ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಕಲಾಪ (Assembly Session) ಸೋಮವಾರದಿಂದ ಆರಂಭವಾಗಲಿದ್ದು, ಒಂಬತ್ತು ದಿನಗಳ ಕಾಲ ನಡೆಯಲಿದೆ. ಈ ಬಾರಿ ನಡೆಯಲಿರುವ ಅಧಿವೇಶನಕ್ಕೆ ಸ್ಪೀಕರ್ ಯು.ಟಿ ಖಾದರ್ (Speaker UT Khader) ತಮ್ಮ ಕೆಲವು ಸ್ಪೆಶಲ್ ಸಿದ್ಧತೆಗಳ ಮೂಲಕ ಹೊಸ ʼಖದರ್ʼ ತಂದಿದ್ದಾರೆ.
ಕಲಾಪಕ್ಕೆ ಸ್ಪೀಕರ್ ಯು.ಟಿ ಖಾದರ್ ಅವರು ಸಕಲ ಸಿದ್ಧತೆಗಳನ್ನು ನಡೆಸಿದ್ದು, ವಿಧಾನ ಸೌಧದ ಮುಖ್ಯದ್ವಾರದ ಮೆರುಗು ಹೆಚ್ಚಿಸಿದ್ದಾರೆ. ಮೈಸೂರು ಅರಮನೆಯಲ್ಲಿ ಇರುವ ರೀತಿ ಮುಖ್ಯದ್ವಾರವನ್ನು ರೆಡಿ ಮಾಡಿಸಿದ್ದಾರೆ. ವಿಧಾನ ಸಭೆಯ ಒಳಗೂ ಕೆಲವು ಬದಲಾವನೆಗಳನ್ನು ಮಾಡಿಸಿದ್ದು, ಶಾಸಕರ ಹಾಜರಾತಿ ಹೆಚ್ಚಿಸಲೂ ಮೆಗಾ ಪ್ಲಾನ್ ಮಾಡಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಹೊಸ ಪ್ರಯೋಗ ಮಾಡಿಸಿರುವ ಸ್ಪೀಕರ್ ಖಾದರ್, ಮೂರು ಬಾಗಿಲಿಗೂ ಕ್ಯಾಮರಾ ಅಳವಡಿಸಿದ್ದಾರೆ. ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಕಡೆ ಕ್ಯಾಮರಾ ಅಳವಡಿಕೆ ಮಾಡಿಸಿದ್ದಾರೆ. ಇದು ಶಾಸಕರು ಹಾಜರಾತಿ ಹೆಚ್ಚಿಸಲು ಅನುಕೂಲ ಎನ್ನಲಾಗಿದೆ. ಯಾವ ಶಾಸಕ ಎಷ್ಟು ಬಾರಿ ಒಳಗಡೆ ಬಂದರು, ಸದನದಿಂದ ಎಷ್ಟು ಬಾರಿ ಹೊರಗಡೆ ಹೋದರು ಅನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಲು ಅನುಕೂಲವಾಗಲಿದೆ. ಆ ಮೂಲಕ ಸದನಕ್ಕೆ ಬರುವ ಸಕ್ರಿಯ ಶಾಸಕರನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.
ಸ್ಪೀಕರ್ ಖಾದರ್ ಈ ಬಗ್ಗೆ ಮಾತನಾಡಿದ್ದು, ವಿಧಾನ ಸಭೆಯ ಹಿಂಬಾಗಿಲು ಬದಲಿಸುವ ಕೆಲಸ ಮಾಡಿದ್ದೇವೆ. ವಿಧಾನ ಸೌಧದ ಸೌಂದರ್ಯ ಹೆಚ್ಚಿಸಲು ಪ್ಲ್ಯಾನ್ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಜುಲೈ 15ರಂದು ಮುಖ್ಯದ್ವಾರದ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮೊದಲು ಬಂದವರನ್ನು ಮಾತ್ರ ಗುರುತಿಸುತ್ತೀರಿ ಎಂಬ ಅಪವಾದ ಇತ್ತು. ಈಗ ತಡವಾಗಿ ಹೋದವರನ್ನೂ ಗುರುತಿಸಲು ಸೂಚಿಸಿದ್ದೇನೆ. ದಿನಕ್ಕೆ ವಿಧಾನ ಸಭೆ ಒಳಗೆ ಎಷ್ಟು ಬಾರಿ ಒಳಗೆ ಬಂದರು, ಎಷ್ಟು ಬಾರಿ ಹೊರಗೆ ಹೋದರು ಎಂಬ ಮಾಹಿತಿ ಸಂಗ್ರಹ ಮಾಡುತ್ತೇವೆ. ಜನಪ್ರತಿನಿಧಿಗಳಿಗೆ ಈ ಬಾರಿ ಚೆಸ್ ಗೇಮ್ ಏರ್ಪಾಡು ಮಾಡಿದ್ದೇವೆ. ಇದರಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರು ಭಾಗವಹಿಸಬಹುದು. ಕಾರ್ಯ ದಕ್ಷತೆ ತೋರಿದವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಶೀಘ್ರದಲ್ಲೇ ಕೊಡುತ್ತೇವೆ ಎಂದು ತಿಳಿಸಿದರು.
ಕಳೆದ ಬಾರಿ ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ (Belagavi Assembly Session) ಶಾಸಕರು, ಸಚಿವರ ಹಾಜರಾತಿಗಾಗಿ ಯು.ಟಿ. ಖಾದರ್ (Speaker UT Khader) ಕೆಲವು ವಿಶೇಷತೆಗಳನ್ನು ಅಳವಡಿಸಿದ್ದರು. ಪ್ರತಿ ದಿನ ಸದನಕ್ಕೆ ಬೇಗ ಬರುವ ಸದಸ್ಯರಿಗೆ ಬಹುಮಾನ ಘೋಷಿಸಿದ್ದರು. ಅಲ್ಲದೆ, ಅತಿ ಹೆಚ್ಚು ಗೈರು ಹಾಜರಾಗುವ ಸದಸ್ಯರಿಗೂ ಪ್ರಶಸ್ತಿ ಘೋಷಿಸಲಾಗಿತ್ತು! ಪ್ರತಿ ನಿತ್ಯ ಅಧಿವೇಶನಕ್ಕೆ ಬೇಗ ಹಾಜರಾಗುವ ಸದಸ್ಯರಿಗೆ ಟೀ ಕಪ್‌ಗಳನ್ನು ನೀಡಲಾಗಿತ್ತು. ಅದರಲ್ಲಿ ರಾಷ್ಟ್ರ ಹಾಗೂ ರಾಜ್ಯದ ಲಾಂಛನಗಳು ಇವೆ.
ಇದನ್ನೂ ಓದಿ: Valmiki Corporation Scam: ಮಾಜಿ ಸಚಿವ ನಾಗೇಂದ್ರ 5 ದಿನಗಳ ಕಾಲ ಇಡಿ ಕಸ್ಟಡಿಗೆ