Site icon Vistara News

Arvind Kejriwal : ʼತಪ್ಪಾಯ್ತುʼ ಎಂದ ಕೇಜ್ರಿವಾಲ್;‌ ʼಆಯ್ತು ಬಿಡಿʼ ಎಂದ ಸುಪ್ರೀಂ ಕೋರ್ಟ್;‌ ಯಾವ ಕೇಸ್?

Arvind Kejriwal Supreme Court

ಹೊಸದಿಲ್ಲಿ: 2018ರ ಮಾನನಷ್ಟ ಮೊಕದ್ದಮೆಯೊಂದರಲ್ಲಿ (Defamation Case) ದಿಲ್ಲಿ ಮುಖ್ಯಮಂತ್ರಿ (Delhi CM) ಮತ್ತು ಎಎಪಿ ನಾಯಕ (AAP leader) ಅರವಿಂದ ಕೇಜ್ರಿವಾಲ್ (Arvind Kejriwal) ʼನನ್ನಿಂದ ಪ್ರಮಾದವಾಗಿದೆʼ ಎಂದು ಒಪ್ಪಿಕೊಂಡಿದ್ದಾರೆ. ಇದನ್ನು ಮನ್ನಿಸಿದ ಸುಪ್ರೀಂ ಕೋರ್ಟ್‌ (Supreme Court), ಕೇಜ್ರಿವಾಲ್‌ ವಿರುದ್ಧ ಯಾವುದೇ ದಂಡನೆಯ ಕ್ರಮಗಳನ್ನು ತೆಗೆದುಕೊಳ್ಳದಂತೆ ಕೆಳಗಿನ ನ್ಯಾಯಾಲಯಕ್ಕೆ ಸೂಚಿಸಿದೆ.

ಆರು ವರ್ಷ ಹಳೆಯದಾದ ಈ ಪ್ರಕರಣದಲ್ಲಿ ಕೇಜ್ರಿವಾಲ್‌, ಯೂಟ್ಯೂಬರ್ ಧ್ರುವ್ ರಾಥೀ (YouTuber Dhruv Rathee) ಅವರ ವೀಡಿಯೊ ಒಂದನ್ನು ಮರುಟ್ವೀಟ್ ಮಾಡಿದ್ದರು. ಈ ವಿಡಿಯೋ ಮಾನಹಾನಿಕರವಾಗಿದ್ದು, ಇದನ್ನು ಶೇರ್‌ ಮಾಡಿಕೊಂಡ ಕೇಜ್ರಿವಾಲ್‌ ಮಾನನಷ್ಟ ಕ್ರಮ ಕೈಗೊಳ್ಳಬೇಕು ಎಂದು ವಿಕಾಸ ಸಾಂಕೃತ್ಯಾಯನ ಎಂಬವರು ಕೋರ್ಟ್‌ಗೆ ಹೋಗಿದ್ದರು. “ವೀಡಿಯೊವನ್ನು ಮರುಟ್ವೀಟ್ ಮಾಡಿರುವುದು ನನ್ನ ಕಡೆಯಿಂದ ಆದ ತಪ್ಪು” ಎಂದು ಕೇಜ್ರಿವಾಲ್‌ ಸರ್ವೋನ್ನತ ನ್ಯಾಯಾಲಯದ ಮುಂದೆ ಒಪ್ಪಿಕೊಂಡರು.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠಕ್ಕೆ, “ಇದು ತಪ್ಪು ಎಂದು ಒಪ್ಪಿಕೊಳ್ಳಲು ನನಗೆ ಯಾವುದೇ ತೊಂದರೆ ಇಲ್ಲ” ಎಂದು ಕೇಜ್ರಿವಾಲ್ ಪರವಾಗಿ ತಿಳಿಸಿದರು. ಕೇಜ್ರಿವಾಲ್ ತಪ್ಪನ್ನು ಒಪ್ಪಿಕೊಂಡ ಮೇಲೆ ಪ್ರಕರಣವನ್ನು ಕೈಬಿಡುವಂತೆ ಪ್ರಕರಣದ ದೂರುದಾರರಿಗೆ ಸುಪ್ರೀಂ ಕೋರ್ಟ್ ಹೇಳಿದೆ. ದೂರುದಾರರ ಪರ ವಕೀಲ ರಾಘವ್ ಅವಸ್ಥಿ ಅವರು ಇದಕ್ಕೆ ಸಮ್ಮತಿಸಿದರು.

ಮೇ 2018ರ ಈ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ವಿಚಾರಣಾ ನ್ಯಾಯಾಲಯ ಕೇಜ್ರಿವಾಲ್‌ಗೆ ಸಮನ್ಸ್‌ ನೀಡಿತ್ತು. ಇದನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಅರವಿಂದ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ʼಐ ಸಪೋರ್ಟ್ ನರೇಂದ್ರ ಮೋದಿʼ ಎಂಬ X ಪೇಜ್‌ನ ಸಂಸ್ಥಾಪಕರು ಮತ್ತು ನಿರ್ವಾಹಕರು ʼಬಿಜೆಪಿ ಐಟಿ ಸೆಲ್ ಭಾಗ 2ʼನಂತೆ ವರ್ತಿಸುತ್ತಿದ್ದಾರೆ ಎಂದು 2018ರಲ್ಲಿ ಯೂಟ್ಯೂಬರ್ ಧ್ರುವ ರಾಥಿ ವ್ಯಂಗ್ಯದ ಟ್ವೀಟ್ ಮಾಡಿದ್ದರು. ಕೇಜ್ರಿವಾಲ್ ಈ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದರು. ಇದರಿಂದ ತಮಗೆ ಮಾನನಷ್ಟ ಉಂಟಾಗಿದೆ ಎಂದು ʼಐ ಸಪೋರ್ಟ್ ನರೇಂದ್ರ ಮೋದಿʼ ಖಾತೆಯ ಸಂಸ್ಥಾಪಕ ವಿಕಾಸ ಸಾಂಕೃತ್ಯಾಯನ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ 7ನೇ ಸಮನ್ಸ್‌ ನೀಡಿದ ಇ.ಡಿ; ಅರೆಸ್ಟ್‌ ಮಾಡ್ತಾರಾ?

Exit mobile version