ತಿಳಿದಿರಲಿಲ್ಲ. ಜ್ಞಾನಿಗಳು, ಹಣವಂತರು, ಅಧಿಕಾರ ಇದ್ದವರು ಅವರದೇ ಆದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಆದರೆ, ಅಂತಹ ಯಾವುದೇ ಉಪಾಧಿಗಳಿಲ್ಲದ ನಾನು ಈ ಪೂಜೆಯನ್ನು ಎಲ್ಲಿಂದ, ಹೇಗೆ ಆರಂಭಿಸಲಿ ಎಂದು ಗೊತ್ತಿರಲಿಲ್ಲ” ಎಂದು ಹೆಗಡೆ ಬರೆದುಕೊಂಡಿದ್ದಾರೆ.
“ಈ ಮಧ್ಯದಲ್ಲಿ ಆರಂಭಗೊಂಡಿದ್ದು ಜನತಾ ಜನಾರ್ದನನ ಆರಾಧನೆ. ಸರಿಸುಮಾರು ಮೂವತ್ತು ವರ್ಷಗಳ ತಮ್ಮೆಲ್ಲರ ಅಪೂರ್ವ ಒಡನಾಟ, ತಾವುಗಳು ತೋರಿದ ಸ್ನೇಹ, ಪ್ರೀತಿ, ವಾತ್ಸಲ್ಯ ನಿಜಕ್ಕೂ ಭಾಷೆಗೆ ನಿಲುಕದ್ದು, ಅದು ಅದಮ್ಯ. ಯಾವುದೇ ಪೂಜೆ, ಆರಾಧನೆ, ಅದು ಎಂದಿಗೂ ಮುಗಿಯದ ಅನಂತ ಕಾಯಕ. ಈ ತಾಯ್ನೆಲದ ಪೂಜೆಯಲ್ಲಿ, ಆಕೆಯ ಸೇವೆಯಲ್ಲಿ ನನ್ನನ್ನು ನಾನು ಸಮರ್ಪಿಸಿಕೊಳ್ಳುವ ಸೌಭಾಗ್ಯ ಈ ಜನ್ಮದಲ್ಲಿ ಭಗವಂತ ಕರುಣಿಸಿದ್ದಕ್ಕೆ, ಈ ಕಣ್ಣಿಗೆ ಕಾಣದ ಆ ಅಕ್ಷಯ ಪಾದಪದ್ಮಗಳಿಗೆ ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.
“ಕಳೆದ 3 ದಶಕಗಳಿಂದ ಹಿಂದವೀ ಹಿತದಲ್ಲಿ ಸೇವೆ ಸಲ್ಲಿಸುವ ಅಪೂರ್ವ ಸಂಯೋಗ ಈ ಬದುಕಿನಲ್ಲಿ ನನಗೊಂದು ಗುರುತು ನೀಡಿದೆ. ನಿಜಕ್ಕೂ ಅಷ್ಟೇ ಸಾಕು! ಈ ಸಮಾಜ ದೇವತೆಯ ಪದತಲದಲ್ಲಿ ಹೂವಾಗುವ ಸೌಭಾಗ್ಯ ಅದೆಷ್ಟು ಜನರಿಗೆ ತಾನೇ ಸಿಕ್ಕೀತು? ಹೆತ್ತ ತಾಯೊಡಲಿದೆ, ಬದುಕು ಕೊಟ್ಟ ಕ್ಷೇತ್ರದ ಜನಮನಕ್ಕೆ ಮತ್ತೊಮ್ಮೆ, ಮಗದೊಮ್ಮೆ, ಮತ್ತೊಮ್ಮೆ ಸಾಷ್ಟಾಂಗವೆರಗುತ್ತೇನೆ. ತಮ್ಮೆಲ್ಲರ ನೆನಪಿನಲ್ಲಿ ಹೃದಯದಾಳದ ಕೃತಜ್ಞತೆಯೊಂದಿಗೆ” ಎಂದು ಅನಂತಕುಮಾರ ಹೆಗಡೆ ಬರೆದಿದ್ದಾರೆ.
1996ರಲ್ಲಿ ನಡೆದ 11ನೇ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಅನಂತ ಕುಮಾರ ಹೆಗಡೆ, ನಂತರ ಐದು ಬಾರಿ ಉತ್ತರ ಕನ್ನಡ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿದ್ದಾರೆ. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಬಿನೆಟ್‌ನಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಗಿದ್ದರು. ವಿವಾದಾತ್ಮಕ ಹಾಗೂ ತೀವ್ರ ರಾಷ್ಟ್ರೀಯವಾದಿ ಹೇಳಿಕೆಗಳಿಂದ ಅವರು ಖ್ಯಾತರಾಗಿದ್ದಾರೆ.